ಕೊರೋನಾದಲ್ಲಿ ಹಣ ಬಂದಿದೆ ಎಂದು ಮಹಿಳೆಯ ಕಿವಿಯೋಲೆ ದೋಚಿದ

By Kannadaprabha NewsFirst Published Nov 10, 2020, 8:02 AM IST
Highlights

ಕೊರೋನಾದಲ್ಲಿ ಹಣ ಬಂದಿದೆ ಎಂದು ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಕಿವಿಯೋಲೆ ದೋಚಿದ್ದಾನೆ ಏನಿದು ಪ್ರಕರಣ..?

ಬಂಟ್ವಾಳ (ನ.10): ಕೊರೋನಾದಲ್ಲಿ ಹಣ ಬಂದಿದೆ, ಹಣ ಸಿಗಬೇಕಾದರೆ ಹಣ ಕಟ್ಟಬೇಕು ಎಂದು ಹೇಳಿ ಬಡಮಹಿಳೆಯೊಬ್ಬರ ಬಂಗಾರ ದೋಚಿದ ಘಟನೆ ಸೋಮವಾರ ಬೆಳಿಗ್ಗೆ ಮಿನಿವಿಧಾನ ಸೌಧದ ಆವರಣದಲ್ಲಿ ನಡೆದಿದೆ. ತಾಲೂಕಿನ ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಎಂಬವರೇ ಮೋಸಕ್ಕೆ ಮರುಳಾಗಿ ಕಿವಿಯಲ್ಲಿದ್ದ ಚಿನ್ನದ ಬೆಂಡೋಲೆಯನ್ನು ಕಳೆದುಕೊಂಡವರು.

ಘಟನೆಯ ವಿವರ: ತಲೆಂಬಿಲ ನಿವಾಸಿ ಜಯಂತಿ ಅವರು ಬಿ.ಸಿ. ರೋಡಿನ ಮೆಸ್ಕಾಂ ಕಚೇರಿಗೆ ಬಿಲ್‌ ಕಟ್ಟಲು ಬಂದಿದ್ದರು. ಮೆಸ್ಕಾಂ ಬಿಲ್‌ ಕಟ್ಟಿಬಳಿಕ ವಾಪಸ್‌ ತೆರಳುವ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಮಹಿಳೆಯಲ್ಲಿ ಪರಿಚಯ ಮಾಡಿಕೊಂಡು ತಾನು ಶೀನಪ್ಪ ಅವರ ಮಗ ಸಂತೋಷ ಎಂದು ನಂಬಿಸಿ ನಿಮಗೆ ಕೊರೋನಾದಲ್ಲಿ ಒಂದೂವರೆ ಲಕ್ಷ ಹಣ ಬಂದಿದೆ. ಅದನ್ನು ಪಡೆಯಲು ಕನಿಷ್ಟ10 ಸಾವಿರ ಹಣ ಕಟ್ಟಬೇಕು. ನೀವು ಆಧಾರ್‌ ಕಾರ್ಡ್‌ ತಂದಿದ್ದೀರಾ ಎಂದು ಕೇಳಿದ್ದಾರೆ. ಜಯಂತಿ ಅವರು ತಂದಿಲ್ಲವೆಂದಾಗ ನೀವು ಮಿನಿವಿಧಾನ ಸೌಧದಕ್ಕೆ ಬನ್ನಿ, ಅರ್ಜಿ ನೀಡಬೇಕು ಎಂದು ಅವರನ್ನು ಕರೆದುಕೊಂಡು ಹೋಗಿದ್ದಾನೆ.

'ಸಾವಿನಲ್ಲೇ ಶಾಂತಿಯಿದೆ' ಪೊಲೀಸರ ಕಿರುಕುಳಕ್ಕೆ ನೊಂದ ಫ್ಯಾಮಿಲಿ ಸುಸೈಡ್

ಅಲ್ಲಿ ಸಂತೋಷ ಎಂಬಾತ 10 ಸಾವಿರ ಕೇಳಿದಾಗ ನನ್ನ ಬಳಿ ಇಲ್ಲ ಮಗನಲ್ಲಿ ಕೇಳಿ ಕೊಡುತ್ತೇನೆ ಎಂದು ಮಹಿಳೆ ಹೇಳಿದಾಗ, ಮಗನಿಗೆ ನಾನು ಫೋನ್‌ ಮಾಡಿದೆ ಅವನಲ್ಲಿ ಇಲ್ಲ ಅಂತೆ, ನಿಮ್ಮಲ್ಲಿರುವ ಕಿವಿಯ ಬಂಗಾರವನ್ನು ಕೊಡುವಂತೆ ನಿಮ್ಮ ಮಗ ಹೇಳಿದ್ದಾನೆ ಎಂದು ಹೇಳಿದ್ದಕ್ಕೆ, ಮಹಿಳೆ ಕಿವಿಯ ಓಲೆಯನ್ನು ತೆಗೆದುಕೊಟ್ಟಿದ್ದಾರೆ. ಮರುಕ್ಷಣವೇ ಬಂಗಾರ ಪಡೆದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಅಪರಿಚಿತ ವ್ಯಕ್ತಿ ಬಂಗಾರ ಕೊಂಡುಹೋದ ಮೇಲೆ ಮಹಿಳೆ ಮಿನಿವಿಧಾನ ಸೌಧದ ಕಚೇರಿಯ ಮಹಿಳಾ ಸಿಬ್ಬಂದಿಯ ಮೂಲಕ ಮಗನಿಗೆ ಫೋನ್‌ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮಗನಿಗೆ ತಾಯಿಯನ್ನು ವಂಚಿಸಿ ಬಂಗಾರ ಲಪಾಟಾಯಿಸದ ಬಗ್ಗೆ ತಿಳಿದು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಮಿನಿ ವಿಧಾನ ಸೌಧದಲ್ಲಿರುವ ಸಿ.ಸಿ. ಕ್ಯಾಮೆರಾದ ಮೂಲಕ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

click me!