ಕೊರೋನಾ 2ನೇ ಅಲೆ: ಮನೆಗೇ ಹೋಗಿ ಕೋವಿಡ್‌ ಟೆಸ್ಟ್‌..!

By Kannadaprabha News  |  First Published Apr 18, 2021, 9:05 AM IST

ಮನೆಗಳಿಗೆ ತೆರಳಿ ಕೋವಿಡ್‌ ಪರೀಕ್ಷೆ| ಲಸಿಕೆ ಅಭಿಯಾನಕ್ಕೆ ಮನವೊಲಿಸಿ| ಜನರಿಗೆ ನೆರವಿನ ಹಸ್ತ ನೀಡಿ| ಜನರು-ಆಸ್ಪತ್ರೆ ನಡುವೆ ಸಂರ್ಪಕ ಸೇತುವೆಯಾಗಿ| ವೈದ್ಯಕೀಯ ಸೇವೆ, ಔಷಧ ಇತ್ಯಾದಿ ಸೇವೆ ಸುಲಭವಾಗಿ ಸಿಗುವಂತೆ ಸ್ಪಂದಿಸಬೇಕು: ಅಶ್ವತ್ಥನಾರಾಯಣ| 


ಬೆಂಗಳೂರು(ಏ.18): ಕೋವಿಡ್‌ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಜನರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಶನಿವಾರ ಬಿಜೆಪಿ ಮುಖಂಡರ ಸಭೆ ನಡೆಸಿದ್ದಾರೆ.

ಸಾರ್ವಜನಿಕರಿಗೆ ಪಕ್ಷದಿಂದ ನೆರವಿನ ಹಸ್ತ ಚಾಚುವುದು ಮಾತ್ರವಲ್ಲದೆ, ಕ್ಷೇತ್ರದಲ್ಲಿ ಜನರು ಮತ್ತು ಆಸ್ಪತ್ರೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಲಸಿಕೆ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ಮುಖಂಡರಿಗೆ ಸೂಚಿಸಿದ್ದಾರೆ.

Latest Videos

undefined

ಕೊರೋನಾ ಸಾವಿನ ಪ್ರಮಾಣ ಹೆಚ್ಚಳ: ಲಾಕ್‌ಡೌನ್‌ ಬಿಟ್ಟು ಕಠಿಣ ಕ್ರಮ, ಸಚಿವ ಸುಧಾಕರ್‌

ಕ್ಷೇತ್ರದಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುವುದನ್ನು ತಡೆಯಲು ಪಕ್ಷದಿಂದ ಎಲ್ಲ ಪ್ರಯತ್ನ ಮಾಡಬೇಕು. ಕಾರ್ಯಕರ್ತರು ಮನೆ-ಮನೆಗೂ ಭೇಟಿ ನೀಡಿ ಕೆಮ್ಮು, ನೆಗಡಿ, ಇತ್ಯಾದಿ ಯಾವುದೇ ರೋಗ ಲಕ್ಷಣಗಳಿದ್ದವರನ್ನು ಪತ್ತೆ ಹಚ್ಚಿ ಅವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಬೇಕು. ರೋಗದ ಸೋಂಕು ತಗುಲಿದ ಕೂಡಲೇ ಚಿಕಿತ್ಸೆ ಪಡೆಯಬೇಕು. ಉಲ್ಬಣ ಸ್ಥಿತಿಗೆ ರೋಗ ಬಂದಾಗ ನಿಯಂತ್ರಿಸುವುದು ಕಷ್ಟ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಿ. ಕೋವಿಡ್‌ ಪರೀಕ್ಷಾ ಕೇಂದ್ರಗಳು, ಲಸಿಕೆ ಹಾಕುವ ಕೇಂದ್ರಗಳ ಬಗ್ಗೆ ಜನರಿಗೆ ಕರಪತ್ರ ಹಂಚುವ ಮೂಲಕ ಮಾಹಿತಿ ನೀಡಿ. ಜತೆಗೆ, ವಾರ್ಡ್‌ವಾರು ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಕ್ಷೇತ್ರದಲ್ಲಿರುವ ಹಿರಿಯ ನಾಗರಿಕರು, ಅಂಗವಿಕಲರು, ದೈಹಿಕ ಅಥವಾ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ನೆರವಾಗಬೇಕು. ವೈದ್ಯಕೀಯ ಸೇವೆ, ಔಷಧ ಇತ್ಯಾದಿ ಸೇವೆ ಸುಲಭವಾಗಿ ಸಿಗುವಂತೆ ಸ್ಪಂದಿಸಬೇಕು. ಕೋವಿಡ್‌ ಸೋಂಕು ಬಂದಾಗ ಲಾಕ್‌ಡೌನ್‌ ಇದ್ದ ಸಂದರ್ಭದಲ್ಲಿ ಅರ್ಪಣಾ ಮನೋಭಾವದಿಂದ ನಾವೆಲ್ಲರೂ ಕೆಲಸ ಮಾಡಿದ್ದೆವು. ಅದೇ ರೀತಿಯಲ್ಲಿ ಜನರ ಸೇವೆ ಮಾಡಬೇಕು. ಯಾವುದೇ ಕಾರಣಕ್ಕೂ ಕೋವಿಡ್‌ನಿಂದ ಪ್ರಾಣ ನಷ್ಟಆಗಬಾರದು ಎಂದರು. ಸಭೆಯಲ್ಲಿ ಪಕ್ಷದ ಉತ್ತರ ವಿಭಾಗದ ಉಪಾಧ್ಯಕ್ಷ ಡಾ. ವಾಸು, ಮಲ್ಲೇಶ್ವರ ಕ್ಷೇತ್ರದ ಮಂಡಲ ಅಧ್ಯಕ್ಷ ಕಾವೇರಿ ಕೇದಾರನಾಥ್‌ ಇನ್ನಿತರರಿದ್ದರು.
 

click me!