ಬೊಂಬೆನಾಡಿನ ಕಾಂಗ್ರೆಸ್‌ ಹುರಿಯಾಳು ಯಾರು?

By Kannadaprabha News  |  First Published Apr 3, 2023, 8:36 AM IST

ಹೈವೋಲ್ಟೇಜ್‌ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿರುವ ಬೊಂಬೆನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು ಎಂಬುದು ಉತ್ತರ ಸಿಗದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.


 ವಿಜಯ್‌ ಕೇಸರಿ

 ಚನ್ನಪಟ್ಟಣ :  ಹೈವೋಲ್ಟೇಜ್‌ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿರುವ ಬೊಂಬೆನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು ಎಂಬುದು ಉತ್ತರ ಸಿಗದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

Tap to resize

Latest Videos

ಈಗಾಗಲೇ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಉಳಿದೆರಡು ಪ್ರಬಲ ಪಕ್ಷಗಳಾದ ಜೆಡಿಎಸ್‌, ಬಿಜೆಪಿ ಅಬ್ಬರದ ಪ್ರಚಾರದಲ್ಲಿ ನಿರತವಾಗಿವೆ. ಆದರೂ, ಅಭ್ಯರ್ಥಿ ಯಾರೆಂದು ಪ್ರಕಟಿಸದ ಕಾರಣ ಕಾಂಗ್ರೆಸ್‌ ಪ್ರಚಾರ ಇನ್ನು ಟೇಕಾಫ್‌ ಆಗದೇ ರನ್‌ವೇಯಲ್ಲೇ ಉಳಿದುಕೊಂಡಿದೆ.

ಕೈಕೊಟ್ಟಸಂಭಾವ್ಯಅಭ್ಯರ್ಥಿ:

ಪ್ರತಿ ಚುನಾವಣೆಯಲ್ಲೂ ಕಡೆ ಕ್ಷಣದಲ್ಲಿ ಅಭ್ಯರ್ಥಿ ಹಾಕಿ ಕೈ ಸುಟ್ಟುಕೊಳ್ಳುತ್ತಿದ್ದ ಈ ಬಾರಿ ಹಾಗಾಗಬಾರದು ಎಂದು ವರ್ಷಕ್ಕೂ ಮೊದಲೇ ಉದ್ಯಮಿ ಪ್ರಸನ್ನ ಪಿ.ಗೌಡರನ್ನು ಕರೆತಂದು ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದ ಕಾರಣ ಅವರು ಕಾಂಗ್ರೆಸ್‌ ತ್ಯಜಿಸಿ ತೆನೆ ಹೊತ್ತುಕೊಂಡಿದ್ದಾರೆ. ಪ್ರಸನ್ನ ಪಕ್ಷಾಂತರದ ಬೆನ್ನೆಲ್ಲೆ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬ ಪ್ರಶ್ನೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮತ್ತೆ ಎದುರಾಗಿದೆ.

‘ಕೈ’ ಮೇಲೆತ್ತುವವರು ಯಾರು:

ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಪ್ರಸನ್ನ ಪಿ.ಗೌಡ ಕಾಂಗ್ರೆಸ್‌ ತೊರೆದ ನಂತರ ಕೈನೊಗ ಹೊರುವವರು ಯಾರು ಎಂಬ ಪ್ರಶ್ನೆ ಮತ್ತೆ ದುತ್ತೆಂದು ಎದುರಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಸಂಬಂಧಿಸಿದಂತೆ ಮೂರು ನಾಲ್ಕು ಮಂದಿಯ ಹೆಸರು ಮುಂಚೂಣಿಯಲ್ಲಿದೆಯಾದರೂ, ಪಕ್ಷದಿಂದ ಇವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಖಾತರಿ ಯಾರಿಗೂ ಇಲ್ಲದಂತಾಗಿದೆ.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಗಂಗಾಧರ್‌, ಮಾಜಿ ಶಾಸಕ ಡಿ.ಟಿ.ರಾಮು ಪುತ್ರ ಭಗತ್‌ರಾಮ್‌, ಜಿಪಂ ಮಾಜಿ ಉಪಾಧ್ಯಕ್ಷೆ ವೀಣಾ ಚಂದ್ರು ಪುತ್ರ ಚಂದ್ರಸಾಗರ್‌ ಹೆಸರು ಕೇಳಿಬರುತ್ತಿದೆæ. ಪ್ರಸನ್ನ ಕಾಂಗ್ರೆಸ್‌ ತೊರೆದ ನಂತರ ಸಭೆ ನಡೆಸಿ ಈ ಮೂವರ ಹೆಸರನ್ನು ಟಿಕೆಟ್‌ಗೆ ಶಿಫಾರಸ್ಸು ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಮೂವರಲ್ಲಿ ಒಬ್ಬರು ಕ್ಷೇತ್ರದ ಕಾಂಗ್ರೆಸ್‌ ಹುರಿಯಾಳು ಆಗಲಿದ್ದಾರೆ ಎನ್ನಲಾಗಿದೆ.

ಭಗತ್‌ರಾಮ್‌ಗೆ ಹೆಸರು ಪ್ರಬಲ:

ಜನಸಾಮಾನ್ಯರ ಶಾಸಕ ಎಂದೇ ಪ್ರಸಿದ್ಧರಾಗಿದ್ದ ಮಾಜಿ ಶಾಸಕ ಡಿ.ಟಿ.ರಾಮು ಅವರು ಪುತ್ರ ಡಾ.ಭಗತ್‌ರಾಮ್‌ ಹೆಸರು ಕ್ಷೇತ್ರದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. 1978ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ದಿವಂಗತ ಡಿ.ಟಿ.ರಾಮು ತಮ್ಮ ಸರಳ ಸಜ್ಜನಿಕೆಯ ನಡೆವಳಿಕೆಯ ಮೂಲಕ ಸಾಕಷ್ಟುಹೆಸರು ಗಳಿಸಿದ್ದರು. ಡಿ.ಟಿ.ರಾಮು ಅವರ ಸಹೋದರ ಡಿ.ಟಿ.ಜಯಕುಮಾರ್‌ ಸಹ ನಂಜನಗೂಡು ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದು, ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಭಗತ್‌ರಾಮ್‌ಗೆ ಟಿಕೆಟ್‌ ನೀಡುವಂತೆ ಒಂದಷ್ಟುಮಂದಿ ಒತ್ತಾಯಿಸುತ್ತಿದ್ದು, ಇವರಿಗೆ ಟಿಕೆಟ್‌ ನೀಡಿದರೆ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಚಂದ್ರು ಅವರ ಪುತ್ರ ಚಂದ್ರಸಾಗರ್‌ ಯುವ ಮುಖಂಡರಾಗಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ತಾಯಿ ಈ ಹಿಂದೆ ಹೊಂಗನೂರು ಜಿಲ್ಲಾ ಪಂಚಾಯಿತಿಯಿಂದ ಆಯ್ಕೆಯಾಗಿ, ಜಿಪಂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್‌ ನೀಡಿದರೆ ಅನುಕೂಲ ಎಂಬ ವಾದಗಳು ಕೇಳಿಬಂದಿವೆ. ಇವರ ಜತೆಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗಂಗಾಧರ್‌ ಹೆಸರು ಸಹ ಮುನ್ನೆಲೆಗೆ ಬಂದಿದೆ.

ಇತ್ತೀಚೆಗೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ, ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ದುಂತೂರು ವಿಶ್ವನಾಥ್‌ ಹೆಸರು ಸಹ ಕ್ಷೇತ್ರದಿಂದ ಕೇಳಿಬರುತ್ತಿದೆ. ದುಂತೂರು ವಿಶ್ವನಾಥ್‌ ಅವರು ಈ ಹಿಂದೆ ಸ್ಪರ್ಧಿಸಿದ್ದ ಸಾತನೂರು ಕ್ಷೇತ್ರಕ್ಕೆ ತಾಲೂಕಿನ ವಿರೂಪಾಕ್ಷಿಪುರ ಹೋಬಳಿಯ ಕೆಲ ಭಾಗ ಒಳಗೊಂಡಿತ್ತು. ಇದಲ್ಲದೇ ಚನ್ನಪಟ್ಟಣದ ಸಾಕಷ್ಟುಚುನಾವಣೆಗಳಲ್ಲಿ ವಿಶ್ವನಾಥ್‌ ತೊಡಗಿಸಿಕೊಂಡಿದ್ದು, ಇಲ್ಲಿನ ಮುಖಂಡರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಆದ್ದರಿಂದ ಇವರಿಗೆ ಟಿಕೆಟ್‌ ನೀಡಿದರೆ ಸ್ಪರ್ಧೆ ಒಡ್ಡಬಹುದು ಎಂಬ ಸಲಹೆಯನ್ನು ಕೆಲವರು ನೀಡಿದ್ದಾರೆ ಎನ್ನಲಾಗಿದೆ.

ಅಚ್ಚರಿ ಅಭ್ಯರ್ಥಿ:

ಇನ್ನು ಕಾಂಗ್ರೆಸ್‌ಗೆ ಪುನರಾಗಮನ ಮಾಡಲಿರುವ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕ್ಷೇತ್ರದ ಕಾಂಗ್ರೆಸ್‌ ಹುರಿಯಾಳಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಬಿಜೆಪಿಯಿಂದ ಸ್ಪರ್ಧಿಸ ಬಯಸಿರುವ ಯೋಗೇಶ್‌ ಅದಕ್ಕಾಗಿ ಪ್ರಚಾರದಲ್ಲಿ ನಿರತರಾಗಿದ್ದರೂ ಸಹ ಅವರು ಕಾಂಗ್ರೆಸ್‌ ಬರುವ ಸಾಧ್ಯತೆ ಇರುವ ಕುರಿತಾದ ಚರ್ಚೆಗಳು ನಿಂತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಸ್ಪರ್ಧೆ ಬಗ್ಗೆ ಎದ್ದಿದ್ದ ಗಾಳಿಸುದ್ದಿಗಳನ್ನು ಕಾಂಗ್ರೆಸ್‌ ಮುಖಂಡರೇ ಅಲ್ಲಗೆಳೆದಿದ್ದಾರೆ. ಈ ಬಾರಿ ಸ್ಥಳೀಯ ಅಭ್ಯರ್ಥಿಯೇ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರಾದರೂ ಮತ್ತೊಮ್ಮೆ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿದರೂ ಇಳಿಯಬಹುದು ಎನ್ನುವ ವಾತಾವರಣವಿರುವುದು ಮಾತ್ರ ಸುಳ್ಳಲ್ಲ.

ಅರ್ಜಿ ಸಲ್ಲಿಸಿಲ್ಲ:

ಕಾಂಗ್ರೆಸ್‌ ಟಿಕೆಟ್‌ಗಾಗಿ ಒಟ್ಟು ಎಂಟು ಮಂದಿ ಅರ್ಜಿ ಸಲ್ಲಿಸಿದ್ದು, ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಪ್ರಸನ್ನ ಪಿ.ಗೌಡ ಕಾಂಗ್ರೆಸ್‌ ತ್ಯಜಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾವ ಶರತ್‌ಚಂದ್ರ ಆಮ್‌ ಆದ್ಮಿ ಪಾರ್ಟಿ ಸೇರಿ ಕ್ಷೇತ್ರದ ಆಪ್‌ ಅಭ್ಯರ್ಥಿಯಾಗಿದ್ದಾರೆ. ಉಳಿದ ಆರು ಮಂದಿಯಲ್ಲಿ ಚಂದ್ರಸಾಗರ್‌ ಹಾಗೂ ಡಾ.ಭಗತ್‌ರಾಮ್‌ ಹೆಸರು ಮುಂಚೂಣಿಯಲಿದೆ. ಆದರೆ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗಂಗಾಧರ್‌ ಹಾಗೂ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ದುಂತೂರು ವಿಶ್ವನಾಥ್‌ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ಆದರೂ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆಯಾದರೂ, ಕಾಂಗ್ರೆಸ್‌ ಅಭ್ಯರ್ಥಿ ಯಾರಾಗುವರು ಎಂಬ ಯಕ್ಷಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.

ತಾಲೂಕಿನಲ್ಲಿ ಕಾಂಗ್ರೆಸ್‌ ಸದೃಢವಾಗಿದೆ. ನಮ್ಮಲ್ಲಿ ಅಭ್ಯರ್ಥಿಗಳಿಗಾಗಲಿ, ಕಾರ್ಯಕರ್ತರಿಗಾಗಲಿ ಕೊರತೆ ಇಲ್ಲ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಥಳೀಯ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದು, ಒಂದೆರೆಡು ದಿನದಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಎಲ್ಲರೂ ಸೇರಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇವೆ.

-ಎಸ್‌.ಆರ್‌.ಪ್ರಮೋದ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

click me!