ತುಳುವನ್ನು ರಾಜ್ಯದ 2ನೇ ಭಾಷೆಯನ್ನಾಗಿ ಘೋಷಣೆ ಮಾಡಲು ಅಧ್ಯಯನ ಸಮಿತಿ ಯಾಕೆ? ಘೋಷಣೆ ಮಾಡ್ತೀರಾ, ಇಲ್ವಾ ಹೇಳಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಂಗಳೂರು (ಫೆ.7) : ತುಳುವನ್ನು ರಾಜ್ಯದ 2ನೇ ಭಾಷೆಯನ್ನಾಗಿ ಘೋಷಣೆ ಮಾಡಲು ಅಧ್ಯಯನ ಸಮಿತಿ ಯಾಕೆ? ಘೋಷಣೆ ಮಾಡ್ತೀರಾ, ಇಲ್ವಾ ಹೇಳಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ತುಳು ಭಾಷೆಗೆ ಈ ಮಾನ್ಯತೆ ನೀಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿರುವಾಗ ಅಧ್ಯಯನ ಸಮಿತಿ ಮಾಡ್ತಿದ್ದಾರೆ ಅಂದ್ರೆ ಅವರಿಗೆ ಇದರ ಉದ್ದೇಶವೇ ಇಲ್ಲ. ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಅಷ್ಟೇ. ಕನ್ನಡ ಮತ್ತು ಸಂಸ್ಕೃತಿ ಸಚಿವರು ತುಳುನಾಡಿನವರೇ ಆಗಿರುವಾಗ ಇದುವರೆಗೆ ಯಾಕೆ ಸ್ಪಷ್ಟತೀರ್ಮಾನ ಕೈಗೊಂಡಿಲ್ಲ? ಎಂದು ಅವರು ಪ್ರಶ್ನಿಸಿದರು.
ಪೊಲೀಸ್ರು ನಾಯಿ ಥರ ಮರಳು ದಂಧೆಕೋರರ ಹಿಂದೆ ಹೋಗ್ತಾರಲ್ಲ, ನಾಚಿಕೆ ಆಗಲ್ವಾ? : ಉಳ್ಳಾಲ ಪೊಲೀಸರಿಗೆ ಖಾದರ್ ಕ್ಲಾಸ್!
ತುಳುವಿಗಾಗಿಯೇ ಅಕಾಡೆಮಿ ಇದೆ. ಸಾಕಷ್ಟುಸಾಹಿತ್ಯ ರಚನೆಯಾಗಿದೆ, ಸಾಹಿತಿಗಳಿದ್ದಾರೆ, ತುಳು ಯಕ್ಷಗಾನಗಳಿವೆ. ಇಷ್ಟೆಲ್ಲ ಸುದೀರ್ಘವಾದ ಇತಿಹಾಸ ಇರುವಾಗ ಅಧ್ಯಯನ ಸಮಿತಿ ರಚಿಸುವ ಅಗತ್ಯವೇನು? ನೇರವಾಗಿ ಘೋಷಣೆ ಮಾಡಲು ಏನು ಸಮಸ್ಯೆ? ಬಿಜೆಪಿ ಸರ್ಕಾರ ಈ ತೀರ್ಮಾನ ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ಬಂದಾಗ ಈ ತೀರ್ಮಾನ ಕೈಗೊಳ್ಳಲು ಬದ್ಧ ಎಂದು ಖಾದರ್ ಹೇಳಿದರು.
ಶಾ ರಸ್ತೆ ಮಾರ್ಗವಾಗಿ ಬರಲಿ: ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11ರಂದು ರೋಡ್ ಶೋ ಆಯೋಜಿಸಿರುವುದು ಸಂತೋಷ. ಅವರು ಬರುವಾಗ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬರಲಿ. ರಸ್ತೆಯಲ್ಲಿ ಎಷ್ಟುಹೊಂಡ ಗುಂಡಿಗಳಿವೆ ನೋಡಲಿ. ಅಮಿತ್ ಶಾ ಅವರನ್ನು ರಸ್ತೆ ಮಾರ್ಗದ ಮೂಲಕ ಕರೆದುಕೊಂಡು ಬಂದರೆ ಸೆಲ್ಯೂಟ್ ಹೊಡೆಯುವುದಾಗಿ ಹೇಳಿದರು. ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಉಮರ್ ಫಾರೂಕ್, ಮುಸ್ತಫಾ, ಅಬ್ದುಲ್ ಖಾದರ್ ಮತ್ತಿತರರಿದ್ದರು.