
ಟಿ. ನರಸೀಪುರ (ಡಿ.18): ಪಟ್ಟಣದಿಂದ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಕುತೂಹಲಕಾರಿ ಘಟನೆ ನಡೆದಿದೆ.
ಪಟ್ಟಣದ ವಿವೇಕಾನಂದನಗರದ ಆಸ್ಪತ್ರೆ ಪಕ್ಕದ ವಾಟರ್ ಟ್ಯಾಂಕ್ ಬಳಿ ವಾಸವಾಗಿದ್ದ ಟೀ ಕ್ಯಾಂಟೀನ್ ಮಾಲೀಕ ಎಸ್. ನಟರಾಜು ಅವರ ಪತ್ನಿ ಮಂಜುಳಾ ಎಂಬವರೇ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಗೃಹಿಣಿಯಾಗಿದ್ದು, ಗಂಡನೊಂದಿಗೆ ಬಾಳಲಾರೆ ಎಂಬ ಆಕೆಯ ನಿಲುವು ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
ಮಂಜುಳಾ ಅವರ ಪತಿ ನಟರಾಜು ನ. 30ರಂದು ನನ್ನ ಪತ್ನಿ ಮನೆಯಿಂದ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಎಎಸ್‌ಐ ಭಾನುಪ್ರಕಾಶ್ ಆಕೆ ಪತ್ತೆಗಾಗಿ ಕಾರ್ಯಯೋಜನೆ ರೂಪಿಸಿದ್ದರು.
ಆಟೋದಲ್ಲಿ ಬಂದ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ...
ಮಂಜುಳಾ ಇರುವಿಕೆಯನ್ನು ಮೊಬೈಲ್ ಟವರ್ ಮೂಲಕ ಪತ್ತೆ ಹಚ್ಚಿದ ಪೊಲೀಸರು ಕೊನೆಗೆ ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ತನ್ನ ಪ್ರಿಯಕರ ರಮೇಶ್ ಎಂಬಾತನೊಂದಿಗೆ ಇರುವುದನ್ನು ಖಚಿತ ಪಡಿಸಿಕೊಂಡು ಅಲ್ಲಗೆ ತೆರಳಿ ಇಬ್ಬರನ್ನು ಪಟ್ಟಣ ಠಾಣೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಫೇಸ್‌ಬುಕ್ ಪ್ರೇಮ
ಬಸವನ ಬಾಗೇವಾಡಿಯಿಂದ ಪಟ್ಟಣದ ಪೊಲೀಸ್ ಠಾಣೆಗೆ ಇಬ್ಬರನ್ನು ಕರೆತಂದು ವಿಚಾರಣೆ ಮಾಡಿದಾಗ ಇವರಿಬ್ಬರೂ ನಾಲ್ಕು ವರ್ಷಗಳ ಹಿಂದೆಯೇ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿತ್ತು ಎಂಬ ಅಂಶ ಬೆಳಕಿಗೆ ಬಂತು. ಕಳೆದ ಐದು ವರ್ಷಗಳ ಹಿಂದೆ ನಟರಾಜುವನ್ನು ವಿವಾಹವಾಗಿದ್ದ ಮಂಜುಳಾಗೆ ಮಕ್ಕಳಿರಲಿಲ್ಲ. ಇದೇ ವೇಳೆ ಆಟೋ ಚಾಲಕನಾಗಿದ್ದ ರಮೇಶ್ ಫೇಸ್‌ಬುಕ್‌ನಲ್ಲಿ ಈಕೆಗೆ ಪರಿಚಯವಾಗಿದ್ದಾನೆ. ಇಬ್ಬರ ನಡುವೆ ನಾಲ್ಕು ವರ್ಷಗಳಿಂದ ಚಾಟಿಂಗ್ ನಡೆದಿತ್ತೆನ್ನಲಾಗಿದೆ. ಅಂತಿಮವಾಗಿ ಸ್ನೇಹ ಪ್ರೇಮಕ್ಕೆ ತಿರುಗಿ ರಮೇಶ್‌ನೊಂದಿಗೆ ಹೋಗಲು ನಿರ್ಧರಿಸಿದ ಮಂಜುಳಾ ಆತನನ್ನು ನರಸೀಪುರಕ್ಕೆ ಕರೆಸಿಕೊಂಡು ಆತನೊಂದಿಗೆ ಪರಾರಿಯಾಗಿದ್ದಾಳೆ.
ಇತ್ತ ಪತಿ ನಟರಾಜು ಪತ್ನಿ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಹರ ಸಾಹಸ ಮಾಡಿ ಪತ್ತೆ ಹಚ್ಚಿ ಇಬ್ಬರನ್ನೂ ಕರೆ ತಂದು ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಪತ್ನಿ ಮಂಜುಳಾ ತನ್ನ ಪತಿ ನಟರಾಜು ಮದುವೆಯಾದಾಗಿನಿಂದ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಬೇಕು-ಬೇಡಗಳನ್ನು ಕೇಳುತ್ತಿರಲಿಲ್ಲ. ಇದರಿಂದ ಬೇಸತ್ತು ಪ್ರಿಯಕರನೊಂದಿಗೆ ಹೋಗಿದ್ದು, ಈಗಲೂ ಸಹ ಪತಿಯೊಂದಿಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದು, ಪೊಲೀಸರ ಮನವೊಲಿಕೆಗೆ ಸೊಪ್ಪು ಹಾಕದೇ ಪ್ರಿಯಕರನೊಂದಿಗೆ ಹೋಗುತ್ತೇನೆ ಎಂದಿರುವುದರಿಂದ ಮತ್ತೊಂದು ಸುತ್ತಿನ ಮನವೊಲಿಕೆಗೆ ಪ್ರಯತ್ನಿಸಿ ಅದಕ್ಕೆ ಒಪ್ಪದಿದ್ದಲ್ಲಿ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.