
ಮೌನೇಶ ವಿಶ್ವಕರ್ಮ
ಬಂಟ್ವಾಳ (ಆ.23):
ಇವರೊಬ್ಬ ಪೌರ ಕಾರ್ಮಿಕ. ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ರಸ್ತೆ ಬದಿ ಕಸ ಗುಡಿಸುತ್ತಾರೆ. ಅದರಲ್ಲೇನು ವಿಶೇಷ ಅಂತೀರಾ? ಈ ಪೌರ ಕಾರ್ಮಿಕ ಕಸ ಗುಡಿಸುವ ಸ್ಥಳಕ್ಕೆ ಬರುವುದು ತನ್ನದೇ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ!
ನಂಬಲು ಆಗುತ್ತಿಲ್ಲ ಎಂದಾದರೆ, ನೀವು ಬಂಟ್ವಾಳದ ಬಿ.ಸಿ. ರೋಡ್‌ಗೆ ಬಂದರೆ ಕಣ್ಣಾರೆ ನೋಡಬಹುದು.
ಬಂಟ್ವಾಳದ ಸೇಸಪಣ್ಣ ಎಂಬ ಪೌರ ಕಾರ್ಮಿಕ ಪ್ರತಿನಿತ್ಯ ಕೆಲಸದ ಸ್ಥಳಕ್ಕೆ ತಮ್ಮದೇ ಫಾರ್ಚೂನರ್ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ಬರುತ್ತಾರೆ. ಒಂದು ಜಾಗದಲ್ಲಿ ಅದನ್ನು ನಿಲ್ಲಿಸಿ ಬೆಳಗ್ಗೆ 5ಕ್ಕೇ ಪೊರಕೆ ಹಿಡಿದು ತಮ್ಮ ಕೆಲಸ ಆರಂಭಿಸುತ್ತಾರೆ. 50 ರು. ದಿನಗೂಲಿಯಿಂದ ಆರಂಭವಾದ ಅವರ ಬದುಕು ಈಗ 35 ಲಕ್ಷ ರು. ಮೌಲ್ಯದ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ.
1996ರಲ್ಲಿ ಕೇವಲ ₹50 ದಿನಗೂಲಿಗೆ ಪೌರಕಾರ್ಮಿಕರಾಗಿ ಕೆಲಸ ಕೆಲಸ ಆರಂಭಿಸಿದ ಸೇಸಪ್ಪಣ್ಣ, ದಿನ ಕಳೆದಂತೆ ಕಾಯಂ ನೌಕರರಾದರು. 3ನೇ ತರಗತಿಯ ವಿದ್ಯಾಭ್ಯಾಸ ಹೊಂದಿದ್ದರೂ, ಬದುಕಿನ ಪಾಠಗಳನ್ನು ಅವರು ಅನುಭವದಿಂದ ಕಲಿತರು. ಜೀವನದ ಒಂದು ಹಂತದಲ್ಲಿ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ ಅದನ್ನು ತಮ್ಮ ಬದುಕಿನ ಅಂತಿಮ ಅಧ್ಯಾಯವಾಗಲು ಅವರು ಬಿಡಲಿಲ್ಲ.
2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್‌ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತು ಅವರಿಗೆ ಪ್ರೇರಣೆಯಾಯಿತು. ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿ, ದುಡಿಮೆಯ ದಾರಿಯಲ್ಲಿ ಹೊಸ ಬದುಕು ಆರಂಭಿಸಿದರು. ಅಲ್ಲಿಂದ ಸೇಸಪ್ಪಣ್ಣ ಜೀವನದ ದಿಕ್ಕೇ ಬದಲಾಯಿತು. ದುಡಿಮೆ ಜತೆಗೆ ಕಾರು ಖರೀದಿಸುವ ಕ್ರೇಜ್ ಶುರುವಾಯಿತು. ಒಂದೊಂದು ಕಾರಿನಿಂದ ಬಡ್ತಿ ಪಡೆದು ಈಗ ಫಾರ್ಚೂನರ್ ಮಟ್ಟಕ್ಕೆ ಬೆಳೆದಿದ್ದಾರೆ.
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಂಟ್ವಾಳದ ಬಿ.ಸಿ. ರೋಡಿಗೆ ಆಗಮಿಸುವ ಸೇಸಪ್ಪಣ್ಣ ಅವರು, ಮಧ್ಯಾಹ್ನ 12 ಗಂಟೆಯವರೆಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾರೆ. ರಸ್ತೆ ಗುಡಿಸುವುದರಿಂದ ಹಿಡಿದು ತಮಗೆ ವಹಿಸಿದ ವಿವಿಧ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಾರೆ. ಅಗತ್ಯವಿದ್ದಾಗ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಕೆಲಸ ಯಾವುದು ಎನ್ನುವುದಕ್ಕಿಂತ, ಅದನ್ನು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸುತ್ತಿದ್ದಾರೆ.
ಸೇಸಪ್ಪಣ್ಣ ಅವರು ಪೌರ ಕಾರ್ಮಿಕ ಕೆಲಸ ಮಗಿಸಿ, ಮಧ್ಯಾಹ್ನದ ಬಳಿಕ ಹೈನುಗಾರಿಕೆ ಹಾಗೂ ಕೂಲಿ ಕೆಲಸಕ್ಕೂ ತೆರಳುತ್ತಾರೆ. ಹೈನುಗಾರಿಕೆಯಿಂದ ಮಾಸಿಕ 39 ಸಾವಿರ ರು.ನಷ್ಟು ಮೊತ್ತ ಅವರ ಕೈಗೆ ಸಿಗುತ್ತದೆ. ಪೌರಕಾರ್ಮಿಕ ವೃತ್ತಿಯಿಂದ ಸಿಗುವ ಸಂಬಳ ಹಾಗೂ ಹೈನುಗಾರಿಕೆಯ ವರಮಾನ ಮತ್ತು ಕೂಲಿ ಕೆಲಸದಿಂದ ಈ ಹಂತಕ್ಕೆ ಬಂದಿದ್ದಾರೆ.
ಸೇಸಪ್ಪಣ್ಣ ಬದುಕಿನಲ್ಲಿ ಮರೆಯಲಾಗದ ನೋವುಗಳೂ ಇವೆ. ತಂದೆ ನಿಧನರಾದಾಗ ಅಂತ್ಯಸಂಸ್ಕಾರ ನಡೆಸಲು ಕೈಯಲ್ಲಿ ಹಣವಿರಲಿಲ್ಲ. ನೆರವಿಗೆ ಜನರೂ ಇರಲಿಲ್ಲ. ಕೊನೆಗೆ ತಂದೆಯ ಮೃತದೇಹವನ್ನು ತಾವೇ ಹೊತ್ತು ನೇತ್ರಾವತಿ ನದಿ ತೀರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಅವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.
ಸೇಸಪ್ಪಣ್ಣನ ಕಥೆಯಲ್ಲಿ ವಿಶೇಷವಾಗಿ ಗಮನಿಸಬೇಕಾದದ್ದು ಅವರ ವೃತ್ತಿಯ ಬಗ್ಗೆ ಇರುವ ಗೌರವ. ಫಾರ್ಚೂನರ್‌ನಲ್ಲಿ ಕೆಲಸಕ್ಕೆ ಬಂದರೂ ಕೈಯಲ್ಲಿ ಪೊರಕೆ ಹಿಡಿಯಲು ಅವರು ಹಿಂಜರಿಯುವುದಿಲ್ಲ. ಇದೇ ಅವರ ಬದುಕಿನ ದೊಡ್ಡ ಸಂದೇಶ.
ಆರಂಭದಲ್ಲಿ ಸಣ್ಣ ಕಾರೊಂದನ್ನು ಖರೀದಿಸಿದ್ದ ಅವರು, ಬಳಿಕ ಆಲ್ಟೋ, ನಂತರ ಸ್ಕಾರ್ಪಿಯೋ ಕಾರನ್ನು ಹೊಂದಿದ್ದರು. ಪ್ರತಿಬಾರಿಯೂ ತಮ್ಮಲ್ಲಿದ್ದ ಹಳೆಯ ಕಾರನ್ನು ಬದಲಾಯಿಸಿ, ಅಗತ್ಯವಿದ್ದಷ್ಟು ಸಾಲ, ಲೋನ್ ಪಡೆದು ಹೊಸ ಕಾರನ್ನು ಖರೀದಿಸುತ್ತಾ ಬಂದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ತಮ್ಮಲ್ಲಿದ್ದ ಆಲ್ಟೋ ಮತ್ತು ಸ್ಕಾರ್ಪಿಯೋ 2 ಕಾರುಗಳನ್ನು ನೀಡಿ, ಅದರ ಜತೆಗೆ ಸಾಲ ಪಡೆದು ಫಾರ್ಚೂನರ್ ಕಾರನ್ನು ಖರೀದಿಸಿದ್ದಾರೆ.
ಗೌರವದ ಬದುಕು ಕಾಣುವ ಹಂಬಲ
ಬದುಕಿನಲ್ಲಿ ನಾನಾ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಜೊತೆಗೆ ನಾನು ಎಲ್ಲರ ಹಾಗೆ ಗೌರವಯುತವಾದ ಬದುಕು ಕಾಣುವ ಹಂಬಲದೊಂದಿಗೆ ಬೆಳೆಯುತ್ತಿದ್ದೇನೆ, ನನ್ನ ಮಕ್ಕಳನ್ನು ಬೆಳೆಸಿದ್ದೇನೆ.
ಸೇಸಪ್ಪಣ್ಣ, ಪೌರಕಾರ್ಮಿಕ