ಹಲವು ತಿಂಗಳಿಂದ ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ| ಸತ್ತಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ| ಕಣ್ಣುಬಿಟ್ಟು ನೋಡಿದ ಮಹಿಳೆ| ಇದು ಯಲ್ಲಮ್ಮದೇವಿ ಪವಾಡ ಎಂದ ಗ್ರಾಮಸ್ಥರು|
ಬೆಳಗಾವಿ(ಜ.09): ಸತ್ತಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆ ಸಿದ್ಧತೆಯಲ್ಲಿದ್ದಾಗ ಮಹಿಳೆ ಕಣ್ಣುಬಿಟ್ಟ ಅಚ್ಚರಿಯ ಘಟನೆ ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
55 ವರ್ಷದ ಮಾಲು ಯಲ್ಲಪ್ಪ ಚೌಗುಲೆ ಎಂಬುವರೇ ಸತ್ತು ಬದುಕಿದ ಮಹಿಳೆಯಾಗಿದ್ದಾರೆ. ಹಲವು ತಿಂಗಳಿಂದ ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಾಲು ಯಲ್ಲಪ್ಪ ಚೌಗುಲೆ ಅವರನ್ನ ಜನವರಿ 7ರಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಾಲು ಅವರಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾಲು ಅವರು ಬದುಕುವುದು ಗ್ಯಾರಂಟಿ ಇಲ್ಲ ಅಂತ ವೈದ್ಯರು ಹೇಳಿದ್ದರಂತೆ.
ಹೀಗಾಗಿ ಕುಟುಂಬಸ್ಥರು ಆ್ಯಂಬುಲೆನ್ಸ್‌ನಲ್ಲಿ ಮಾಲು ಅವರನ್ನ ಮನೆಗೆ ಕರೆದುಕೊಂಡು ಬರುತ್ತಿದ್ದರು. ಆ್ಯಂಬುಲೆನ್ಸ್‌ನಲ್ಲಿ ಕರೆತರುವ ವೇಳೆ ಮಾಲು ಅವರು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಮಹಿಳೆ ಮೃತಪಟ್ಟಿದ್ದಾರೆ ಎಂದು ಮಾಲು ಅವರ ಕುಟುಂಬಸ್ಥರು ತಮ್ಮ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹಿಳೆಯ ಸಂಬಂಧಿಕರೆಲ್ಲರೂ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದರು. ವಿಷಯ ತಿಳಿದು ಸವದತ್ತಿಯಿಂದ ಮಹಿಳೆಯ ಸಂಬಂಧಿಕರು ಮುಚ್ಚಂಡಿ ಗ್ರಾಮಕಕ್ಕೆ ಆಗಮಿಸಿದ್ದರು. ಬುಧವಾರ ರಾತ್ರಿ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರು ತವರು ಮನೆ ಸೀರೆ, ಹೂವಿನ ಮಾಲೆಗಳನ್ನು ತಂದಿದ್ದರು.
ಕುಟುಂಬಸ್ಥರು ಅಂತ್ಯಕ್ರಿಯೆ ಸಿದ್ಧತೆಯಲ್ಲಿದ್ದಾಗ ಮಹಿಳೆ ಕಣ್ಣು ಬಿಟ್ಟಿದ್ದಾರೆ. ಇದರಿಂದ ಜನ ಕೆಲ ಕ್ಷಣ ತಬ್ಬಿಬ್ಬಾಗಿದ್ದಾರೆ. ಮಹಿಳೆ ಕಣ್ಣುಬಿಟ್ಟಿದ್ದು ನೋಡಿದ ಗ್ರಾಮಸ್ಥರೆಲ್ಲ ಇದು ಯಲ್ಲಮ್ಮದೇವಿ ಪವಾಡ ಎಂದು ಹೇಳುತ್ತಿದ್ದಾರೆ.