
ಚಳ್ಳಕೆರೆ (ಆ.22): ಚಳ್ಳಕೆರೆಯಲ್ಲಿ ಬಂಗಾರದ ಅಂಗಡಿ ಮಾಲೀಕರೊಬ್ಬರು ಗುರುವಾರ ಸಂಜೆ ಅಂಗಡಿ ಮುಚ್ಚಿಕೊಂಡು ಮನೆಗೆ ಬರುವಾಗ ತನ್ನ ಪರ್ಸ್ ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದ ಸುಮಾರು ನಾಲ್ಕು ಲಕ್ಷದ ಆಭರಣ ಹಾಗೂ ಇನ್ನಿತರೆ ವಸ್ತುಗಳನ್ನು ಕಳೆದು ಕೊಂಡಿದ್ದರು. ದಾರಿಯಲ್ಲಿ ಆಭರಣಗಳ ಪರ್ಸ್ ಶಿಕ್ಷಕ ವಿಶ್ವನಾಥ್ ಎಂಬುವರಿಗೆ ಸಿಕ್ಕಿದ್ದು, ಸಿಕ್ಕ ಆಭರಣವನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.
ನಗರದ ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು. ರಸ್ತೆ ಉಬ್ಬಿನಲ್ಲಿ ಪರ್ಸ್ ಕಳೆದು ಹೋಗಿದೆ. ತಕ್ಷಣವೇ ಗಾಬರಿಯಾದ ಸುಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಭರಣ ಕಳೆದುಕೊಂಡು ಬಂದಿದ್ದ ಮಹಿಳೆಯನ್ನು ಸಮಾಧಾನ ಪಡಿಸಿದ ಸಿಪಿಐ ಕುಮಾರ್, ಪರ್ಸ್ ನಲ್ಲಿ ಏನೇನು ಇತ್ತು ಎಂಬ ವಿವರ ಪಡೆದು ಮೊಬೈಲ್ ಪರ್ಸ್ ನಲ್ಲೇ ಇದೆ ಎಂಬ ಮಾಹಿತಿ ಪಡೆದು ಲೋಕೇಷನ್ ಹಾಕಿದ್ದಾರೆ.
ಪರ್ಸ್ ನಲ್ಲೆ ಇದ್ದ ಮೊಬೈಲ್ ಲೋಕೇಷನ್ ತೋರಿದ ಕಡೆ ಸುಮಾರು ಹತ್ತು ಜನ ಪೊಲೀಸರು ಸುತ್ತುವರಿದು ಹುಡುಕಾಡ ತೊಡಗಿದ್ದಾರೆ. ಪೊಲೀಸರನ್ನು ಕಂಡ ಶಿಕ್ಷಕ ಸ್ಥಳದಲ್ಲೇ ಇದ್ದರು. ಶಿಕ್ಷಕ ವಿಶ್ವನಾಥ್ ಯಾವುದೋ ಪರ್ಸ್ ಸಿಕ್ಕಿದೆ ಎಂದು ತೋರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಪರ್ಸ್ ನಲ್ಲಿದ್ದ ಆಭರಣ ಪರಿಶೀಲಿಸಿದಾಗ ಎಲ್ಲಾ ಆಭರಣ ವಸ್ತುಗಳು ಹಾಗೇಯೇ ಇರುವುದನ್ನು ಕಂಡು ಸುಮಾ ಅವರಿಗೆ ಹೋದ ಜೀವ ಬಂದಂತಾಗಿದೆ. ಇದೆಲ್ಲವೂ ಅರ್ಧ ಗಂಟೆಯ ಒಳಗೆ ನಡೆದ ಘಟನಾವಳಿಯಾಗಿದೆ ಎಂದು ವೃತ್ತ ನಿರೀಕ್ಷಕ ಕೆ. ಕುಮಾರ್ ಮಾಹಿತಿ ನೀಡಿದ್ದಾರೆ.
ವರಮಹಾಲಕ್ಷ್ಮಿ ದಿನವೇ ಕಳೆದುಕೊಂಡಿದ್ದ ಆಭರಣ ಸಿಕ್ಕ ಖುಷಿಯಲ್ಲಿ ಮಹಿಳೆ ಇದ್ದರೆ, ಲಕ್ಷಾಂತರ ಬೆಲೆ ಬಾಳುವ ಆಭರಣ ಸಿಕ್ಕಿದ್ದನ್ನ ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದ ಶಿಕ್ಷಕ ವಿಶ್ವನಾಥ್ ಅವರ ಆದರ್ಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಆಭರಣವನ್ನು ಹುಡುಕಲು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದ ಸಿಪಿಐ ಕುಮಾರ್ ಮತ್ತವರ ಪೋಲೀಸರ ತಂಡದ ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ.