ಹಣ ಕಿತ್ತುಕೊಂಡು ಅಂತ್ಯ ಸಂಸ್ಕಾರ ಮಾಡಿದ ಚಿತಾಗಾರ ಸಿಬ್ಬಂದಿ| ಸಂಬಂಧಿಕರ ಶವ ಸಂಸ್ಕಾರಕ್ಕೆ ಬಡ್ಡಿ ಸಾಲ ಮಾಡಿದ ಮಹಿಳೆ| ಹಣ ನೀಡಿದರೆ ಮಾತ್ರ ಶವ ಅಂತ್ಯಕ್ರಿಯೆ ನೆರವೇರಿಸುವುದಾಗಿ ಬೆದರಿಕೆ ಹಾಕಿದ ಚಿತಾಗಾರ ಸಿಬ್ಬಂದಿ| ಹಣ ಪೀಕಲು ಮುಂದಾದ ಆ್ಯಂಬುಲೆನ್ಸ್ ಚಾಲಕ|
ಬೆಂಗಳೂರು(ಏ.24): ಬೀದಿ ಬದಿ ಮಹಿಳಾ ವ್ಯಾಪಾರಿಯೊಬ್ಬರು ಬಡ್ಡಿ ಸಹಿತ ಸಾಲ ತಂದು ಆ್ಯಂಬುಲೆನ್ಸ್‌ಗೆ 5 ಸಾವಿರ ಹಾಗೂ ಚಿತಾಗಾರ ಸಿಬ್ಬಂದಿಗೆ 3 ಸಾವಿರ ನೀಡಿ ಮೃತ ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿದ ದಾರುಣ ಘಟನೆ ಶುಕ್ರವಾರ ಯಲಹಂಕ ಮೇಡಿ ಚಿತಾಗಾರದಲ್ಲಿ ನಡೆದಿದೆ.
ರಾಧಮ್ಮ ಎಂಬ ರಸ್ತೆ ಬದಿ ವ್ಯಾಪಾರಿಯೊಬ್ಬರ ಸಂಬಂಧಿಕರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಶವವನ್ನು ಆ್ಯಂಬುಲೆನ್ಸ್ ಮೂಲಕ ಯಲಹಂಕ ಮೇಡಿ ಚಿತಾಗಾರಕ್ಕೆ ತಂದಿದ್ದಾರೆ. ಈ ವೇಳೆ ಹಣ ನೀಡಿದರೆ ಮಾತ್ರ ಶವ ಅಂತ್ಯಕ್ರಿಯೆ ನೆರವೇರಿಸುವುದಾಗಿ ಚಿತಾಗಾರ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪೂರಕವಾಗಿ ಆ್ಯಂಬುಲೆನ್ಸ್ ಚಾಲಕನೂ ಹಣ ಪೀಕಲು ಮುಂದಾಗಿದ್ದಾರೆ.
ಕೊರೋನಾರ್ಭಟ: 12 ನಿಮಿಷಕ್ಕೊಬ್ಬ ಕೊರೋನಾ ಸೋಂಕಿತ ಸಾವು..!
ಸಿಬ್ಬಂದಿ ಮಾತಿಗೆ ಕಣ್ಣೀರಿಟ್ಟ ರಾಧಮ್ಮ, ನಾವು ಬಡವರು ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಇಷ್ಟಾದರೂ ಸಿಬ್ಬಂದಿ ಕಲ್ಲು ಮನಸ್ಸು ಮರುಗಿಲ್ಲ. ಅನಿವಾರ್ಯವಾಗಿ ರಾಧಮ್ಮ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಬಡ್ಡಿಗೆ ಸಾಲ ತಂದು ಹಣ ನೀಡಿದ್ದಾರೆ.
ಪ್ರತಿಭಟನೆ:
ಹಣ ಪಡೆದ ಚಿತಾಗಾರ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಪ್ರಜಾ ಪರಿವರ್ತನಾ ವೇದಿಕೆ ಸದಸ್ಯರು ಸ್ಥಳದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಬ್ಬಂದಿ ಹಾಗೂ ವೇದಿಕೆ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಡವರನ್ನು ದೋಚುವ ಚಿತಾಗಾರ ಸಿಬ್ಬಂದಿಗಳ ಸುಲಿಗೆ ನಿಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.