ಗ್ಯಾರಂಟಿ ಎಫೆಕ್ಟ್‌: ಪ್ರವಾಸಿ ತಾಣಗಳಿಗೆ ಮಹಿಳಾ ಪ್ರವಾಸಿಗರ ಲಗ್ಗೆ

By Kannadaprabha News  |  First Published Jun 20, 2023, 10:30 PM IST

ಬಸ್‌ ನಿಲ್ದಾಣದಲ್ಲಿಯಂತೂ ನಿತ್ಯವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡುಬರುತ್ತಿದೆ. ಬಹುತೇಕ ಎಲ್ಲ ಬಸ್‌ಗಳು ರಸ್‌ ಆಗುತ್ತಿವೆ. 


ಬಸವರಾಜ ಎಸ್‌.ನಂದಿಹಾಳ

ಬಸವನಬಾಗೇವಾಡಿ(ಜೂ.20):  ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿ ಬಂದ ದಿನದಿಂದಲೂ ರಾಜ್ಯದ ಬಹುತೇಕ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಸ್ಥಳಗಳಿಗೆ ಮಹಿಳಾ ಪ್ರವಾಸಿಗರ ಹೆಚ್ಚು ಹೋಗುತ್ತಿದ್ದಾರೆ.

Tap to resize

Latest Videos

ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿರುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನಕ್ಕೆ ಈ ಯೋಜನೆ ಜಾರಿಯಾದ ನಂತರ ನಿತ್ಯವೂ ಮಹಿಳಾ ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ದೇವಸ್ಥಾನದ ದಾಸೋಹ ಭವನದಲ್ಲಿ ಪುರುಷರಕ್ಕಿಂತ ಹೆಚ್ಚಾಗಿ ಮಹಿಳೆಯರು ಸೋಮವಾರ ಹೆಚ್ಚು ಕಂಡುಬಂದರು.

ಉಚಿತ ಬಸ್‌ ಪ್ರಯಾಣ: ಮಹಿಳೆಯರಿಗೆ ಶಕ್ತಿ ತಂದ ಫ್ರೀ ಸಂಚಾರ..!

ಕುಂದಗೋಳ ತಾಲೂಕಿನ ಬ್ಯಾಹಟ್ಟಿಗ್ರಾಮದಿಂದ 20 ಮಹಿಳೆಯರು ಕೂಡಿಕೊಂಡು ಭಾನುವಾರ ಸಂಜೆಯೇ ಪಟ್ಟಣಕ್ಕೆ ಆಗಮಿಸಿ ರಾತ್ರಿ ದೇವಸ್ಥಾನದಲ್ಲಿ ವಸತಿ ಮಾಡಿ ಸೋಮವಾರ ಬೆಳಗ್ಗೆ ದೇವರಿಗೆ ಅಭಿಷೇಕ ಮಾಡಿಸಿ ಪೂಜೆ ನಂತರ ಮಧ್ಯಾನ್ಹ ದಾಸೋಹದಲ್ಲಿರುವ ಪ್ರಸಾದ ಸೇವಿಸಿದರು. ಮಧ್ಯಾನ್ಹದ ನಂತರ ಗುಡ್ಡಾಪೂರದ ದಾನಮ್ಮ ದೇವಿ ದರ್ಶನಕ್ಕೆ ತೆರಳಿದರು.

ಈ ತಂಡದಲ್ಲಿರುವ ರತ್ನವ್ವ ಅಂಗಡಿ, ಸುಮಂಗಲಾ ಹಿರೇಮಠ, ಶಿವಮ್ಮ ಬೂದಿಹಾಳ ಅವರನ್ನು ಮಾತನಾಡಿಸಿದಾಗ, ಸಿಎಂ ಸಿದ್ದರಾಮಯ್ಯನವರು ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿರುವುದು ಸಂತಸ ಸಂಗತಿ. ಈಗ ಮಳೆಯು ಆಗಿಲ್ಲ. ಹೇಗಿದ್ದರೂ ಬಸ್‌ನಲ್ಲಿಯೂ ಉಚಿತವಾಗಿ ಪ್ರಯಾಣ ಮಾಡಬಹುದಾದದ್ದರಿಂದ ನಾವೆಲ್ಲರೂ ಕೂಡಿಕೊಂಡು ನಾಲ್ಕು ದಿನ ದೇವರ ದರ್ಶನಕ್ಕೆ ಹೋದರಾಯಿತು ಎಂದು ಬಂದಿದ್ದೇವೆ. ನಮ್ಮ ಮನೆಯ ದೇವರಾದ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದುಕೊಂಡೆವು. ಮುಂದೆ ಗುಡ್ಡಾಪೂರ ದಾನಮ್ಮ ದೇವಿ ದರ್ಶನ ಪಡೆದುಕೊಳ್ಳಲು ಇಂದು ಹೋಗುತ್ತೇವೆ. ಅಲ್ಲಿ ಇಂದು ರಾತ್ರಿ ವಾಸ್ತವ್ಯ ಇದ್ದು. ಮುಂದೆ ಪಂಡರಾಪೂರಕ್ಕೆ ಹೋಗುವ ಆಲೋಚನೆ ಇದೆ. ನಂತರ ನಮ್ಮ ಊರಿಗೆ ಹೋಗುವುದಾಗಿ ಹೇಳಿದರು.

ಉಚಿತ ಬಸ್‌ ಪ್ರಯಾಣದ ಎಫೆಕ್ಟ್‌: ಮಹಿಳೆಯರ ಶಕ್ತಿ ಎದುರು ರೈಲ್ವೆ ನಿಶ್ಯಕ್ತ..!

ಇವರೊಂದಿಗೆ ಆಗಮಿಸಿದ್ದ ಪುರುಷ ಪ್ರವಾಸಿಗ ಚರಂತಯ್ಯ ಹಿರೇಮಠ ಅವರನ್ನು ಮಾತನಾಡಿಸಿದಾಗ, ಮುಂಗಾರು ಆರಂಭವಾದರೂ ಮಳೆಯಿಲ್ಲ. ಮಳೆಯಾದರೆ ನಮಗೆ ಬಿಡುವಿಲ್ಲದ ಕೃಷಿ ಚಟುವಟಿಕೆಗಳು ಇರುತ್ತಿದ್ದವು. ಈಗ ಮಳೆಯಿಲ್ಲದೇ ಇರುವದರಿಂದಾಗಿ ನಮ್ಮ ಎಲ್ಲ ಮಹಿಳಾ ಸಂಬಂಧಿಕ ಬಳಗವನ್ನು ನಾಲ್ಕು ದಿನಗಳ ಕಾಲ ದೇವರ ದರ್ಶನಕ್ಕೆ ಬಂದಿದ್ದೇವೆ. ನನ್ನ ತಂಗಿಯನ್ನು ಕೆರೂರಗೆ ಕೊಡಲಾಗಿದೆ. ಅವಳು ಇಂದು ನಮ್ಮನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದಾಳೆ. ಅವಳನ್ನು ನಾವೆಲ್ಲರೂ ಭೇಟಿಯಾದೆವು. ಮುಂದೆ ನಾವೆಲ್ಲರೂ ಗುಡ್ಡಾಪೂರಕ್ಕೆ ಹೋಗುತ್ತಿರುವುದಾಗಿ ಹೇಳಿದರು.

ಪಟ್ಟಣದ ಬಸ್‌ ನಿಲ್ದಾಣದಲ್ಲಿಯಂತೂ ನಿತ್ಯವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡುಬರುತ್ತಿದೆ. ಬಹುತೇಕ ಎಲ್ಲ ಬಸ್‌ಗಳು ರಸ್‌ ಆಗುತ್ತಿವೆ. ಭಾನುವಾರ ಅಮವಾಸ್ಯೆ ದಿನವಂತೂ ಹೆಚ್ಚು ಪ್ರಯಾಣಿಕರು ಕಂಡುಬಂದರು.

click me!