ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಷರತ್ತುಬದ್ಧ ಒಪ್ಪಿಗೆ ನೀಡಿದೆ. ದೆಹಲಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬಗ್ಗೆ ಚರ್ಚೆ ನಡೆಸಿ ಕೆಲ ಮಾರ್ಗದರ್ಶಿ ಕ್ರಮಗಳನ್ನು ಕೈಗೊಳ್ಳಲೂ ಶಿಫಾರಸು ಮಾಡಿದೆ.
ಕಾರವಾರ (ಜ.31) : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಷರತ್ತುಬದ್ಧ ಒಪ್ಪಿಗೆ ನೀಡಿದೆ.
ದೆಹಲಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬಗ್ಗೆ ಚರ್ಚೆ ನಡೆಸಿ ಕೆಲ ಮಾರ್ಗದರ್ಶಿ ಕ್ರಮಗಳನ್ನು ಕೈಗೊಳ್ಳಲೂ ಶಿಫಾರಸು ಮಾಡಿದೆ.
ಈ ರೈಲು ಮಾರ್ಗ ನಿರ್ಮಾಣಕ್ಕೆ ವಿರೋಧ, ಆಕ್ಷೇಪ ಇಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ರೈಲು ಮಾರ್ಗ ನಿರ್ಮಿಸಬೇಕು. ದೊಡ್ಡ ಪ್ರಮಾಣದಲ್ಲಿ ಅಂದರೆ ಎರಡು ಟ್ರ್ಯಾಕ್‌ಗಳನ್ನು ಅಳವಡಿಸಬೇಕು. ರೈಲು ಮಾರ್ಗದಲ್ಲಿ ಸುರಂಗದ ಉದ್ದ 35 ಕಿ.ಮೀ. ಇರಬೇಕು. ರೈಲ್ವೆ ಮಾರ್ಗ ನಿರ್ಮಾಣ ಮಾಡುವಲ್ಲಿ ಭಾಗಿಯಾಗುವವರು ಮಾರ್ಗದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ವನ್ಯಜೀವಿ ಮಂಡಳಿ ಅಭಿಪ್ರಾಯಪಟ್ಟಿದೆ.
ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ: ಟ್ರೈನ್ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ, ಸಚಿವ ಹೆಬ್ಬಾರ್
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ವನ್ಯಜೀವಿ ಮಂಡಳಿ ಈ ಹಿಂದೆ ಪರವಾನಗಿ ನೀಡಿತ್ತು. ಇದನ್ನು ರದ್ದುಪಡಿಸುವಂತೆ ಪರಿಸರ ಸಂಘಟನೆಗಳು ಹೈಕೋರ್ಚ್ ಮೊರೆ ಹೋಗಿದ್ದವು. ಹೈಕೋರ್ಚ್ ವನ್ಯಜೀವಿ ಮಂಡಳಿಯ ಪರವಾನಗಿಗೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ತಡೆಯಾಜ್ಞೆ ತೆರವಿಗೆ ಹೈಕೋರ್ಚ್ ಮೊರೆ ಹೋಗಿತ್ತು. ಹೈಕೋರ್ಚ್ ತಡೆಯಾಜ್ಞೆ ತೆರವುಗೊಳಿಸಿ ಉನ್ನತಾಧಿಕಾರಿ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ನಡೆಸಿ ಕಾಲಮಿತಿಯಲ್ಲಿ ವರದಿ ನೀಡುವಂತೆ ಕೇಂದ್ರ ವನ್ಯಜೀವಿ ಮಂಡಳಿಗೆ ಸೂಚನೆ ನೀಡಿತ್ತು. ನಂತರ ವನ್ಯಜೀವಿ ಮಂಡಳಿ ಕಾರವಾರ ಹಾಗೂ ಧಾರವಾಡದಲ್ಲಿ ಸಾರ್ವಜನಿಕ ಅಹವಾಲು ಆಲಿಕೆ ಸಭೆ ನಡೆಸಿ, ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿತ್ತು. ರೈಲು ಮಾರ್ಗದ ಪರಿಶೀಲನೆ ನಡೆಸಿತ್ತು. ಇದೀಗ ಅದರ ಆಧಾರದಲ್ಲಿ ನಡೆದ ಸಭೆಯಲ್ಲಿ ಈ ರೈಲು ಮಾರ್ಗಕ್ಕೆ ಷರತ್ತುಬದ್ಧ ಒಪ್ಪಿಗೆ ಕೊಟ್ಟಿದೆ. ಈ ವನ್ಯಜೀವಿ ಮಂಡಳಿಯ ಈ ಶಿಫಾರ ಸ್ಸು ಇನ್ನು ಹೈಕೋರ್ಚ್‌ಗೆ ಸಲ್ಲಿಕೆಯಾಗಬೇಕಿದೆ.