* ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಘಟನೆ
* ವಾಟ್ಸಪ್ ಮೂಲಕ ಬಾಲಕಿಯ ಫೋಟೋ ಶೇರ್
* ಮನೆಯ ದಾರಿ ಕಾಣದೇ ಅಳುತ್ತಾ ಹಳೇ ಆಸ್ಪತ್ರೆ ಬಳಿ ನಿಂತಿದ್ದ ಬಾಲಕಿ
ಕೂಡ್ಲಿಗಿ(ಸೆ.12): ಗಣೇಶ ಮೂರ್ತಿ ತರುವವರ ಹಿಂದೆ ಖುಷಿಯಲ್ಲಿ ಹೋದ 3 ವರ್ಷದ ಪುಟ್ಟ ಬಾಲಕಿಯೊಬ್ಬಳು ಕೂಡ್ಲಿಗಿಯಲ್ಲಿ ಅನಾಥವಾಗಿ ಅಳುತ್ತಿರುವುದನ್ನು ಕಂಡು ಸ್ಥಳೀಯರು ವಾಟ್ಸಪ್ ಮೂಲಕ ಬಾಲಕಿಯ ಫೋಟೋ ಶೇರ್ ಮಾಡಿ ಪೋಷಕರ ಮಡಿಲು ಸೇರಿಸಿದ್ದಾರೆ.
ಗಣೇಶ ಚತುರ್ಥಿ ದಿನವಾದ ಶುಕ್ರವಾರ ಬೆಳಗ್ಗೆ ಗಣೇಶ ಮೂರ್ತಿ ತರಲು ಪಟ್ಟಣದ ಸಂಘಟಕರು ಹೋಗುತ್ತಿದ್ದಾಗ ಆ ಗುಂಪಿನ ಜೊತೆಯಲ್ಲಿ ಹೋದ ಬಾಲಕಿ ತನುಜಾ (3) ಮನೆಯ ದಾರಿ ಕಾಣದೇ ಅಳುತ್ತಾ ಹಳೇ ಆಸ್ಪತ್ರೆ ಬಳಿ ನಿಂತಿದ್ದಳು.
ಇನ್ನು ಮುಂದೆ ವಾಟ್ಸಪ್‌ನಲ್ಲೇ ಕೋವಿಡ್ ಲಸಿಕೆ ಪ್ರಮಾಣ ಪತ್ರ!
ಇದನ್ನು ಗಮನಿಸಿದ ಪಟ್ಟಣದ ಮೈದಾನ ಗೆಳೆಯರ ಬಳಗದ ಸದಸ್ಯ ಎಲೆಕ್ಟ್ರಿಷನ್ ಮಂಜುನಾಥ ಆ ಬಾಲಕಿಯನ್ನು ಕೂಡ್ಲಿಗಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ತಕ್ಷಣ ಕೂಡ್ಲಿಗಿ ಪೊಲೀಸರು ಮತ್ತು ಮೈದಾನ ಗೆಳೆಯರ ಬಳಗದ ಸದಸ್ಯರು ವಾಟ್ಸಾಪ್ ಸಂದೇಶದಲ್ಲಿ ಬೆಳಗ್ಗೆ 7 ಗಂಟೆಗೆ ಬಾಲಕಿ ಸಿಕ್ಕಿರುವ ಬಗ್ಗೆ ಬಾಲಕಿ ಫೋಟೋ ಹಾಕಿದ್ದರು. ವಾಟ್ಸಪ್‌ಗೆ ಈ ಬಾಲಕಿಯ ಪೋಟೋ ಹರಿದಾಡುತ್ತಿದ್ದಾಗ ಬೆಳಗ್ಗೆ 11ಗಂಟೆ ಸುಮಾರಿಗೆ ಮಗಳನ್ನು ಕಳಕೊಂಡ ಹೆತ್ತವರು ಕೂಡ್ಲಿಗಿ ಠಾಣೆಗೆ ಬಂದು ನಮ್ಮ ಮಗಳು ಎಂದು ತಿಳಿಸಿದ್ದಾರೆ. ಪೊಲೀಸರು ವಿಚಾರಿಸಿ ಹೆತ್ತವರ ಮಾಹಿತಿ ಪಡೆದು ಪೋಷಕರಿಗೆ ನೀಡಿದ್ದಾರೆ. ಈ ಬಾಲಕಿ ಮೊಳಕಾಲ್ಮೂರು ತಾಲೂಕಿನ ಚಿಕ್ಕೇರಹಳ್ಳಿಯವರಾಗಿದ್ದು ಸುಮಾ ಅಂಜಿನಪ್ಪ ದಂಪತಿ ಮಗಳು. ಕೂಡ್ಲಿಗಿಯ ಸಂಬಂಧಿಕರ ಮನೆಗೆ ಬಂದಾಗ ಈ ಘಟನೆ ನಡೆದಿದೆ.
ಕೂಡ್ಲಿಗಿ ಪೊಲೀಸರ ಕಾರ್ಯ ಹಾಗೂ ಜನತೆ ವ್ಯಾಟ್ಸಪ್ ಮೂಲಕ ಬಾಲಕಿ ಬಗ್ಗೆ ಫೋಟೋ ಮಾಹಿತಿ ಹಾಕಿ ಸಹಾಯ ಮಾಡಿದ್ದಕ್ಕೆ ಬಾಲಕಿಯರ ಪಾಲಕ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.