ಆನೆಗಳ ಹಿಂಡು ಗ್ರಾಮದ ಬಳಿಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಜನರನ್ನು ಭಯಭೀತರನ್ನಾಗಿಸಿದೆ. ಕಾಡಾನೆಗಳ ಹಿಂಡು ಧಾವಿಸುತ್ತಿರುವುದನ್ನು ಕಂಡ ಮಕ್ಕಳು ಹಾಗೂ ಹಿರಿಯರು ಕಿರುಚುತ್ತಾ ಓಡಿದ್ದಾರೆ.
ಕನಕಪುರ(ಜು.02): ತಾಲೂಕಿನ ಕಸಬಾ ಹೋಬಳಿಯ ಕೆರಳಾಳುಸಂದ್ರ ಗ್ರಾಮದ ಬಳಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಜನರಿಗೆ ಆತಂಕ ಸೃಷ್ಟಿಸಿದೆ.
ಶನಿವಾರ ಬೆಳಗ್ಗೆ ಆನೆಗಳ ಹಿಂಡು ಗ್ರಾಮದ ಬಳಿಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಜನರನ್ನು ಭಯಭೀತರನ್ನಾಗಿಸಿದೆ. ಕಾಡಾನೆಗಳ ಹಿಂಡು ಧಾವಿಸುತ್ತಿರುವುದನ್ನು ಕಂಡ ಮಕ್ಕಳು ಹಾಗೂ ಹಿರಿಯರು ಕಿರುಚುತ್ತಾ ಓಡಿದ್ದಾರೆ.
ಆನೆಗಳ ಹಿಂಡು ನೋಡಿದ ಜನ ಪಟಾಕಿ ಸಿಡಿಸಿ, ಕಿರುಚಾಟ ನಡೆಸಿ, ಗದ್ದಲ ಎಬ್ಬಿಸಿ ಆನೆಗಳನ್ನು ಓಡಿಸಲು ಯತ್ನಿಸಿದರು. ಇದರಿಂದ ಗಲಿಬಿಲಿಗೊಂಡ ಆನೆಗಳು ಗ್ರಾಮದೊಳಗೆ ನುಗ್ಗಿವೆ. ಆನೆಗಳ ಹಿಂಡು ಗ್ರಾಮದೊಳಗೆ ನುಗ್ಗಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಜನ ಮನೆಯಿಂದ ಹೊರಬರಲು ಹೆದರಿ ಜೀವ ಕೈಯಲ್ಲಿಡಿದು ಕೂರುವಂತಾಗಿತ್ತು. ಆನೆಗಳು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದು, ಒಂದು ಗುಂಪು ಗ್ರಾಮಕ್ಕೆ ನುಗ್ಗಿದ್ದರೆ ಇನ್ನೊಂದು ಗುಂಪು ಗ್ರಾಮದ ಹೊರವಲಯದ ಜಮೀನುಗಳಿಗೆ ಲಗ್ಗೆ ಇಟ್ಟಿದೆ. ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಬೇರೆ ಜಿಲ್ಲೆಗಳಿಂದ ಬಂದಿರುವ ಎಲಿಫೆಂಟ್ ಟಾಸ್‌್ಕ ಫೋರ್ಸ್ ಸಿಬ್ಬಂದಿ ಹಾಗೂ ಬನ್ನೇರಘಟ್ಟಅರಣ್ಯ ವಲಯದ ಸಿಬ್ಬಂದಿ ಆನೆಗಳನ್ನು ಮತ್ತೆ ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಿದ್ದಾರೆ.
RAMANAGARA: ಜನಪ್ರತಿನಿಧಿಗಳ ಸಹಕಾರವಿದ್ದರೆ ಆಂಗ್ಲ ಶಾಲೆಗೆ ಶಂಕು: ಶಾಸಕ ಬಾಲಕೃಷ್ಣ
ಕಾವೇರಿ ವನ್ಯಜೀವಿಧಾಮದಿಂದ ಬಂದ ಆನೆಗಳು?:
ಕಾಡಾನೆಗಳ ಹಿಂಡು ಕಾವೇರಿ ವನ್ಯಜೀವಿಧಾಮದಿಂದ ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಕನಕಪುರ ತಾಲೂಕು ತಮಿಳುನಾಡು ಗಡಿ ವ್ಯಾಪ್ತಿಗೆ ಹೊಂದಿಕೊಂಡಿರುವುದರಿಂದ ಅರಣ್ಯದ ವ್ಯಾಪ್ತಿಯೂ ಅಧಿಕವಾಗಿದೆ. ಕಳೆದ ಎರಡು ತಿಂಗಳಿನಿಂದ ಆನೆಗಳು ಸತತ ದಾಳಿ ರೈತರ ಜಮೀನುಗಳ ಮೇಲೆ ಸತತ ದಾಳಿ ನಡೆಸುತ್ತಿದ್ದು, ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಪಡಿಸಿವೆ. ಇದಲ್ಲದೆ ಕಳೆದ ತಿಂಗಳು ಒಂಟಿ ಸಲಗದ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು.
ಆನೆಗಳ ಉಪಟಳದ ವಿಚಾರ ರಾಮನಗರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹ ಪ್ರಸ್ತಾಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಿ ಆನೆಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಟಾಸ್ಕ್ ಫೋರ್ಸ್ ರಚನೆ:
ಜಿಲ್ಲೆ ವ್ಯಾಪ್ತಿಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಮೈಸೂರು, ಹಾಸನ, ಕೊಳ್ಳೆಗಾಲ ಹಾಗೂ ಚಿಕ್ಕಮಗಳೂರಿನಿಂದ ಎಲಿಫೆಂಟ್ ಟಾಸ್ಕ್ ಫೋರ್ಸ್ ಅನ್ನು ಕರೆಸಿ ಆನೆಗಳನ್ನು ಕಾಡಿಗೆ ಹಿಮ್ಮಟಿಸುವ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಇದರ ಜತೆಗೆ ಜಿಲ್ಲೆಯಲ್ಲಿಯೇ ಎಲಿಫೆಂಟ್ ಟಾಸ್ಕ್ ಫೋರ್ಸ್ ಅನ್ನು ರಚಿಸಿ ಅವರಿಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತಿದೆ. ಒಂದು ಕಡೆ ಎಲಿಫೆಂಟ್ ಟಾಸ್ಕ್‌ಫೋರ್ಸ್ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿರುವ ಹೊತ್ತಿನಲ್ಲಿ ಮತ್ತೊಂದು ಕಡೆಯಿಂದ ಕಾವೇರಿ ವನ್ಯಜೀವಿ ಧಾಮದಿಂದ ಆನೆಗಳ ದೊಡ್ಡ ಹಿಂಡು ಪ್ರತ್ಯಕ್ಷವಾಗಿರುವುದು ಆತಂಕ ಮೂಡಿಸಿದೆ.
ನಾನು ಗ್ರಾನೈಟ್ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ
ಆನೆಗಳ ಹಿಂಡು ಪ್ರತ್ಯಕ್ಷವಾದೊಡಗೆ ಎಲಿಫೆಂಟ್ ಟಾಸ್ಕ್ ಫೋರ್ಸ್‌ನೊಂದಿಗೆ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆ ಹೊತ್ತಿಗೆ ಸುಮಾರು 10ಕ್ಕೂ ಹೆಚ್ಚು ಆನೆಗಳನ್ನು ಓಡಿಸಿದ್ದು, ಉಳಿದ ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನಕಪುರ ತಾಲೂಕಿನ ಕೆರಳಾಳುಸಂದ್ರ ಗ್ರಾಮದ ಬಳಿ ಆನೆಗಳ ಹಿಂಡು ಧಾವಿಸಿರುವ ವಿಚಾರ ತಿಳಿಯುತ್ತಲೇ ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಿದೆ. ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಆನೆಗಳನ್ನು ಕಾವೇರಿ ವನ್ಯಜೀವಿಧಾಮಕ್ಕೆ ಹಿಮ್ಮೆಟ್ಟಿಸಲಾಗಿದೆ. ಉಳಿದ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಅಂತ ರಾಮನಗರ ಡಿಸಿಎಫ್ ದೇವರಾಜು ತಿಳಿಸಿದ್ದಾರೆ.