ಪತ್ನಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

Published : May 22, 2019, 07:55 AM IST
ಪತ್ನಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

ಸಾರಾಂಶ

ಪತ್ನಿಯ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು :  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸತ್ತ ಕಾರು ಚಾಲಕನೊಬ್ಬ, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಕುಟುಂಬದವರೇ ಕಾರಣ ಎಂದು ಆರೋಪಿಸಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ಸಮೀಪದ ನಡೆದಿದೆ.

ಮಂಜುನಾಥ ನಗರದ ನಿವಾಸಿ ಎಸ್‌.ಶ್ರೀನಿವಾಸ್‌ (34) ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಮನೆಯಲ್ಲಿ ಶ್ರೀನಿವಾಸ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದ ಮೃತನ ಕುಟುಂಬದ ಸದಸ್ಯರು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಸಂಬಂಧ ಮೃತನ ಪತ್ನಿ ಸುಮಾ, ಅವರ ತಂದೆ ಗಂಗಣ್ಣ, ತಾಯಿ ಶಾರದಾ ಹಾಗೂ ಅಣ್ಣ ಸುನೀಲ್‌ ಕುಮಾರ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ (ಐಪಿಸಿ 306) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಂದೂವರೆ ವರ್ಷದ ಹಿಂದೆ ಸುಮಾ ಜತೆ ಶ್ರೀನಿವಾಸ್‌ ವಿವಾಹವಾಗಿದ್ದರು. ಬಳಿಕ ಸೋದರನ ಕಾರನ್ನೇ ಬಾಡಿಗೆ ಓಡಿಸುತ್ತಿದ್ದ ಆತ, ಪತ್ನಿ ಜತೆ ಪ್ರತ್ಯೇಕವಾಗಿ ನೆಲೆಸಿದ್ದ. ಮದುವೆ ನಂತರ ಕೌಟುಂಬಿಕ ಕಾರಣಗಳಿಗೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದರಿಂದ ಬೇಸತ್ತು ಶ್ರೀನಿವಾಸ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪತ್ನಿ ಕಾಟ ತಾಳಲಾರದೇ ಮನೆ ಬಿಟ್ಟು ಬಂದಿದ್ದ:  ಮದುವೆ ನಂತರ ಸೋದರನಿಗೆ ಆತನ ಪತ್ನಿ ಸುಮಾ ಹಾಗೂ ಆಕೆಯ ಕುಟುಂಬ ಸದಸ್ಯರು ಕಿರುಕುಳ ಕೊಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವುದು ತಡವಾದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು. ಅವರ ವರ್ತನೆಯಿಂದ ಸೋದರ ತುಂಬ ಬೇಸರಗೊಂಡಿದ್ದ ಎಂದು ಮೃತನ ಸೋದರ ರವೀಶ್ವರ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಮದುವೆ ಬಳಿಕ ಎಲ್ಲರೂ ಒಟ್ಟಿಗೆ ವಾಸವಾಗಿದ್ದೆವು. ಆದರೆ ಒಂದೂವರೆ ತಿಂಗಳ ಹಿಂದೆ ಸುಮಾ ಬೇರೆ ಮನೆ ಮಾಡುವಂತೆ ಸುಮಾ ಹಠ ಹಿಡಿದ್ದಳು. ಕೊನೆಗೆ ಆಕೆಯ ರೋದನೆ ತಾಳಲಾರದೆ ಸೋದರ ಪ್ರತ್ಯೇಕ ಮನೆ ಮಾಡಿದ್ದ. ಅಲ್ಲಿ ಆತನಿಗೆ ಸುಮಾಳ ಇಡೀ ಕುಟುಂಬವೇ ಚಿತ್ರಹಿಂಸೆ ನೀಡಲಾರಂಭಿಸಿತ್ತು. ಈ ಕಿರುಕುಳ ಸಹಿಸಲಾರದೆ ಶ್ರೀನಿವಾಸ, ಇತ್ತೀಚಿಗೆ ಪತ್ನಿಯ ಕುಟುಂಬವನ್ನು ತೊರೆದು ನಮ್ಮ ಮನೆಗೆ ಮರಳಿದ್ದ. ಮೇ 17ರಂದು ನಾವು ದೇವಾಲಯಕ್ಕೆ ತೆರಳಿದ ನಂತರ ಶ್ರೀನಿವಾಸ್‌ ನೇಣಿಗೆ ಶರಣಾಗಿದ್ದಾನೆ. ಈ ಸಾವಿಗೆ ಕಾರಣರಾದ ಸುಮಾ ಹಾಗೂ ಅವರ ಕುಟುಂಬದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರವೀಶ್ವರ್‌ ಮನವಿ ಮಾಡಿದ್ದಾರೆ.

ಮೃತನ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಅದರಲ್ಲಿ ತನ್ನ ಸಾವಿಗೆ ಪತ್ನಿ ಸುಮಾ ಮತ್ತು ಆಕೆಯ ಕುಟುಂಬ ಸದಸ್ಯರು ಕಾರಣ ಎಂದೂ ಉಲ್ಲೇಖವಾಗಿದೆ. ಈ ಪತ್ರ ಮತ್ತು ಮೃತನ ಸೋದರ ದೂರು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
19ರ ಯುವಕನ ಕಾರು ಚಾಲನೆಗೆ ಹೋಯ್ತು ಪಾದಾಚಾರಿ ಪ್ರಾಣ, ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ