ಎಲ್ಲರಿಗೂ ಅಧಿಕಾರದ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಒಂದು ವರ್ಷದ ಅವಧಿಗೆ ಮೇಯರ್ ಅಧಿಕಾರವನ್ನು ಸೀಮಿತಗೊಳಿಸಿ ಒಳಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಬಾರಿ ಮೇಯರ್ ಗದ್ದುಗೆ ಏರುವ ಅದೃಷ್ಟವಂತರು ಯಾರು? ಎಂಬ ಕುತೂಹಲವಿದೆ.
ಕೆ.ಎಂ. ಮಂಜುನಾಥ್
ಬಳ್ಳಾರಿ(ನ.19): ಮಹಾನಗರ ಪಾಲಿಕೆ ಮೇಯರ್ ಡಿ. ತ್ರಿವೇಣಿ ರಾಜೀನಾಮೆ ನೀಡಿದ ಬೆನ್ನಲ್ಲೇ ಮೂರನೇ ಅವಧಿಯ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಾಲಿಕೆ ಸದಸ್ಯರಲ್ಲಿ ತೆರೆಮರೆಯ ಪೈಪೋಟಿ ಶುರುವಾಗಿದೆ.
ಎಲ್ಲರಿಗೂ ಅಧಿಕಾರದ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಒಂದು ವರ್ಷದ ಅವಧಿಗೆ ಮೇಯರ್ ಅಧಿಕಾರವನ್ನು ಸೀಮಿತಗೊಳಿಸಿ ಒಳಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಬಾರಿ ಮೇಯರ್ ಗದ್ದುಗೆ ಏರುವ ಅದೃಷ್ಟವಂತರು ಯಾರು? ಎಂಬ ಕುತೂಹಲವಿದೆ.
undefined
ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸ್, ಕುಬೇರ, ಉಮಾದೇವಿ ಶಿವರಾಜ್ ಹಾಗೂ ಶ್ವೇತಾ ಅವರು ಮೇಯರ್ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದು, ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಆದರೆ ಜಿಲ್ಲಾ ಸಚಿವರು, ನಗರ ಶಾಸಕರು, ಪಕ್ಷದ ಹಿರಿಯ ನಾಯಕರು ಸೇರಿ ಒಮ್ಮತದ ನಿರ್ಧಾರದ ಮೂಲಕವೇ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ. ಜಿಲ್ಲಾ ಸಚಿವ ಬಿ. ನಾಗೇಂದ್ರ ಅವರು ತೆಲಂಗಾಣ ಚುನಾವಣೆ ಹಿನ್ನಲೆಯಲ್ಲಿ ಹೈದರಾಬಾದ್‌ಗೆ ತೆರಳಿದ್ದು, ಬರುತ್ತಿದ್ದಂತೆಯೇ ಮೇಯರ್ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನ. 28ರಂದು ಪಾಲಿಕೆಯ ಮೇಯರ್ ಆಯ್ಕೆಗಾಗಿ ಚುನಾವಣೆ ನಡೆಸುವ ಕುರಿತು ಕಲಬುರಗಿಯ ಪ್ರಾದೇಶಿಕ ಆಯುಕ್ತರು ಚುನಾವಳೆ ವೇಳಾಪಟ್ಟಿ ಹೊರಡಿಸಿದ್ದಾರೆ.
ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಲವ್, ಸೆಕ್ಸ್, ಧೋಖಾ ಆರೋಪ
ಅಧಿಕಾರದ ಏಣಿಯಾಟ:
ಕಳೆದ ಪಾಲಿಕೆ ಚುನಾವಣೆಯಲ್ಲಿ ಪಾಲಿಕೆಯ 39 ವಾರ್ಡ್‌ಗಳ ಪೈಕಿ 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ 13 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಪಡೆದಿದ್ದು, ಐವರು ಪಕ್ಷೇತರರು ಗೆಲುವು ಪಡೆದಿದ್ದರು. ಈ ಐವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ನ ಸದಸ್ಯ ಸಂಖ್ಯೆಯ ಬಲ 26ಕ್ಕೇರಿದೆ. ಕಾಂಗ್ರೆಸ್‌ನ ಬಹುಸಂಖ್ಯಾಬಲ ಹೊಂದಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಮೊದಲ ಅವಧಿಗೆ ರಾಜೇಶ್ವರಿ ಮೇಯರ್ ಆಗಿದ್ದರು. ಬಳಿಕ ಎರಡನೇ ಅವಧಿಗೆ ಡಿ. ತ್ರಿವೇಣಿ ಮೇಯರ್ ಆಗಿ ಅಧಿಕಾರ ವಹಿಸಿಕೊಂಡರು. ಒಂದು ವರ್ಷ ಅವಧಿ ಪೂರ್ಣಗೊಳ್ಳುವ ಮುನ್ನವೇ ತ್ರಿವೇಣಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಹಾಗೆ ನೋಡಿದರೆ ತ್ರಿವೇಣಿ ಅವರ ಅಧಿಕಾರ ಮಾರ್ಚ್ ವರೆಗೆ ಇತ್ತು. ಆದರೆ, ಏಕಾಏಕಿಯಾಗಿ ಅವರು ನ. 4ರಂದು ರಾಜಿನಾಮೆ ನೀಡಿದ್ದು, ಇದೀಗ ಮೂರನೇ ಅವಧಿಯ ಮೇಯರ್ ಆಯ್ಕೆ ನಡೆಯಬೇಕಿದೆ.
ಮೇಯರ್ ಆಯ್ಕೆ ಸಂಬಂಧ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಂತಿಮವಾಗಿ ಪಕ್ಷದ ಎಲ್ಲ ನಾಯಕರು ಸಭೆ ನಡೆಸಿ, ಮೇಯರ್ ಅಭ್ಯರ್ಥಿಯ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ರಾಜ್ಯದಲ್ಲಿ ಭೀಕರ ಬರ ಮಧ್ಯೆ ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋದ ಜನಪ್ರತಿನಿಧಿಗಳು: ಸಂಕಷ್ಟದಲ್ಲಿ ಜನತೆ..!
ಅಭಿವೃದ್ಧಿ ಅಡ್ಡಿ:
ಮೂರನೇ ಅವಧಿಯ ಮೇಯರ್ ಸ್ಥಾನದ ಅಧಿಕಾರ ಮಾರ್ಚ್ ವರೆಗೆ. ಅಂದರೆ ಬರೀ ನಾಲ್ಕು ತಿಂಗಳು ಮಾತ್ರ. ಪಾಲಿಕೆಯಲ್ಲಿ ಪದೇ ಪದೇ ಮೇಯರ್ ಚುನಾವಣೆ ನಡೆಸುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ನಾನು ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ. ಬರೀ ನಾಲ್ಕು ತಿಂಗಳಷ್ಟೇ ಸೇವಾವಧಿ ಇದ್ದರೂ ಇರುವ ಸಮಯದಲ್ಲಿಯೇ ನಗರದ ಅಭಿವೃದ್ಧಿ ನೆಲೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಬಳ್ಳಾರಿ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ ತಿಳಿಸಿದ್ದಾರೆ.