
ಮಂಡ್ಯ (ಸೆ.13): ರಾಜ್ಯದಲ್ಲಿ 17 ಅನರ್ಹ ಶಾಸಕರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದೇ ಅನುಮಾನ. ದೇಶದ ಇತರೆ ರಾಜ್ಯಗಳ ಜೊತೆಗೆ ಕರ್ನಾಟಕದಲ್ಲೂ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುರುವಾರ ಅಭಿಪ್ರಾಯಪಟ್ಟರು.
ಮಂಡ್ಯದ ಪಟ್ಟಣದ ಜಯಮ್ಮ- ಶಿವಲಿಂಗೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಉಪ ಅಥವಾ ಮಧ್ಯಂತರ ಚುನಾವಣೆ ನಡೆದರೂ ನೀವುಗಳೆಲ್ಲರೂ ರೆಡಿ ಇರಿ. ಆದರೆ ಒಂದು ಮಾತಂತೂ ಸತ್ಯ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿ ಗೆಲ್ಲಿಸಿ ನನ್ನ ಶಕ್ತಿ ಏನು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇಶದ ಇತರ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಯ ಜೊತೆಯಲ್ಲೇ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆದರೂ ಯಾರೂ ಆಶ್ಚರ್ಯ ಪಡಬೇಡಿ. ಕೇಂದ್ರದ ಲೆಕ್ಕಾಚಾರವೇ ಬೇರೆಯಾಗಿದೆ. ಯಾವುದೇ ಚುನಾವಣೆಯು ನಡೆದರೂ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸುತ್ತೇವೆ. ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಧಿಸಿ ತೋರಿಸುತ್ತೇನೆ ಎಂದು ದೇವೇಗೌಡ ಗುಡುಗಿದರು.