ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ಬೇರೆ ಕಾರ್ಡ್ ಕೊಟ್ಟು ವಂಚನೆ ಮಾಡುತ್ತಿದ್ದ ಮಹಿಳೆ| ಎಟಿಎಂಗಳಲ್ಲಿ ಹಣ ತೆಗೆಯಲು ಬಾರದವರನ್ನು ಯಾಮಾರಿಸಿ ಅವರ ಕಾರ್ಡ್, ಎಟಿಎಂ ಪಿನ್ ನಂಬರ್ ಪಡೆದು ಅವರಿಗೆ ಬೇರೆ ಕಾರ್ಡ್‌ನ್ನು ನೀಡುತ್ತಿದ್ದ ಮಹಿಳೆ| ಅಮಾಯಕರಿಂದ ಪಡೆದ ಕಾರ್ಡ್ ಬಳಸಿ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಕಳ್ಳಿ|
ಹಾನಗಲ್ಲ(ಅ.13): ಎಟಿಎಂಗಳಿಂದ ಹಣ ಪಡೆಯುವುದು ಅರಿಯದ ಅಮಾಯಕರಿಗೆ ಹಣ ತೆಗೆದುಕೊಡಲು ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳನ್ನು ಬಂಧಿಸುವಲ್ಲಿ ಹಾನಗಲ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾನಗಲ್ಲ ತಾಲೂಕಿನ ಬಾಳೂರು ಗ್ರಾಮದ, ಶಿರಾಳಕೊಪ್ಪ ನಿವಾಸಿ ಕೌಸರಬಾನು ಇಸ್ತಾರಅಹ್ಮದ ಬಂಕಾಪೂರ(35) ಬಂಧಿತ ಆರೋಪಿ. ಇತ್ತೀಚೆಗೆ ಗಂಡನೊಂದಿಗೆ ಮನಸ್ತಾಪವಾಗಿ ಶಿರಾಳಕೊಪ್ಪದ ತನ್ನ ತಂದೆ ಮನೆಯಲ್ಲಿ ತನ್ನ ಆರು ಜನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ.
undefined
ಮೊದಮೊದಲು ಶಿರಾಳಕೊಪ್ಪದಲ್ಲಿ ಅವರಿವರ ಮನೆಯಲ್ಲಿ ಕಸಮುಸುರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕೌಸರಬಾನು, ಇತ್ತೀಚೆಗೆ ಮಾಹಾಮಾರಿ ಕೊವಿಡ್- 19 ಬಂದ ಕಾರಣ, ಕೆಲಸದ ಮನೆಯವರು ಕೋವಿಡ್ ಹೋಗುವವರೆಗೂ ಕೆಲಸಕ್ಕೆ ಬರಬೇಡ ಎಂದು ಮನೆಗೆಲಸ ಬಿಡಿಸಿದ್ದರು. ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿತ್ತು. ಹೀಗಾಗಿ ಎಟಿಎಂಗಳಲ್ಲಿ ಹಣ ತೆಗೆದುಕೊಳ್ಳುವ ಅಮಾಯಕ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದಳು. ಎಟಿಎಂಗಳಲ್ಲಿ ಹಣ ತೆಗೆಯಲು ಬಾರದವರನ್ನು ಯಾಮಾರಿಸಿ ಅವರ ಕಾರ್ಡ್, ಎಟಿಎಂ ಪಿನ್ ನಂಬರ್ ಪಡೆದು ಅವರಿಗೆ ಬೇರೆ ಕಾರ್ಡ್‌ನ್ನು ನೀಡುತ್ತಿದ್ದಳು. ಬಳಿಕ ಅಮಾಯಕರಿಂದ ಪಡೆದ ಕಾರ್ಡ್ ಬಳಸಿ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಳು.
ಬಿರುಕು ಬಿಟ್ಟ ಗೋಡೆ, ಶಿಥಿಲಗೊಂಡ ಸೇತುವೆ, ಕರೆಯುತ್ತಿದೆ ಅಪಾಯ; ಸೇತುವೆ ಮಾಡ್ಸಿ ಕೊಡಿ ಸ್ವಾಮಿ!
ಈ ಕುರಿತು ಹಿರೇಕೇರೂರು, ಹಾನಗಲ್ಲಿನಲ್ಲಿ ಎಟಿಎಂ ಬದಲಾಯಿಸಿ ಹಣ ಲಪಟಾಯಿಸಿದ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆ ಎಟಿಎಂಗಳಲ್ಲಿನ ಸಿಸಿ ಕ್ಯಾಮೆರಾ ವಿಡಿಯೋಗಳನ್ನು ಪರಿಶೀಲಿಸಿದಾಗ ಈ ಎಲ್ಲ ಕೃತ್ಯಗಳನ್ನು ಬುರ್ಖಾಧಾರಿ ವ್ಯಾನಿಟಿ ಬ್ಯಾಗ್ ಹೊಂದಿದ್ದ ಮಹಿಳೆಯೇ ಎಲ್ಲ ಘಟನೆಗಳಿಗೆ ಕಾರಣ ಎಂದು ತಿಳಿದುಬಂದಿತ್ತು. ಪೊಲೀಸರು ಚಾಲಾಕಿ ಮಹಿಳೆಯನ್ನು ಹಿಡಿಯಲು ಜಾಲ ಬೀಸಿದ್ದರು.
ಎಸ್‌ಪಿ ಕೆ.ಜಿ. ದೇವರಾಜ, ಎಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಒ.ಬಿ. ಕಲ್ಲೇಶಪ್ಪ, ಸಿಪಿಐ ಶಿವಶಂಕರ ಗಣಾಚಾರಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ, ಎಎಸ್‌ಐ ರೇಣುಕಾ ಪವಾರ, ಸೈಬರ್ ಕ್ರೈಂ ಬ್ರ್ಯಾಂಚಿನ ಆನಂದ ದೊಡ್ಡಕುರುಬರ, ಕಿರಣ ಸಣ್ಣಗೌಡರ, ಮಹೇಶ ಹೊರಕೇರಿ, ಡಿ.ಬಿ. ಗುತ್ಯಾಳದ, ಮಾರುತಿ ಹಾಲಭಾವಿ, ಪಿ.ಬಿ. ಹೊಸಮನಿ, ಹರೀಶ ಹಲಗೇರಿ, ಶಂಭುಲಿಂಗ ಸವದತ್ತಿ, ಶಿಲ್ಪಾ ಕಾಮನಹಳ್ಳಿ, ಆನಂದ ಪಾಟೀಲ, ಇಲಿಯಾಸ ಸೇಖಸನದಿ, ಮಲ್ಲಪ್ಪ ಯಲ್ಲನವರ, ವೀರಣ್ಣ ತಿಗರಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಮಹಿಳೆಯಿಂದ ಎಸ್‌ಬಿಐ, ಕಾರ್ಪೋರೇಶನ್, ಕರ್ನಾಟಕ, ಆ್ಯಕ್ಸಿಸ್ ಬ್ಯಾಂಕುಗಳ ಎಟಿಎಂ ಕಾರ್ಡ್‌ಗಳನ್ನು ಹಾಗೂ 51,600 ನಗದನ್ನು ವಶಪಡಿಸಿಕೊಂಡಿದ್ದಾರೆ.