ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಇನ್ನೂರರ ಗಡಿ ದಾಟಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಮತ್ತೊಬ್ಬ ವೃದ್ದೆಯನ್ನು ಕೊರೋನಾ ಬಲಿ ಪಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.04) ಕೊನೆಗೂ ಆತಂಕದಿಂದ ನಿರೀಕ್ಷಿಸುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ದ್ವಿಶತಕ ದಾಟಿದೆ. ಜಿಲ್ಲೆಯಲ್ಲಿ ಶುಕ್ರವಾರ 23 ಮಂದಿಗೆ ಸೋಂಕು ಪತ್ತೆಯಾಗಿದ್ದು, ಓರ್ವರು ಮೃತಪಟ್ಟಿದ್ದಾರೆ.
ಮಹಾಮಾರಿ ಕರೋನಾ ಸೋಂಕು ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರಿಸುತ್ತ ಸಾಗಿದೆ. ಸತತವಾಗಿ ಈ ವಾರ 3ನೇ ಬಾರಿ 20 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಒಂದೇ ದಿನ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತರು ಪತ್ತೆಯಾಗುತ್ತಿರುವುದು ಜನರಲ್ಲಿ ತಲ್ಲಣ ಮೂಡಿಸಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 222ಕ್ಕೇರಿದೆ. ಶಿವಮೊಗ್ಗ ನಗರದ ಮತ್ತು ತಾಲೂಕಿನ 10 ಜನರಿಗೆ ಕೊರೊನಾ ಸೋಂಕು ತಗುಲಿದೆ. ಭದ್ರಾವತಿ ತಾಲೂಕಿನಲ್ಲಿ ಐವರು ಮತ್ತು ಶಿಕಾರಿಪುರ ತಾಲೂಕಿನಲ್ಲಿ 5 ಜನರಿಗೆ, ತೀರ್ಥಹಳ್ಳಿ, ಹೊಸನಗರ, ಸೊರಬ ತಲಾ ಒಂದು ಸೇರಿ ಒಟ್ಟು 23 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಪಿ-18066 ನಿಂದ ಪಿ-18088 ಒಟ್ಟು 23 ಸೋಂಕಿತರಲ್ಲಿ 11 ಮಹಿಳೆಯರು, 12 ಪುರುಷರಿದ್ದಾರೆ (10 ವರ್ಷದ ಬಾಲಕ ಸೇರಿ). ಈ ಪೈಕಿ 7 ಮಂದಿ ತೀವ್ರ ಶೀತ ಜ್ವರದಿಂದ ಬಳಲುತ್ತಿದ್ದರೆ, ಐವರಲ್ಲಿ ಸೋಂಕಿತರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ 7 ಮಂದಿ ಬೆಂಗಳೂರು, ಉತ್ತರಪ್ರದೇಶ, ಮಹಾರಾಷ್ಟ್ರ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ನಾಲ್ವರಿಗೆ ಸೋಂಕು ಹೇಗೆ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ: ಡಿಸಿಎಂ
ರಸ್ತೆಗಳು ಸೀಲ್‌ಡೌನ್: ಶುಕ್ರವಾರ ಶಿವಮೊಗ್ಗದ ಬಾಪೂಜಿನಗರ ಮುಖ್ಯರಸ್ತೆಯ ಮೂರನೇ ಅಡ್ಡರಸ್ತೆ ಯನ್ನು ಸೀಲ್‌ಡೌನ್ ಮಾಡಲಾಗಿದೆ. ಮಾಚೇನಹಳ್ಳಿಯ ಗಾರ್ಮೆಂಟ್ಸ್‌ನ ಇಬ್ಬರು ಕಾರ್ಮಿಕರಿಗೆ ಸೋಂಕು ತಗುಲಿದೆ. ಕಳೆದ ವಾರ ಮೂವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಮೊದಲು ಪಾಸಿಟಿವ್ ಪತ್ತೆಯಾದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 16 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್‌ನಲ್ಲಿ ಇದ್ದ ಇಬ್ಬರಿಗೆ ಸೋಂಕು ತಗುಲಿರುವುದು ದಢಪಟ್ಟಿದೆ. ಸೋಂಕಿತರನ್ನು ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವೈದ್ಯರ ಕುಟುಂಬಕ್ಕೂ ಕೊರೋನಾ ಮಹಾಮಾರಿ ಬೆನ್ನು ಹತ್ತಿದೆ. ಲಭ್ಯ ಮಾಹಿತಿಯಂತೆ ವೈದ್ಯರ ಪತ್ನಿ, ಪತ್ನಿ ತಾಯಿ, ಮತ್ತು ಮಗನಿಗೂ ಸೋಂಕು ದೃಢಪಟ್ಟಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ನ ಮೂವರು ನೌಕರರಿಗೂ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ. ಪಿಳ್ಳಂಗೆರೆ ಗ್ರಾಮದ ಓರ್ವ ಗ್ರಾಮಸ್ಥನಲ್ಲೂ ಸೋಂಕು ಪತ್ತೆಯಾಗಿದೆ.
ಕೊರೋನಾದಿಂದ ಸಾವನಪ್ಪಿದ್ದ ಶಿಕಾರಿಪುರದ ವೃದ್ಧೆಗೆ ಸಂಪರ್ಕ ಹೊಂದಿದ್ದ ಐವರಲ್ಲೂ ಸೋಂಕು ದೃಢವಾಗಿದೆ. ಭದ್ರಾವತಿ ಮತ್ತು ಹೊಳೆಹೊನ್ನೂರಿನ ಐವರಲ್ಲಿ ಕೊರೋನಾ ಕಾಣಿಸಿಕೊಂಡಿಂದೆ. ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲೂ ತಲಾ ಒಂದೊಂದು ಪಾಸಿಟಿವ್ ಕೇಸು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 222 ಸೋಂಕಿತರಲ್ಲಿ 117 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 101 ಸಕ್ರಿಯ ಪ್ರಕರಣಗಳಿದ್ದು, ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.
ಚಿಕಿತ್ಸೆ ಫಲಿಸದೆ ವೃದ್ಧೆ ಸಾವು
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಲಷ್ಕರ್ ಮೊಹಲ್ಲಾದ ವೃದ್ಧೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಜು. 1 ರಂದು ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಂತರ ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ತುಂಗಾನಗರದ ವೃದ್ಧೆ ಹೃದಯಾಘಾತ ದಿಂದ ಮೃತಪಟ್ಟಿದ್ದರು. ಸಂಬಂಧಿಕರ ಒತ್ತಾಯದ ಮೇರೆಗೆ ಸ್ವಾಬ್ ಟೆಸ್ಟ್ ಮಾಡಿದಾಗ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನುತ್ತಿದ್ದಾರೆ.
ಇನ್ನೊಂದೆಡೆ ಲಷ್ಕರ್ ಮೊಹಲ್ಲಾದ ವೃದ್ಧಗ್ಧೆಗೆ ಸೋಂಕಿತ್ತು ಎನ್ನುತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ. ಗುರುವಾರವಷ್ಟೆ ಕಡೂರು ಮೂಲದ ಶಿಕ್ಷಕ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿಗೆ ಬಲಿಯಾಗಿದ್ದರು. 15 ದಿನಗಳ ಹಿಂದೆ ಶಿಕಾರಿಪುರದ ಖವಾಸಪುರದ ವೃದ್ಧೆ ಮತಪಟ್ಟಿದ್ದರು. ಬಳಿಕ ಚನ್ನಗಿರಿ ಮೂಲದ ವೃದ್ಧೆಯೊಬ್ಬರು ಶಿವಮೊಗ್ಗದ ಮೆಗ್ಗಾನ್‌ನಲ್ಲಿ ಸೋಂಕಿಗೆ ಬಲಿಯಾಗಿದ್ದರು.