ವಾರದೊಳಗಾಗಿ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ: ಈಶ್ವರಪ್ಪ

By Kannadaprabha NewsFirst Published May 9, 2020, 9:07 AM IST
Highlights

ಶಿವಮೊಗ್ಗದ ಮೆಗ್ಗಾನ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಯಕಲ್ಪ ನೀಡುವ ಯೋಜನೆ ಸಿದ್ಧಗೊಂಡಿದ್ದು, ಇನ್ನೊಂದು ವಾರದಲ್ಲಿ ಈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ, ನರರೋಗದ ಹೊರ ರೋಗಿಗಳ ವಿಭಾಗ ಕಾರ್ಯಾರಂಭ ಮಾಡಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.09): ಸಿಮ್ಸ್‌ ವ್ಯಾಪ್ತಿಯಲ್ಲಿಯೇ ಬರುವ ಮೆಗ್ಗಾನ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಯಕಲ್ಪ ನೀಡುವ ಯೋಜನೆ ಸಿದ್ಧಗೊಂಡಿದ್ದು, ಇನ್ನೊಂದು ವಾರದಲ್ಲಿ ಈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ, ನರರೋಗದ ಹೊರ ರೋಗಿಗಳ ವಿಭಾಗ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೂಪರ್‌ ಸ್ಪೆಷಾಲಿಟಿ ವಿಭಾಗ ಪ್ರಾರಂಭವಾಗಿ 10 ವರ್ಷವೇ ಆಗಿತ್ತು. 2020ರ ಜನವರಿ ತಿಂಗಳಲ್ಲಿಯೇ ಮೆಗ್ಗಾನ್‌ ಆಸ್ಪತ್ರೆಯ ಆಡಳಿತ ಮಂಡಳಿ ಸಭೆಯಲ್ಲಿ ತಜ್ಞ ವೈದ್ಯರ ನೇಮಕ ಸೇರಿ ಅನೇಕ ವಿಷಯಗಳು ತೀರ್ಮಾನವಾಗಿತ್ತು. ಆದರೆ ಆ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ಕೂಡ ಕಾಣೆಯಾಗಿತ್ತು. ಯಾರು ಇದಕ್ಕೆ ಕಾರಣ ಎಂದು ಗೊತ್ತಿಲ್ಲ. ಇದರ ಬೆನ್ನ ಹಿಂದೆ ಬಿದ್ದು ಕಡತ ಹುಡುಕಿಸಿದ್ದೇನೆ. ತಜ್ಞ ವೈದ್ಯರ ನೇಮಕಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದೀಗ ಮೆಗ್ಗಾನ್‌ ಆಸ್ಪತ್ರೆಯ 3 ಜನ ಹೃದ್ರೋಗ ತಜ್ಞರು ಮತ್ತು ಒಬ್ಬ ನರರೋಗ ತಜ್ಞರ ಸೇವೆಯನ್ನು ಪಡೆದುಕೊಂಡು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗದ ಹೊರ ರೋಗಿಗಳ ವಿಭಾಗ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಭಾಗಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಸ್ಪೀಚ್‌-ಹಿಯರಿಂಗ್‌ ಬಿಎಸ್ಸಿ ಕೋರ್ಸ್

ಹುಟ್ಟಿನಿಂದಲೇ ಕಿವುಡುತನ ಇರುವ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸಲು ಮತ್ತು ವಾಕ್‌ಶ್ರವಣ ಕೇಂದ್ರದಲ್ಲಿ ಬಿಎಸ್ಸಿ (ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌) ತರಗತಿಗಳನ್ನು ಆರಂಭಿಸಲು 4.84 ಕೋಟಿ ರು. ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಇದರ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಕೋರ್ಸ್‌ ಸಿಮ್ಸ್‌ನಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದರು.

ಪೊಲೀಸ್‌ ಅಧಿಕಾರಿಗಳ ಮುಸುಕಿನ ಗುದ್ದಾಟ: ಜನರಿಗೆ ಹಿಡಿ ಮರಳೂ ಸಿಗ್ತಿಲ್ಲ!

ನರ್ಸ್‌, ಟೆಕ್ನಿಷಿಯನ್‌ ಮತ್ತಿತರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪ್ರಕ್ರಿಯೆ ತಕ್ಷಣ ಆರಂಭಿಸಲು ಸೂಚಿಸಲಾಗಿದೆ. ಎಮರ್ಜೆನ್ಸಿ ಮೆಡಿಸಿನ್‌ ಮತ್ತು ಜಿರಿಯಾಟ್ರಿಕ್‌ ವಿಭಾಗವನ್ನು ಪ್ರಾರಂಭಿಸಲು ತಕ್ಷಣ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಚೆಕ್‌ಪೋಸ್ಟ್‌ನಲ್ಲಿ ಬಿಗಿ ಭದ್ರತೆ:

ಜಿಲ್ಲೆಗೆ ಪ್ರಸ್ತುತ 3200 ವಲಸೆ ಕಾರ್ಮಿಕರು ಆಗಮಿಸಿದ್ದು, ಸುಮಾರು 300 ವಲಸೆ ಕಾರ್ಮಿಕರು ಜಿಲ್ಲೆಯಿಂದು ಹೊರ ಹೋಗಿದ್ದಾರೆ. ಹೊರ ರಾಜ್ಯಗಳಿಂದ ಬಂದವರಿಗೆ ಹಾಗೂ ರಾಜ್ಯದ ರೆಡ್‌ಜೋನ್‌ನಿಂದ ಆಗಮಿಸಿದವರಿಗೆ ಕ್ವಾರೆಂಟೈನ್‌ ವಿಧಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಮಾಹಿತಿ ನೀಡಿದರು.
 

click me!