ನರಸಿಂಹರಾಜಪುರ-ಹಳೇ ಚಿಕ್ಕಮಗಳೂರು ರಸ್ತೆ ಸಂಪರ್ಕ ಯಾವಾಗ? 35 km ಪ್ರಯಾಣ ದೂರ ಉಳಿತಾಯ

Published : Sep 21, 2026, 01:29 PM IST
Narasimharajapura Old Chikkamagaluru Road

ಸಾರಾಂಶ

ಭದ್ರಾ ಡ್ಯಾಂ ನಿರ್ಮಾಣದಿಂದ ಕಡಿತಗೊಂಡಿದ್ದ ಎನ್.ಆರ್.ಪುರ-ಚಿಕ್ಕಮಗಳೂರು ಹಳೇ ರಸ್ತೆ ಪುನಶ್ಚೇತನಕ್ಕೆ 5 ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ರಸ್ತೆ ಅಭಿವೃದ್ಧಿಯಾದರೆ 35 ಕಿ.ಮೀ. ಪ್ರಯಾಣದ ದೂರ ಉಳಿತಾಯವಾಗಲಿದ್ದು, ಸೇತುವೆ ನಿರ್ಮಾಣಕ್ಕೆ 50 ಕೋಟಿ ರೂ. ಘೋಷಣೆಯಾಗಿದೆ. ಆದರೆ, ಮುತ್ತೋಡಿ ಅಭಯಾರಣ್ಯದ ಮೂಲಕ ರಸ್ತೆ ಹಾದುಹೋಗುವುದರಿಂದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ.

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಭದ್ರಾ ಡ್ಯಾಂ ನಿರ್ಮಾಣದ ನಂತರ ಕಡಿತ ಗೊಂಡಿದ್ದ ಎನ್.ಆರ್.ಪುರ- ಚಿಕ್ಕಮಗಳೂರು ಸಂಪರ್ಕಿಸುವ ಲೋಕೋಪ ಯೋಗಿ ಇಲಾಖೆ ರಸ್ತೆ ಮಾರ್ಗ ಪುನಶ್ಚೇತನಗೊಳಿಸಿದರೆ ಎನ್.ಆರ್.ಪುರದಿಂದ ಚಿಕ್ಕಮಗಳೂರಿಗೆ ಕ್ರಮಿಸುವ ದೂರ ಸುಮಾರು 35 ಕಿ.ಮೀ. ಉಳಿತಾಯವಾಗಲಿದೆ.

ಭದ್ರಾ ಡ್ಯಾಂ ಆಗುವ ಮುನ್ನ ನರಸಿಂಹರಾಜಪುರದಿಂದ ಸುಗ್ಗಪ್ಪನ ಮಠ, ಹಂದೂರು, ಸಾಲೂರು, ಹೆಬ್ಬೆ, ಸಾರ್ಯ, ಹೆಬ್ಬೆ ಭವಾನಿ ಶಂಕರ ದೇವಸ್ಥಾನ, ಹಿಪ್ಲ, ಮಾಡ್ಲ, ಕೆಸವಿ, ಶಿರುವಾಸೆ, ಮುತ್ತೋಡಿಸ, ಮಲ್ಲಂದೂರು ಮಾರ್ಗವಾಗಿ ಚಿಕ್ಕಮ ಗ ಳೂರಿಗೆ ಹೋಗಲಾಗುತ್ತಿತ್ತು. ಡ್ಯಾಂ ನಿರ್ಮಾಣದ ನಂತರ ಹಂದೂರು ಹಾಗೂ ಹೆಬ್ಬೆ ದೇವಸ್ಥಾನದ ಬಳಿ ಡ್ಯಾಂ ನ ಹಿನ್ನೀರು ನಿಂತು ರಸ್ತೆ ಕಡಿತಗೊಂಡಿದ್ದರಿಂದ ನರಸಿಂಹರಾಜಪುರ, ಶಿವಮೊಗ್ಗದ ಪ್ರಯಾಣಿಕರು ಚಿಕ್ಕಮಗಳೂರಿಗೆ ಹೋಗಲು ಬಿ.ಎಚ್.ಕೈಮರ, ಬಾಳೆಹೊನ್ನೂರು, ಆಲ್ದೂರು ಸುತ್ತಿಕೊಂಡು ತಲುಪಬೇಕಿದೆ.

5 ದಶಕಗಳ ಹೋರಾಟ

ಎನ್.ಆರ್.ಪುರ - ಹಳೇ ಚಿಕ್ಕಮಗಳೂರು ರಸ್ತೆ ಮತ್ತೆ ಅಭಿವೃದ್ಧಿ ಪಡಿಸಿ ಜನರಿಗೆ ಅನುಕೂಲ ಮಾಡುವಂತೆ ಒತ್ತಾಯಿಸಿ 50 ವರ್ಷಗಳ ಹಿಂದೆಯೇ ಗ್ರಾಮಸ್ಥರು ಹೋರಾಟ ಕೈ ಗೊಂಡಿದ್ದರು. 1975ರಲ್ಲಿ ತಾಲೂಕು ಬೋರ್ಡಿನ ಸದಸ್ಯರಾಗಿದ್ದ ಚಂದ್ರೇಗೌಡ ಗ್ರಾಮಸ್ಥರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗಿನ ಕಾಲದಲ್ಲಿ ₹6.38 ಲಕ್ಷದ ಪ್ಲಾನ್ ಎಸ್ಟಿಮೇಟ್ ರೂಪುಗೊಂಡಿತ್ತು. ನಂತರ ಲೋಕೋಪಯೋಗಿ ಇಲಾಖೆ ಪ್ಲಾನ್, ಎಸ್ಟಿಮೇಟ್ ತಯಾರಿಸಿ ₹20 ಲಕ್ಷದ ಅಂದಾಜು ಹೇಳಿತ್ತು.

ಹಳೇ ಚಿಕ್ಕಮಗಳೂರು ರಸ್ತೆ ಪುನಶ್ಚೇತನ ಮಾಡಿ

ನರಸಿಂಹರಾಜಪುರ- ಹಳೇ ಚಿಕ್ಕಮಗಳೂರು ರಸ್ತೆ ಪುನಶ್ಚೇತನದಿಂದ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರು ಅಂದಾಜು 35 ಕಿ.ಮೀ. ಹತ್ತಿರವಾಗಲಿದೆ. ಸಮಯ, ಇಂಧನ ಎರಡೂ ಉಳಿತಾಯವಾಗಲಿದೆ. ಕೊಪ್ಪ, ಶಿವಮೊಗ್ಗ ಎನ್.ಆರ್.ಪುರದ ಜನರು ಹಳೇ ಚಿಕ್ಕಮಗಳೂರು ರಸ್ತೆಯಲ್ಲೇ ಸಂಚರಿಸುತ್ತಾರೆ. ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಪ್ರಯತ್ನ ಪಟ್ಟು ಹೊಸದಾಗಿ ಸಿದ್ದರಾಮಯ್ಯ ಸೇತುವೆ ನಿರ್ಮಿಸಿದ್ದಾರೆ. ಇದೇ ಸೇತುವೆ ಮೇಲೆ ಹಳೇ ಚಿಕ್ಕಮಗಳೂರು ರಸ್ತೆ ಹಾದು ಹೋಗುವುದರಿಂದ ಸಾವಿರಾರು ಜನರಿಗೆ ಈ ಸೇತುವೆ ಉಪಯೋಗವಾಗಲಿದೆ.

₹50 ಕೋಟಿ ಮಂಜೂರು ಮಾಡುವ ಘೋಷಣೆ

ಎನ್.ಆರ್.ಪುರದ ಸಿದ್ದರಾಮಯ್ಯ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೊಳಿ ಅವರಿಗೆ ಗ್ರಾಮಸ್ಥರು ಹಳೇ ಚಿಕ್ಕಮಗಳೂರು ರಸ್ತೆ ಪುನಃಶ್ಚೇತನಕ್ಕೆ ಅರ್ಜಿ ನೀಡಿದ್ದರು. ಸಚಿವ ಸತೀಶ್ ಜಾರಕಿಹೊಳಿ ಭದ್ರಾ ನದಿಗೆ ಸೇತುವೆ ನಿರ್ಮಿಸಲು ₹50 ಕೋಟಿ ಮಂಜೂರು ಮಾಡುವ ಘೋಷಣೆ ಮಾಡಿದ್ದರು.

ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಸಮ್ಮತಿ

ಲೋಕೋಪಯೋಗಿ ಇಲಾಖೆ ನಕಾಶೆಯಲ್ಲಿರುವ ಎನ್.ಆರ್.ಪುರ- ಹಳೇ ಚಿಕ್ಕಮಗಳೂರು ರಸ್ತೆ ಸಮಸ್ಯೆ ಅಂದರೆ ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಸಮೀಪ ಭದ್ರಾ ಹಿನ್ನೀರು ನಿಂತಿದ್ದು ನದಿ ದಡದಿಂದ ಮುಂದೆ 8-10 ಕಿ.ಮೀ. ದೂರದ ಲೋಕೋಪಯೋಗಿ ರಸ್ತೆ ಭದ್ರಾ ಮುತ್ತೋಡಿ ಹೆಬ್ಬೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರಲಿದೆ. ಲೋಕೋಪಯೋಗಿ ಇಲಾಖೆ ತನ್ನ ಇಲಾಖೆ ರಸ್ತೆ ಅಭಿವೃದ್ಧಿಗೆ ಒಪ್ಪಿಗೆ ನೀಡಿದ್ದರೂ ಅರಣ್ಯ ಇಲಾಖೆ ಸಮ್ಮತಿಸುತ್ತಿಲ್ಲ. ಕೆಲವು ದಿನಗಳ ಹಿಂದೆ ಬಿ.ಎಚ್. ಕೈಮರದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಹಳೇ ಚಿಕ್ಕಮಗಳೂರು ರಸ್ತೆ ಪುನಶ್ಚೇತನಕ್ಕೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದಾರೆ.

ಭದ್ರಾ ಮುತ್ತೋಡಿ ಹೆಬ್ಬೆ ಅಭಯಾರಣ್ಯದಲ್ಲಿರುವ ಅಂದಾಜು 10 ಕಿ.ಮೀ. ರಸ್ತೆಗೆ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಈಗಾಗಲೇ ಅಸ್ಸಾಂನ ನಾಗಾಂವ್ ಜಿಲ್ಲೆಯ ಅಭಯಾರಣ್ಯದಲ್ಲಿ ಕಾಜಿಂರಂಗ ಎಂಬ ರಸ್ತೆಯಿಂದ ಎತ್ತರದಲ್ಲಿ ಕಾರಿಡಾರ್ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ ಮಾದರಿಯಲ್ಲಿ ಮುತ್ತೋಡಿ ಭದ್ರಾ ಹೆಬ್ಬೆ ಅಭಯಾರಣ್ಯದ ರಸ್ತೆಯಲ್ಲಿ ಎತ್ತರದ ಕಾರಿಡಾರ್ ಯೋಜನೆ ಮಾಡಲಿ.

- ದೇವಂತಗೌಡ, ಬಸರಗಳಲೆ, ಮುಖಂಡರು, ಹೊನ್ನೇಕೊಡಿಗೆ ಗ್ರಾಪಂ, ನರಸಿಂಹರಾಜಪುರ

PREV
Read more Articles on
click me!

Recommended Stories

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮರುತನಿಖೆಗೆ ಸುಪ್ರೀಂ ಆದೇಶ, ವರದಿ ನೀಡಲು 3 ತಿಂಗಳ ಗಡುವು
ಕರಾವಳಿಯ ತುಳು ಭಾಷೆ ಬೆನ್ನಲ್ಲೇ ರಾಜ್ಯದಲ್ಲಿ 'ಉರ್ದು ಭಾಷೆ'ಗೂ ಅಧಿಕೃತ ಸ್ಥಾನಮಾನ ಬೇಡಿಕೆ!