Chikkamagaluru: ಸೆರೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಪುಂಡಾನೆಯಿಂದ ಮಲೆನಾಡಿಗರು ಹೈರಾಣು

By Govindaraj SFirst Published Aug 22, 2022, 9:52 PM IST
Highlights

ಬಯಲು ಸೀಮೆಯ ಜನರಿಗೆ ಕಾಟ ಕೊಟ್ಟು ಸೆರೆಯಾದ ಪುಂಡಾನೆ ಮಲೆನಾಡಿನ ಜನರನ್ನ ನಿದ್ದೆಗೆಡಿಸಿದೆ. ಈ ಪುಂಡಾನೆಯನ್ನು ಸೆರೆ ಹಿಡಿಯಲು ಬೇರೆ ಆನೆಗಳು ಮಲೆನಾಡಿಗೆ ಬಂದರೂ ಆ ಪುಂಡಾನೆ ಸೆರೆಯಾಗುತ್ತಿಲ್ಲ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.22): ಬಯಲು ಸೀಮೆಯ ಜನರಿಗೆ ಕಾಟ ಕೊಟ್ಟು ಸೆರೆಯಾದ ಪುಂಡಾನೆ ಮಲೆನಾಡಿನ ಜನರನ್ನ ನಿದ್ದೆಗೆಡಿಸಿದೆ. ಈ ಪುಂಡಾನೆಯನ್ನು ಸೆರೆ ಹಿಡಿಯಲು ಬೇರೆ ಆನೆಗಳು ಮಲೆನಾಡಿಗೆ ಬಂದರೂ ಆ ಪುಂಡಾನೆ ಸೆರೆಯಾಗುತ್ತಿಲ್ಲ. ಸೂಕ್ಷ್ಮ ಪ್ರಾಣಿಯಾಗಿರುವ ಕಾಡಾನೆಯನ್ನು ಹನಿಟ್ರ್ಯಾಪ್ ಮಾಡಿಸಿ ಸೆರೆ ಹಿಡಿಯುವ ಅರಣ್ಯ ಇಲಾಖೆಯ ಕಾರ್ಯತಂತ್ರಕ್ಕೆ ಮಲೆನಾಡಿನಲ್ಲಿ ಹಿನ್ನಡೆಯಾಗಿದೆ. 

ಹನಿಟ್ರ್ಯಾಪ್ ತಂತ್ರಕ್ಕೆ ಹಿನ್ನಡೆ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ, ಹೇರೂರು, ಹಿರೇಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರೀಕರ ಭೀತಿಗೆ ಕಾರಣವಾಗಿರುವ ಹಾವೇರಿ ಟಸ್ಕರ್ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಕಳೆದ ನಾಲ್ಕು ದಿನಗಳಿಂದ ಪ್ರಾರಂಭಿಸಲಾಗಿತ್ತು. ಸಕ್ರೆಬೈಲ್ ಆನೆ ಶಿಬಿರದಿಂದ ಬಂದಿರುವ ಹೆಣ್ಣಾನೆ ಭಾನುಮತಿ ಮೂಲಕ ಹನಿಟ್ರ್ಯಾಪ್ ಮಾಡಿಸಿ ಸೆರೆ ಹಿಡಿಯಲು ಕೊಪ್ಪ ಡಿಸಿಎಫ್ಒ ನಿಲೇಶ್ ಶಿಂಧೆ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯತಂತ್ರ ರೂಪಿಸಿದರು. ಹೆಣ್ಣಿನ ಮೋಹಕ್ಕೂ ಬೀಳದ ಪುಂಡ ಒಂಟಿ ಸಲಗವೊಂದು ಅರಣ್ಯಾಧಿಕಾರಿಗಳು ಹೈರಾಣುಗುವಂತೆ ಹಿಂಸೆ ಕೊಡುತ್ತಿದ್ದು, ಒಂಟಿ ಸಲಗವನ್ನ ಸೆರೆ ಹಿಡಿಯಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 

Chikkamagaluru; ಸಿದ್ದು ಕಾರಿಗೆ ಮೊಟ್ಟೆ ಎಸೆತ ಪ್ರಕರಣ, ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮೊಟ್ಟೆ ವಿತರಣೆ

ಮಲೆನಾಡಿನ ಭಾಗದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಪುಂಡಾನೆ ಕಾಟ ಕೊಡುತ್ತಿತ್ತು. ಇಡೀ ರಾತ್ರಿ ದಾಂಧಲೆ ಮಾಡಿ ಹಗಲಲ್ಲಿ ಸುತ್ತಲೂ ಪ್ರಪಾತವಿರುವ ಎತ್ತರದ ಜಾಗದಲ್ಲಿ ನಿಲ್ಲುತ್ತಿತ್ತು. ಇದರಿಂದ ಅಧಿಕಾರಿಗಳು ಹಾಗೂ ಸ್ಥಳಿಯರು ಹೈರಾಣಾಗಿದ್ದರು. ಈ ಪುಂಡಾನೆಯನ್ನ ಹಿಡಿಯಲು ಶಿವಮೊಗ್ಗದಿಂದ ಸಾಕಾನೆಗಳನ್ನ ಕರೆಸಿದ್ದರು. ಮೂರು ದಿನದಿಂದ ಕಾರ್ಯಾಚರಣೆ ನಡೆಸಿದರೂ ಒಂಟಿ ಸಲಗ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದೆ. 11 ಮಾವುತರು, ಐದು ಸಾಕಾನೆಗಳು, ಅಧಿಕಾರಿಗಳು ಸೇರಿ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು ಆನೆ ಸೆರೆಯಾಗಿಲ್ಲ.

ಸೆರೆಗೆ ಮುಂದಾಗುತ್ತಿದ್ದಂತೆ ಗುಡ್ಡದ ಪ್ರಪಾತ ಸ್ಥಳಕ್ಕೆ ಹೋಗುತ್ತಿರುವ ಒಂಟಿ ಸಲಗ: ಒಂದೆಡೆ ಆನೆ ಸೆರೆಯಾಗುತ್ತಿಲ್ಲ. ಮತ್ತೊಂದಡೆ ಹಗಲಲ್ಲಿ ದಾಂಧಲೆ ನಡೆಸುತ್ತಿರೋ ಒಂಟಿ ಸಲಗ ಮೇಗುಂದ ಹೋಬಳಿಯ ಗುಡ್ಡದ ಎತ್ತರಕ್ಕೆ ಹೋಗಿ ನಿಲ್ಲುತ್ತಿದೆ. ಸುತ್ತಲೂ ಪ್ರಪಾತವಿದ್ದು ಬೆದರಿಸಿದರೆ ಬಿದ್ದು ಪ್ರಾಣ ಕಳೆದುಕೊಳ್ಳಬಹುದು ಎಂದು ಅಧಿಕಾರಿಗಳು ಆನೆಯನ್ನ ಬೆದರಿಸಲು ಮುಂದಾಗದೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸಾಕು ಹೆಣ್ಣಾನೆ ಭಾನುಮತಿ ಮೂಲಕ ಒಂಟಿ ಸಲಗಕ್ಕೆ ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಮುಂದಾದರೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಮೂರು ದಿನದಿಂದ ಉಪಯೋಗವಿಲ್ಲದ ಕಾರ್ಯಚರಣೆ ನಡೆಸುತ್ತಿದ್ದಾರೆ. 

ಪ್ರವಾಹ ಪರಿಹಾರಕ್ಕೆ ನೂರಾರು ವಿಘ್ನ: ಸರ್ಕಾರದ ಕಣ್ಣಾಮುಚ್ಚಾಲೆ ಆಟ RTI ಮಾಹಿತಿಯಲ್ಲಿ ಬಹಿರಂಗ

ಅಧಿಕಾರಿಗಳು ಎಷ್ಟೆ ಪ್ರಯತ್ನಪಟ್ಟರೂ ಒಂಟಿ ಸಲಗವನ್ನ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಈ ಪುಂಡಾನೆಗೆ ಹಾವೇರಿ ಟಸ್ಕರ್ ಕೊರಳಿಗೆ ರೇಡಿಯೋ ಕಾಲರ್ ಇದ್ದು ಅದು ಇರುವ ನಿಖರ ಜಾಗ ತಿಳಿದಿದ್ದರೂ ಅಧಿಕಾರಿಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು, ಪುಂಡಾನೆ ಮುಂದೆ ಅಸಹಾಯಕರಾಗಿದ್ದಾರೆ. ಈ ಹಿಂದೆ ಹಾವೇರಿಯಲ್ಲಿ ದಾಂಧಲೆ ನಡೆಸಿ ರೈತರ ನಿದ್ದೆಗೆಡಿಸಿದ್ದ ಹಾವೇರಿ ಟಸ್ಕರ್ ಕಾಡಾನೆಯನ್ನು ಮೋಹಕ್ಕೆ ಒಳಪಡಿಸಿ ಸೆರೆ ಹಿಡಿಯಲು ನೆರವಾಗಿತ್ತು. ಸೂಕ್ಷ್ಮ ಪ್ರಾಣಿಯಾಗಿರುವ ಕಾಡಾನೆ ಭಾನುಮತಿಯ ಹನಿಟ್ರ್ಯಾಪ್ ತಂತ್ರಕ್ಕೆ ಬೀಳುತ್ತಿಲ್ಲ. ಇದರಿಂದ  ಆನೆ ಹಿಡಿಯುವ ಕಾರ್ಯಾಚರಣೆ ತಡವಾಗಿದೆ. ಇದರ ಜೊತೆಗೆ ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಲೂ ಹಾವೇರಿ ಟಸ್ಕರ್ ಸೆರೆಗೆ ಹಿನ್ನೆಡೆ ಉಂಟಾಗುತ್ತಿದೆ.

click me!