35 ವರ್ಷದ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿ| ಇಬ್ಬರಿಗಷ್ಟೇ ದರ್ಶನಕ್ಕೆ ಅವಕಾಶ| ಈ ಮನಕಲಕುವ ಘಟನೆಗೆ ಸಾಕ್ಷಿಯಾದ ಸುಮ್ಮನಹಳ್ಳಿಯ ವಿದ್ಯುತ್ ಚಿತಾಗಾರ| ಕೊರೋನಾ ಬಗ್ಗೆ ನಿರ್ಲಕ್ಷ್ಯ ಸಲ್ಲದು|
ಬೆಂಗಳೂರು(ಏ.18): ಕೊರೋನಾ ಸೋಂಕಿಗೆ ಬಲಿಯಾಗಿರುವ ಈ ಹುಡುಗ ಕೆಲಸಗಾರನಾದರೂ ಮನೆಯಲ್ಲಿ ಮಗನ ಹಾಗೆ ಇದ್ದ. ಈಗ ಹತ್ತಿರ ತೆರಳಿ ಕಡೆಯ ಬಾರಿ ಮುಖ ನೋಡಲು ಆಗುತ್ತಿಲ್ಲ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟರು.
ಶುಕ್ರವಾರ ಸುಮ್ಮನಹಳ್ಳಿಯ ವಿದ್ಯುತ್ ಚಿತಾಗಾರದ ಆವರಣ ಈ ಮನಕಲಕುವ ಘಟನೆಗೆ ಸಾಕ್ಷಿಯಾಯಿತು. ಕಾಮಾಕ್ಷಿಪಾಳ್ಯ ನಿವಾಸಿ 35 ವರ್ಷದ ವ್ಯಕ್ತಿ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಸಿರಾಟದ ಸಮಸ್ಯೆ ತೀವ್ರವಾದ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
undefined
ಕೊರೋನಾ 2ನೇ ಅಲೆ: ಮನೆಗೇ ಹೋಗಿ ಕೋವಿಡ್ ಟೆಸ್ಟ್..!
ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೂ ಮುನ್ನ ಕುಟುಂಬದ ಇಬ್ಬರು ಸದಸ್ಯರಿಗೆ ಮಾತ್ರ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ನಡುವೆ ಈ ಸಾವಿನ ವಿಚಾರ ತಿಳಿದು ಅಂತಿಮ ದರ್ಶನ ಪಡೆಯಲು ಚಿತಾಗಾರದ ಬಳಿ ಬಂದಿದ್ದ ಮಹಿಳೆಗೆ ಅಂತಿಮ ದರ್ಶನ ಸಾಧ್ಯವಾಗಲಿಲ್ಲ. ಹೀಗಾಗಿ ಚಿತಾಗಾರದ ಆವರಣದಲ್ಲಿ ಆ ಮಹಿಳೆ ಬಿಕ್ಕಿ ಬಿಕ್ಕಿ ಅತ್ತರು. ಒಳ್ಳೆಯ ಹುಡುಗ. ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಿದ್ದರು. ಕೊನೆಯದಾಗಿ ಆತನ ಮುಖ ನೋಡಲು ಸಾಧ್ಯವಾಗಲಿಲ್ಲ ಮಮ್ಮಲ ಮರುಗಿದರು. ಇದರೊಂದಿಗೆ ಮೃತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಕೊರೋನಾ ಬಗ್ಗೆ ನಿರ್ಲಕ್ಷ್ಯ ಸಲ್ಲದು
ಸುಮ್ಮನಹಳ್ಳಿ ಚಿತಾಗಾರದ ಬಳಿ ಸ್ನೇಹಿತನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಬೆಡ್ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿದ ಘಟನೆ ಜರುಗಿತು. ಕೋವಿಡ್‌ನಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಕಳೆದ ಬಾರಿಯ ಹಾಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕು. ಜನರಿಗೆ ಅನುಕೂಲವಾಗುವಂತೆ ಕೋವಿಡ್ ಸಹಾಯವಾಣಿಗಳನ್ನು ಸ್ಥಾಪಿಸಬೇಕು. ಕಳೆದ ಬಾರಿ ತಮ್ಮ ತಾಯಿಗೆ ಕೊರೋನಾ ಸೋಂಕು ದೃಢಪಟ್ಟಕೇವಲ ಎರಡು ತಾಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತ್ತು. ಈ ಬಾರಿ ಸೋಂಕು ಹೆಚ್ಚಳವಾಗುತ್ತಿದ್ದು, ಸರ್ಕಾರ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಸಹ ಕೊರೋನಾ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದರು.