* ನೂರಾರು ಜನ ಸಂಚರಿಸುವ ಮಾರ್ಗಗಳಲ್ಲೂ ವಾಮಾಚಾರ
* ಕಡೇಕೊಪ್ಪ ಕ್ರಾಸ್‌ನಲ್ಲಿ ವಾಮಾಚಾರದಿಂದ ಗ್ರಾಮಸ್ಥರಲ್ಲಿ ಆತಂಕ
* ರೋಗಕಾರಕ ವಾತಾವರಣ ಸೃಷ್ಟಿ
ಕೊಪ್ಪಳ(ಅ.02): ದೋಟಿಹಾಳದಿಂದ ಹನುಮಸಾಗರಕ್ಕೆ ತೆರಳುವ ಮಾರ್ಗ ಮಧ್ಯೆ ಕಡೇಕೊಪ್ಪ ಕ್ರಾಸಿನಲ್ಲಿ ಕೆಲವರು ವಾಮಾಚಾರ(Witchcraft) ಮಾಡುತ್ತಿದ್ದು, ವಿದ್ಯಾರ್ಥಿಗಳು, ವಾಹನ ಸವಾರರು ಭಯದಿಂದ ಸಂಚಾರ ಮಾಡುವಂತಾಗಿದೆ.
ಕಡೇಕೊಪ್ಪ, ಕಲಕೇರಿ, ನಡುವಲಕೊಪ್ಪ ಗ್ರಾಮದಿಂದ ದಿನಂಪ್ರತಿ ದೋಟಿಹಾಳಕ್ಕೆ ಹಲವಾರು ವಿದ್ಯಾರ್ಥಿಗಳು(Students) ಶಾಲಾ ಕಾಲೇಜಿಗೆ ಬರುತ್ತಾರೆ. ಗ್ರಾಮಸ್ಥರು ವ್ಯಾಪಾರ ವ್ಯವಹಾರವನ್ನು ಮಾಡಲಿಕ್ಕೆ ಬರುತ್ತಾರೆ. ಆದರೆ ಈ ರಸ್ತೆಯಲ್ಲಿ ವಾಮಾಚಾರ ಮಾಡಿ ಕಾಯಿ, ನಿಂಬೆಹಣ್ಣು ಬಾಳೆಹಣ್ಣು, ನಾಣ್ಯ, ಕುಂಕುಮ, ಅರಿಶಿಣಪುಡಿ ಸೇರಿ ಎಲ್ಲವನ್ನೂ ಚೆಲ್ಲಲಾಗುತ್ತಿದೆ.
ನೆಲಮಂಗಲ: ಬಾಲಕಿಯನ್ನು ನರಬಲಿ ನೀಡಲು ಪೂಜೆ ನಡೆಸಿರುವ ಶಂಕೆ, ಸ್ಥಳೀಯರಿಂದ ರಕ್ಷಣೆ
ಪ್ರಮುಖವಾಗಿ ಮೂರ್ನಾಲ್ಕು ರಸ್ತೆಗಳು ಕೂಡುವ ಜಾಗದ ಮೂಲೆಗಳಲ್ಲಿ ಹುಣ್ಣಿಮೆ, ಅಮಾವಾಸ್ಯೆ ಹತ್ತಿರವಿದ್ದಾಗ ತಂದು ಮಾಟ, ಮಂತ್ರ ಮಾಡಿದ ವಸ್ತುಗಳನ್ನು ವಿಸರ್ಜಿಸಲಾಗುತ್ತದೆ. ಅನ್ನದಲ್ಲಿ ಕುಂಕುಮ ಬೆರೆಸಿರಲಾಗುತ್ತದೆ. ತೆಂಗಿನಕಾಯಿ, ಲಿಂಬೆಹಣ್ಣುಗಳು, ಹಸಿ ಮೆಣಸಿನಕಾಯಿಗಳು, ಚುರಮುರಿ, ಕುಂಬಳಕಾಯಿ, ಬಟ್ಟೆ, ನಾಣ್ಯಗಳು, ಕೋಳಿ ಮೊಟ್ಟೆ, ಇತ್ಯಾದಿಗಳು ಇವುಗಳಲ್ಲಿರುತ್ತವೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರೋಗಕಾರಕ ವಾತಾವರಣ ಸೃಷ್ಟಿ
ಬಹುತೇಕ ಬಾರಿ ಈ ಅನ್ನ, ಕಾಯಿ, ಬಾಳೆಹಣ್ಣು, ಕುಂಬಳಕಾಯಿ, ಲಿಂಬೆ ಹಣ್ಣುಗಳು ವಾರಗಟ್ಟಲೆ ಅಲ್ಲೇ ಬಿದ್ದು ಕೊಳೆತು ನಾರುತ್ತ ರೋಗಕಾರಕ ವಾತಾವರಣ ಸೃಷ್ಟಿಸುತ್ತಿವೆ. ವಾಮಾಚಾರಕ್ಕೆ ಹಾಕಿದ ವಸ್ತುಗಳನ್ನು ತಪ್ಪಿಸಲು ಹೋಗಿ ಎಷ್ಟೋ ಬೈಕ್ ಸವಾರರು ಬಿದ್ದಿರುವ ಘಟನೆ ನಡೆದಿವೆ. ಗ್ರಾಮದ ಜನತೆಗೆ ಏನು ಆಗುವುದೋ ಎಂಬ ಭಯ ಕಾಡಲಾರಂಭಿಸಿದೆ.