ದಾವಣಗೆರೆ (ಜ.1) : ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗದ ಮಾಲೀಕ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಕಾಡು ಪ್ರಾಣಿಗಳು(Wild animals) ಮಿಲ್‌ನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಜಾಗದ ಮಾಲೀಕ ಎಂಬುದಾಗಿ ಎಸ್ಸೆಸ್ ಮಲ್ಲಿಕಾರ್ಜುನ(SS mallikarjun) ಹೆಸರು ಎಫ್‌ಐಆರ್(FIR)ನಲ್ಲಿ ದಾಖಲಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಎಸ್ಸೆಸ್ ಮಲ್ಲಿಕಾರ್ಜುನ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬೆಳಗಾವಿ: ಎಸ್ಸೆಸ್ಸೆಂ ಬಂಧನಕ್ಕಾಗಿ ಸುವರ್ಣಸೌಧ ಮೆಟ್ಟಿಲು ಮೇಲೆ ರೇಣು ಧರಣಿ
ನಿರೀಕ್ಷಣಾ ಜಾಮೀನು ಕೋರಿ ಮಲ್ಲಿಕಾರ್ಜುನ ಪರವಾಗಿ ವಕೀಲ ಪ್ರಕಾಶ ಪಾಟೀಲ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಜ. 2ಕ್ಕೆ ಮುಂದೂಡಿದರು. ಮಿಲ್‌ನಲ್ಲಿ ಕಾಡು ಪ್ರಾಣಿಗಳು ಪತ್ತೆಯಾದ ಪ್ರಕರಣದಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ ಜಾಗದ ಮಾಲೀಕರಾಗಿ, ನಾಲ್ಕನೇ ಆರೋಪಿ. ಕಾಡು ಪ್ರಾಣಿ ಪತ್ತೆ ಪ್ರಕರದಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ ಹೆಸರಿಲ್ಲ. ಆದರೆ, ಎಫ್‌ಐಆರ್‌ನಲ್ಲಿ ಜಾಗದ ಮಾಲೀಕರಾಗಿ ನಾಲ್ಕನೇ ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಎಸ್ಸೆಸ್ಸೆಂ ಅರ್ಜಿ ಸಲ್ಲಿಸಿದ್ದರು.
ದಾವಣಗೆರೆಯ ಆನೆಕೊಂಡದ ಆರ್‌ಎಂಸಿ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ಕಾಡು ಪ್ರಾಣಿಗಳು ಪತ್ತೆಯಾಗಿದ್ದವು. ಸೆಂಥಿಲ್ ಎಂಬಾತ ಡಿ. 21ರಂದು ಬೆಂಗಳೂರಿನ ಹೆಬ್ಬಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿಂಕೆ ಚರ್ಮ, ಕೊಂಬು ಮಾರಾಟ ಮಾಡಲು ಹೋಗಿದ್ದ ವೇಳೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದದ್ದ. ಅವುಗಳನ್ನು ಕಲ್ಲೇಶ್ವರ ಮಿಲ್‌ನಿಂದ ತಂದಿದ್ದಾಗಿ ಆತ ಬಾಯಿ ಬಿಟ್ಟಿದ್ದ ಹಿನ್ನೆಲೆಯಲ್ಲಿ ಸಿಸಿಐ ಅಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮಿಲ್ ಮೇಲೆ ದಾಳಿ ನಡೆಸಲಾಗಿತ್ತು.
ಕಲ್ಲೇಶ್ವರ ಮಿಲ್ ಹಿಂಭಾಗದ ಜಾಗದಲ್ಲಿ ಜಿಂಕೆ, ಕೃಷ್ಣಮೃಗ, ಕಾಡು ಹಂದಿ, ನರಿ, ಮುಂಗುಸಿಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಸಿಬಿ ಕೈಗೆ ಸಿಕ್ಕಿ ಬಿದ್ದಿದ್ದ ಮೊದಲ ಆರೋಪಿಸೆಂಥಿಲ್, ಮಿಲ್‌ನ ವ್ಯವಸ್ಥಾಪಕ ಸಂಪನ್ನ ಮುತಾಲಿಕ್, ಸಿಬ್ಬಂದಿ ನಿಟ್ಟುವಳ್ಳಿಯ ಕರಿಬಸಯ್ಯ ಹಾಗೂ ಮಿಲ್ ಜಾಗದ ಮಾಲೀಕ ಎಸ್ಸೆಸ್ ಮಲ್ಲಿಕಾರ್ಜುನರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ 2 ಮತ್ತು 3ನೇ ಆರೋಪಿಗಳು ಸಹ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
30 ಪ್ರಾಣಿಗಳು ಆನಗೋಡು ‘ಝೂ’ಗೆ ಸ್ಥಳಾಂತರ
ಮಿಲ್‌ನಲ್ಲಿ ಪತ್ತೆಯಾಗ ವನ್ಯಜೀವಿಗಳನ್ನು ನ್ಯಾಯಾಲಯದ ಅನುಮತಿ ಪಡೆದು, ಅರಣ್ಯ ಇಲಾಖೆಯಿಂದ ತಾಲೂಕಿನ ಆನಗೋಡು ಗ್ರಾಮದ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. 11 ಕೃಷ್ಣ ಮೃಗ, 7 ಜಿಂಕೆ, 2 ನರಿಗಳು, 3 ಮುಂಗುಸಿ, 7 ಕಾಡು ಹಂದಿ ಸೇರಿ ಸೇರಿದಂತೆ 30 ವನ್ಯಜೀವಿಗಳನ್ನು ದಾಳಿ ವೇಳೆ ಪತ್ತೆ ಮಾಡಲಾಗಿದ್ದು, ಇದೀಗ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಸೂಕ್ಷ್ಮ ಜೀವಿಗಳಾದ ಕೃಷ್ಣ ಮೃಗ ಮತ್ತು ಜಿಂಕೆಗಳು ಒಮ್ಮೆಗೆ ಹೊಸ ವಾತಾವರಣದಲ್ಲಿ, ಅಪರಿಚಿತ ಪರಿಸರದಲ್ಲಿ ಹೊಂದಿಕೊಳ್ಳಬೇಕಾಗಿದೆ. ಅವುಗಳು ಹೊಂದಿಕೊಂಡ ನಂತರ ನಿಯಮಾನುಸಾರ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಡಾ.ಮಂಜುನಾಥ ಸಮಕ್ಷಮದಲ್ಲಿ ವನ್ಯಜೀವಿಗಳ ಆರೋಗ್ಯ ಸದೃಢವಾಗಿರುವುದನ್ನು ದೃಢಪಡಿಸಿಕೊಂಡು, ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ. ಕಾಡು ಹಂದಿಗಳಿಗೆ ಕಾಡಿನ ಪ್ರದೇಶದಲ್ಲಿ ಪ್ರತ್ಯೇಕ ಗೇಜ್ ನಿರ್ಮಿಸಿ, ಅಲ್ಲಿಡಲಾಗಿದೆ ಎಂದು ಮೂಲಗಳು ಹೇಳಿವೆ.
ಬೆಳಗಾವಿಯಲ್ಲಿ ಏರಿದ, ದಾವಣಗೆರೆಯಲ್ಲಿ ಇಳಿದ ಪೆಟ್ರೋಲ್ ದರ, ಹೇಗಿದೆ ನಿಮ್ಮ ನಗರದಲ್ಲಿನ ಇಂಧನ ದರ
ಸೂಕ್ಷ್ಮ ಜೀವಿಗಳಾದ ಕೃಷ್ಣಮೃಗ, ಜಿಂಕೆಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಬೋಮಾ(ಬಿಒಎಂಎ) ಮಾದರಿಯಲ್ಲಿ ಕಾಪಾಡಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಪ್ರತ್ಯೇಕ ಜಾಗದಲ್ಲಿ ಶೆಡ್ ನಿರ್ಮಿಸಿ, ಅಲ್ಲಿ ಮಣ್ಣು ಹಾಕಿ, ಜಿಂಕೆಗಳನ್ನು ಬಿಡಲಾಗುವುದು. ಮೃಗಾಲಯದ ಮಾದರಿಯಲ್ಲಿ ಆಹಾರವನ್ನು ಇಟ್ಟು, ಕಾಡಿನ ವಾತಾವರಣ ಸೃಷ್ಟಿಸುವ ಮೂಲಕ ಅವುಗಳು ಹೊಂದಿಕೊಳ್ಳುವಂತೆ ಮಾಡಲಾಗುವುದು. ಆ ನಂತರ ಮೃಗಾಲಯಕ್ಕೆ ಸ್ಥಳಾಂತರಿಸುವುದು ಅರಣ್ಯ ಇಲಾಖೆ ಆಲೋಚನೆ ಎನ್ನಲಾಗಿದೆ.