ಸಿಎಂ ಮಗ, ರಾಜ್ಯ ಸರ್ಕಾರಕ್ಕೂ ಏನು ಸಂಬಂಧ?: ಎಚ್‌ಡಿಕೆ ಪ್ರಶ್ನೆ

By Kannadaprabha News  |  First Published Oct 7, 2019, 12:54 PM IST

ಸಿಎಂ ಮಗನಿಗೂ ಕರ್ನಾಟಕ ಸರ್ಕಾರಕ್ಕೂ ಇರುವ ಸಂಬಂಧವೇನು ಎಂದು ಪ್ರಶ್ನೆಗಳು ಎದ್ದಿದೆ. 


ಚಿಕ್ಕಮಗಳೂರು (ಅ.07) :  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಗನಿಗೂ, ಈ ಸರ್ಕಾರಕ್ಕೂ ಏನು ಸಂಬಂಧ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ನೆರೆ ಪರಿಹಾರ ಸಿಗದೇ ಆತ್ಮಹತ್ಯೆ ಮಾಡಿಕೊಂಡಿರುವ ಮೂಡಿಗೆರೆ ತಾಲೂಕಿನ ಚೆನ್ನಪ್ಪಗೌಡ ಹಾಗೂ ಚಂದ್ರೇಗೌಡ ಅವರ ಮನೆಗಳಿಗೆ ಭಾನುವಾರ ಭೇಟಿ ನೀಡಿ, ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Latest Videos

undefined

ರಾಜ್ಯ ಸರ್ಕಾರದಲ್ಲಿ ದುಡ್ಡಿನ ಸಮಸ್ಯೆ ಇಲ್ಲ, ಏನು ಬೇಕಾದರೂ ಮಾಡಲು ಸಾಧ್ಯವಿದೆ. ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಮನೆಯಿಂದ ಹಣ ಕೊಡಬೇಕಾಗಿದಿಯಾ? ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ ಎಂದು ಸಿಎಂ ಮಗ ಹೇಳಿದ್ದಾನೆ. ಆತ ಯಾವ ಲೆಕ್ಕಾಚಾರದಲ್ಲಿ ಹೇಳಿದ್ದಾನೋ ಗೊತ್ತಿಲ್ಲ. ಆತ ಎಂಎಲ್‌ಎ ಅಲ್ಲ, ಸರ್ಕಾರಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಖಜಾನೆ ಬಗ್ಗೆ ಚರ್ಚಿಸಲು ಅವರಿಗೆ ಅಧಿಕಾರ ಕೊಟ್ಟವರು ಯಾರೆಂದು ಪ್ರಶ್ನಿಸಿದರು.

ರಾಜ್ಯದ ಜನರು ಸಂಕಷ್ಟದಲ್ಲಿ ಇದ್ದಾರೆ. ಅಮಾಯಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ಕೆಲಸ ಸಿಎಂ ಮಾಡಬೇಕು. ರಾಜ್ಯದಲ್ಲಿ ದುಡ್ಡಿನ ಸಮಸ್ಯೆ ಇಲ್ಲ, ಸ್ಪಂದಿಸುವ ವಿವೇಚನೆ ಈ ಸರ್ಕಾರಕ್ಕೆ ಇಲ್ಲ. ಅಧಿಕಾರಿಗಳು, ಮಂತ್ರಿಗಳ ಮಟ್ಟದಲ್ಲಿ ವಿಶ್ವಾಸ ಇಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ .10 ಸಾವಿರ ಕೋಟಿಯನ್ನು ಖಜಾನೆಯಿಂದಲೇ ಬಿಡುಗಡೆ ಮಾಡುತ್ತಿದ್ದೆ ಎಂದರು.

ಸೂಕ್ತ ಮಾಹಿತಿ ಸಂಗ್ರಹಿಸಿಲ್ಲ:

ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಈವರೆಗೆ ಏನೂ ಮಾಡಿಲ್ಲ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ಮೂಡಿಗೆರೆ ತಾಲೂಕಿನ ರೈತ ಚಂದ್ರೇಗೌಡ ಅವರ ಜಮೀನು ಖಾತೆ ಹೊಂದಿರಲಿಲ್ಲ. ನೆರೆ ಪರಿಹಾರ ಸಿಗುವುದು ಅನುಮಾನ ಇದ್ದುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೋರ್ವ ರೈತ ಚೆನ್ನಪ್ಪಗೌಡ ಅವರಿಗೂ ಇದೆ ಸಮಸ್ಯೆ ಇತ್ತು. ಈ ರೀತಿಯ ಸಮಸ್ಯೆಗಳು ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲೂ ಇವೆ. ಕಬ್ಬು ಬೆಳೆಯುವ ಜನತೆ 2-3 ವರ್ಷ ಮತ್ತೆ ಹಳೆಯ ಸುಸ್ಥಿತಿಗೆ ಬರಲು ಸಾಧ್ಯವಿಲ್ಲ. ಭೂಮಿ ಎಲ್ಲವೂ ನಾಶವಾಗಿದೆ. ಕಬ್ಬು ನಾಶವಾಗಿದೆ. ರೈತರಿಗೆ ಪರಿಹಾರ ನೀಡಲು ಸರಿಯಾದ ಮಾಹಿತಿಯನ್ನು ಸಂಗ್ರಹ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಮಂತ್ರಿಗಳಿಗೆ ಸರಿಯಾದ ರೀತಿಯಲ್ಲಿ ಕುಳಿತು ಕೆಲಸ ಮಾಡಲು ಹೇಳಿ. ಅಧಿಕಾರಿಗಳಿಗೆ ಬೈಯುವುದರಿಂದ ಕೆಲಸ ಆಗುವುದಿಲ್ಲ. ಪ್ರೀತಿಯಿಂದ, ವ್ಯವಧಾನದಿಂದ ಕೆಲಸ ಆಗಬೇಕು. ಹಣ ಹೊಡೆಯುವ ಕೆಲಸ ಆಗಬಾರದು. ಜನರೊಂದಿಗೆ ಹುಡುಗಾಟ ಆಟಬೇಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ತಾಕೀತು ಮಾಡಿದರು.

ಕುಮಾರಸ್ವಾಮಿ ಸಿಎಂ ಆಗೋದಿಲ್ಲ, ರೈತರ ಸಾಲ ಎಲ್ಲಿಂದ ಮನ್ನಾ ಮಾಡ್ತಾರೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದರು. ಕಳೆದ ಬಾರಿ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ .18 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ. ನೆರೆ ಹಾವಳಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು, ಶಾಸಕರು ಹಣ ನುಂಗುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿಸಿ ಜನರಲ್ಲಿ ವಿಶ್ವಾಸ ಮೂಡಿಸಲಿ. ಕಳೆದ 14 ತಿಂಗಳಲ್ಲಿ ನನಗೆ ಬಂದಿರುವ ವೇತನದಲ್ಲಿ ವೈಯಕ್ತಿಕವಾದ ಹಣದಲ್ಲಿ ಮೃತ ರೈತ ಚಂದ್ರೇಗೌಡ ಕುಟುಂಬಕ್ಕೆ .2 ಲಕ್ಷ, ಚೆನ್ನಪ್ಪಗೌಡ ಕುಟುಂಬಕ್ಕೆ .1 ಲಕ್ಷ ನೆರವು ಕೊಟ್ಟಿದ್ದೇನೆ ಎಂದರು.

ದೇಶದಲ್ಲಿ ಪ್ರತಿ ವರ್ಷ ನೈಸರ್ಗಿಕ ಹಾವಳಿಗೆ ಪರಿಹಾರ ನೀಡಲು .35 ಸಾವಿರ ಕೋಟಿ ಇಟ್ಟಿರುತ್ತಾರೆ. ಇಡೀ ದೇಶಕ್ಕೆ ಹಣ ಕೊಡಬೇಕು. ಕೇಂದ್ರದಿಂದ ಮತ್ತೆ ಅನುದಾನ ಸಿಗುವ ನಿರೀಕ್ಷೆ ಇಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದೆ. ನಮ್ಮ ಖಜಾನೆಯಲ್ಲಿ ಹಣ ಇದೆ ಎಂದರು.

click me!