ಸಾಂಸರಿಕ ಕಲಹದಿಂದ ಬೇಸತ್ತು ಮಹಿಳೆಯೋರ್ವರು 21ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು [ಡಿ.04]: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸರಗೊಂಡು ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರ ಪತ್ನಿ ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನ 21ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ನಗರದ ಸಂಪಿಗೆಹಳ್ಳಿ ಸಮೀಪ ನಡೆದಿದೆ.
ಭಾರತ್ ಸಿಟಿ ನಿಕೋ ಹೋಮ್ಸ್ ಅಪಾರ್ಟ್‌ಮೆಂಟ್ ನಿವಾಸಿ ಚಾಂದಿನಿ ಸಿಂಗ್ (26) ಮೃತ ದುರ್ದೈವಿ. ಮೃತ ಚಾಂದಿನಿ ಸಿಂಗ್ ಮೂಲತಃ ಮಹಾರಾಷ್ಟ್ರದವರಾಗಿದ್ದು, ಎಂಟು ತಿಂಗಳ ಹಿಂದೆ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ರಿತೇಶ್ ಸಿಂಗ್ ಜತೆ ವಿವಾಹವಾಗಿದ್ದರು. ಮದುವೆ ಬಳಿಕ ರಿತೇಶ್ ಕುಟುಂಬದ ಜತೆ ಅವರು ನೆಲೆಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇತ್ತೀಚೆಗೆ ಸಾಂಸಾರಿಕ ವಿಷಯಗಳಿಗೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ಕಾರಣಕ್ಕೆ ಆಗಾಗ್ಗೆ ಸತಿ-ಪತಿ ಜಗಳವಾಡುತ್ತಿದ್ದರು. ಸೋಮವಾರ ಬೆಳಗ್ಗೆ 11.30 ಗಂಟೆ ಸುಮಾರಿಗೆ ರಿತೇಶ್ ಮತ್ತು ಚಾಂದಿನಿ ಮಧ್ಯೆ ಗಲಾಟೆ ಶುರುವಾಗಿದೆ. ಇದರಿಂದ ತೀವ್ರವಾಗಿ ನೊಂದ ಚಾಂದಿನಿ ಸಿಂಗ್, ಏಕಾಏಕಿ ಫ್ಲ್ಯಾಟ್‌ನ ಬಾಲ್ಕನಿಗೆ ತೆರಳಿ ಕೆಳಗೆ ಜಿಗಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಚಾಂದಿನಿ ಕುಟುಂಬದವರು ನೀಡಿದ ದೂರಿನ ಮೇರೆಗೆ ರಿತೀಶ್ ಮತ್ತು ಆತನ ಪೋಷಕರ ವಿರುದ್ಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.