ಬೆಂಗಳೂರು: ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸೋ ಮೆಮೋ ರೈಲು ಸಮಯ ಪರಿಷ್ಕರಣೆ

Published : Jan 30, 2026, 10:18 PM IST
Train

ಸಾರಾಂಶ

ಪ್ರಯಾಣಿಕರ ಬಹುದಿನಗಳ ಬೇಡಿಕೆ ಮತ್ತು ಸಂಸದ ಎಂ. ಮಲ್ಲೇಶಬಾಬು ಅವರ ಪ್ರಯತ್ನದ ಫಲವಾಗಿ, ಬೆಂಗಳೂರು ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸುವ ಮೆಮೋ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಫೆಬ್ರವರಿ 2ರಿಂದ ಜಾರಿಗೆ ಬರುವ ಈ ಹೊಸ ವೇಳಾಪಟ್ಟಿ .

ಬಂಗಾರಪೇಟೆ: ಬೆಂಗಳೂರು ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸುವ ಮೆಮೋ ರೈಲಿನ ಸಮಯವನ್ನು ಪರಿಷ್ಕರಿಸಬೇಕೆಂಬ ಪ್ರಯಾಣಿಕರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ಸಂಸದ ಎಂ. ಮಲ್ಲೇಶಬಾಬು ಅವರು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಯ ಬದಲಾವಣೆಗೆ ಶ್ರಮಿಸಿದ ಪರಿಣಾಮ, ಫೆಬ್ರವರಿ 2ರಿಂದ ಹೊಸ ಸಮಯ ಜಾರಿಗೆ ಬರಲಿದ್ದು, ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಬೆಂಗಳೂರಿನಿಂದ ಬೃಂದಾವನ ಎಕ್ಸ್‌ಪ್ರೆಸ್ ರೈಲು ಬಂಗಾರಪೇಟೆ ಪಟ್ಟಣಕ್ಕೆ ಆಗಮಿಸಿದ ಬಳಿಕ, ವೈಟ್‌ಫೀಲ್ಡ್‌ನಿಂದ ಪಟ್ಟಣ ಮಾರ್ಗವಾಗಿ ಮಾರಿಕುಪ್ಪಂಗೆ ಮೆಮೋ ರೈಲು ಸಂಚರಿಸುತ್ತಿತ್ತು. ಇದರಿಂದ ಮೆಜೆಸ್ಟಿಕ್‌ನಿಂದ ಬೃಂದಾವನ ರೈಲಿನಲ್ಲಿ ಪ್ರಯಾಣಿಸಿ ಬರುವ ಮಾರಿಕುಪ್ಪಂ ಪ್ರಯಾಣಿಕರಿಗೆ ಮೆಮೋ ರೈಲು ಹಿಡಿದು ಸುಲಭವಾಗಿ ಗಮ್ಯಸ್ಥಾನ ತಲುಪಲು ಅನುಕೂಲವಾಗಿತ್ತು.

ಮೆಮೋ ರೈಲು ಸಿಗದೆ ತೀವ್ರ ಅನಾನುಕೂಲವಾಗಿತ್ತು

ಆದರೆ ಇತ್ತೀಚಿನ ದಿನಗಳಲ್ಲಿ ಮೆಮೋ ರೈಲು ಬೃಂದಾವನ ರೈಲಿಗಿಂತ ಮುಂಚಿತವಾಗಿಯೇ ಬಂಗಾರಪೇಟೆಗೆ ಆಗಮಿಸಲು ಆರಂಭಿಸಿದ್ದರಿಂದ, ಬೃಂದಾವನ ರೈಲಿನಲ್ಲಿ ಬರುವ ಮಾರಿಕುಪ್ಪಂ ಪ್ರಯಾಣಿಕರಿಗೆ ಮೆಮೋ ರೈಲು ಸಿಗದೆ ತೀವ್ರ ಅನಾನುಕೂಲ ಉಂಟಾಗಿತ್ತು. ಇದರಿಂದಾಗಿ ನಿತ್ಯವೂ ಬಸ್‌ಗಳ ಅವಲಂಬನೆಯೇ ಅನಿವಾರ್ಯವಾಗಿದ್ದು, ಪ್ರಯಾಣಿಕರು ಸಮಯ ಮತ್ತು ಹಣ ಎರಡರಲ್ಲೂ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಖಂಡಿಸಿ ಇತ್ತೀಚೆಗೆ ಸಿಪಿಐ ಕಾರ್ಯಕರ್ತರು ಹಾಗೂ ಪ್ರಯಾಣಿಕರು ಬಂಗಾರಪೇಟೆ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದರು. ಮೆಮೋ ರೈಲಿನ ಸಮಯವನ್ನು ಮರುಪರಿಷ್ಕರಿಸುವಂತೆ ಅವರು ಒತ್ತಾಯಿಸಿದ್ದರು.

ಸಂಸದ ಎಂ. ಮಲ್ಲೇಶಬಾಬು ಪ್ರಯತ್ನ

ಪ್ರಯಾಣಿಕರ ಈ ಬೇಡಿಕೆಗೆ ಸ್ಪಂದಿಸಿದ ಸಂಸದ ಎಂ. ಮಲ್ಲೇಶಬಾಬು ಅವರು, ರೈಲ್ವೆ ಇಲಾಖೆಯ ಡಿಆರ್‌ಎಂ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮೆಮೋ ರೈಲಿನ ಸಮಯವನ್ನು ಬದಲಾಯಿಸಲು ಒತ್ತಾಯಿಸಿದರು. ಅದರಂತೆ, ವೈಟ್‌ಫೀಲ್ಡ್‌ನಿಂದ ಮಧ್ಯಾಹ್ನ 2.55ಕ್ಕೆ ನಿರ್ಗಮಿಸುತ್ತಿದ್ದ ಮೆಮೋ ರೈಲನ್ನು ಮಧ್ಯಾಹ್ನ 3.30ಕ್ಕೆ ನಿರ್ಗಮಿಸುವಂತೆ ಸಮಯ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಸದ ಮಲ್ಲೇಶಬಾಬು ಅವರ ಪ್ರಯತ್ನಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ, ಫೆಬ್ರವರಿ 2ರಿಂದ ವೈಟ್‌ಫೀಲ್ಡ್–ಮಾರಿಕುಪ್ಪಂ ಮೆಮೋ ರೈಲಿನ ಸಮಯವನ್ನು ಅಧಿಕೃತವಾಗಿ ಪರಿಷ್ಕರಿಸಿದೆ. ಇದರಂತೆ, ರೈಲು ಈಗ ಮಧ್ಯಾಹ್ನ 2.55ರ ಬದಲಾಗಿ 3.30ಕ್ಕೆ ವೈಟ್‌ಫೀಲ್ಡ್‌ನಿಂದ ನಿರ್ಗಮಿಸಲಿದೆ.

ಈ ನಿರ್ಧಾರದಿಂದ ಬೃಂದಾವನ ರೈಲಿನಲ್ಲಿ ಬರುವ ಮಾರಿಕುಪ್ಪಂ ಪ್ರಯಾಣಿಕರಿಗೆ ಮತ್ತೆ ಮೆಮೋ ರೈಲು ಸಂಪರ್ಕ ದೊರೆಯಲಿದ್ದು, ನಿತ್ಯದ ಪ್ರಯಾಣ ಸುಗಮವಾಗಲಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸಿದ ಸಂಸದ ಎಂ. ಮಲ್ಲೇಶಬಾಬು ಅವರಿಗೆ ಪ್ರಯಾಣಿಕರು ಅಭಿನಂದನೆ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಶಿವರಾತ್ರಿ ಪ್ರಯುಕ್ತ, ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ರೈಲು ಯಾವೆಲ್ಲ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ
ಬಿಜೆಪಿ-ಜೆಡಿಎಸ್ ಮೈತ್ರಿ ಇದ್ರೂ ಪಕ್ಷದಿಂದ ನನಗೇ ಟಿಕೆಟ್: ಮಾಜಿ ಶಾಸಕ ಪ್ರೀತಂ ಗೌಡ ವಿಶ್ವಾಸ