ರಾಜಕೀಯ ಪುನರ್ಜನ್ಮ ನೀಡಿದ್ದ ಬಾಗಲಕೋಟೆಗೆ ಈ ಬಾರಿಯಾದ್ರೂ ಬಜೆಟ್​​ನಲ್ಲಿ ಬಂಪರ್ ನೀಡ್ತಾರಾ ಸಿದ್ದರಾಮಯ್ಯ?

By Girish Goudar  |  First Published Feb 15, 2024, 12:37 PM IST

ಸಿಎಂ ಸಿದ್ದು ರಾಜ್ಯ ಬಜೆಟ್​ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಗರಿಗದೆರಿದ ನಿರೀಕ್ಷೆ, ಮೆಡಿಕಲ್ ಕಾಲೇಜ್ ಅನುಷ್ಠಾನ, ಪ್ರವಾಸೋಧ್ಯಮ ಅಭಿವೃದ್ದಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ, ನೇಕಾರರಿಗೆ ಜವಳಿ ಪಾರ್ಕ್​ ಬೇಡಿಕೆ. ಈ ಹಿಂದೆ ಬಾದಾಮಿ ಶಾಸಕರಾಗಿದ್ದಾಗ ಬಿಜೆಪಿ ಸರ್ಕಾರದ ಸಿಎಂಗೆ ಸಾಲು ಸಾಲು ಪತ್ರ ಬರೆದು ಅನುದಾನ ಕೇಳಿದ್ದ ಸಿದ್ದು, ಈಗ ತಮ್ಮ ಕೈಯಿಂದ ಏನೆಲ್ಲಾ ಕೊಡ್ತಾರೆ ಅನ್ನೋ ಕುತೂಹಲ. 


ವರದಿ:-ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಫೆ.15): ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್​​ ಮಂಡನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಬೇಕು ಬೇಡಿಕೆಗಳು ಕೇಳಿ ಬರುತ್ತಿರುವುದರ ಮಧ್ಯೆಯೇ ಬಾಗಲಕೊಟೆ ಜಿಲ್ಲೆಯಲ್ಲಿ ಈ ಬಾರಿಯ ಬಜೆಟ್​ನಲ್ಲಿ ಬಹಳಷ್ಟು ನಿರೀಕ್ಷೆಗಳನ್ನ ಇರಿಸಿಕೊಳ್ಳಲಾಗಿದೆ. ಯಾಕಂದ್ರೆ ಈ ಹಿಂದೆ ಸಿದ್ದರಾಮಯ್ಯನವರಿಗೆ ರಾಜಕೀಯ ಪುರ್ನಜನ್ಮ ನೀಡಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಬಜೆಟ್​ ಕುರಿತು ಹತ್ತು ಹಲವು ನಿರೀಕ್ಷೆಗಳನ್ನ ಎದುರು ನೋಡಲಾಗುತ್ತಿದೆ. 

Latest Videos

undefined

ಕಳೆದ ಸಲ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು ಇತ್ತ ಬಾದಾಮಿಯಿಂದ ಗೆದ್ದು ಬಂದು ರಾಜಕೀಯ ಪುನರ್ಜನ್ಮ ಪಡೆದಿದ್ದ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಬಾದಾಮಿಯ ಅಭಿವೃದ್ದಿಗಾಗಿ ಬಜೆಟ್​ನಲ್ಲಿ ಅನುದಾನ ನೀಡುವಂತೆ ಸಾಲು ಸಾಲು ಪತ್ರವನ್ನ ಬರೆದಿದ್ದರು. ಆದ್ರೆ ಇದೀಗ ಸ್ವತ: ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಬಜೆಟ್​ ಮಂಡನೆ ಮಾಡಲಿದ್ದಾರೆ. ಇವುಗಳ ಮಧ್ಯೆ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಕಾಲದಲ್ಲಿ ಘೋಷಣೆಯಾಗಿರೋ ಸರ್ಕಾರಿ ಮೆಡಿಕಲ್​ ಕಾಲೇಜ್​​ಗೆ ಅನುದಾನ ನೀಡಬೇಕಿದೆ. 

ಕರ್ನಾಟಕದ ಈ ಬಾರಿಯ ಬಜೆಟ್‌ ಗಾತ್ರ 3.80 ಲಕ್ಷ ಕೋಟಿ..!

ರಾಜ್ಯದ ಪ್ರಮುಖ ಐತಿಹಾಸಿಕ ತಾಣಗಳಾಗಿರೋ ಬಾದಾಮಿ, ಐಹೊಳೆ, ಪಟ್ಟದಕಲ್ಲ ಸ್ಥಳಗಳ ಅಭಿವೃದ್ಧಿಗೆ ಅನುದಾನವನ್ನ ಘೋಷಣೆ ಮಾಡಬೇಕಿದೆ. ಇವುಗಳ ಮಧ್ಯೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಅನುದಾನವನ್ನ ಮೀಸಲಿರಿಸಬೇಕಿದೆ. ಇನ್ನು ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ 2ನೇ ಜಿಲ್ಲೆಯಾಗಿರೋ ಬಾಗಲಕೋಟೆ ಜಿಲ್ಲೆಯಲ್ಲಿ ಜವಳಿ ಪಾರ್ಕ್​ ಮಾಡಬೇಕಿದೆ. ಹೀಗೆ ಹಲವು ಬೇಡಿಕೆಗಳಿದ್ದು, ಸಿದ್ದರಾಮಯ್ಯನವರ ಬಜೆಟ್​ನಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಸಿಎಂ ಸಿದ್ದರಾಮಯ್ಯನವರು ಅನುದಾನದೊಂದಿಗೆ ವಿಶೇಷ ಪ್ಯಾಕೇಜ್​ಗಳನ್ನ ಬಾಗಲಕೋಟೆ ಜಿಲ್ಲೆಗೆ ಘೋಷಿಸುವಂತಾಗಲಿ ಅಂತಾರೆ ಬಾಗಲಕೋಟೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ್ ಧರ್ಮಂತಿ.

ಬಾದಾಮಿ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದ ಸಿದ್ದು

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಸೋಲನುಭವಿಸಿ, ಅದೇ ಸಮಯದಲ್ಲಿ ಬಾದಾಮಿಯಿಂದ ಗೆದ್ದು ಬಂದಿದ್ದ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರು, ಅಲ್ಲದೆ ಬಾದಾಮಿ ಜನರ ಋನ ನನ್ನ ಮೇಲೆ ಬಹಳಷ್ಟಿದೆ, ನಾನು ಯಾವುದೇ ಸಮಯದಲ್ಲಾದ್ರೂ ಬಾದಾಮಿ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದರು. ಅದರಂತೆ ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಪತ್ರ ಸಮರ ನಡೆಸಿ ಅನುದಾನವನ್ನೂ ಸಹ ಪಡೆಯುವಲ್ಲಿ ಯಶಸ್ವಿ ಕಂಡಿದ್ದರು. ಒಂದೊಮ್ಮೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸಿಗದ ಅನುದಾನ ಸಿದ್ದು ಕ್ಷೇತ್ರ ಅಂದಿನ ಬಾದಾಮಿಗೆ ಸಿಕ್ಕಿತ್ತು, ಆದ್ರೆ ಈಗ ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರೇ ಇದ್ದು, ನಾಳೆ ನಡೆಯಲಿರೋ ರಾಜ್ಯ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಬಾದಾಮಿ ಜನರ ಋಣ ತೀರಿಸುವ ಕೆಲ್ಸವನ್ನ ಮಾಡಬೇಕಿದೆ. 

ಒಟ್ಟಿನಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿ ಕೋಟಿ ಕೋಟಿ ಅನುದಾನ ತಂದು ಬಾದಾಮಿ ಅಭಿವೃದ್ದಿಗೆ ಟೊಂಕ ಕಟ್ಟಿದ್ದ ಸಿದ್ದರಾಮಯ್ಯನವರು ಇಂದು ತಾವೇ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಈ ಬಾರಿಯ ಬಜೆಟ್​ನಲ್ಲಿ ಯಾವ ರೀತಿ ಪ್ರಾಧಾನ್ಯತೆ ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

click me!