ಹೊಸಪೇಟೆ: ಝೂಲಾಜಿಕಲ್‌ ಪಾರ್ಕ್‌ನಲ್ಲಿ ಕೋಟಿ ವೆಚ್ಚದ ಪಶು ಆಸ್ಪತ್ರೆ

By Kannadaprabha NewsFirst Published Oct 25, 2020, 1:11 PM IST
Highlights

ಪ್ರಾಣಿ, ಪಕ್ಷಿಗಳಿಗೆ ಉತ್ತಮ ಚಿಕಿತ್ಸೆ| ಕಮಲಾಪುರದ ಬಳಿ 141 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಾಣಿ ಸಂಗ್ರಹಾಲಯ ಹಾಗೂ ಸಫಾರಿ ಆರಂಭ 34 ಕೋಟಿ ವೆಚ್ಚದಲ್ಲಿ ಝೂಲಾಜಿಕಲ್‌ ಪಾರ್ಕ್ ನಿರ್ಮಾಣ, ಈಗ ಮತ್ತೆ ಒಂದು ಕೋಟಿ ರು. ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣ| 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಅ.25): ಕಮಲಾಪುರ ಬಳಿಯ ಅಟಲ್‌ ಬಿಹಾರಿ ವಾಜಪೇಯಿ ಝೂಲಾಜಿಕಲ್‌ ಪಾರ್ಕ್‌ನಲ್ಲೇ ಪ್ರಾಣಿ, ಪಕ್ಷಿಗಳಿಗಾಗಿ ಬರೋಬ್ಬರಿ ಒಂದು ಕೋಟಿ ರು. ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಿಸಲಾಗಿದೆ. ಈ ಮೂಲಕ ವನ್ಯಜೀವಿಗಳಿಗೆ ಈ ಭಾಗದಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿದೆ. ಜತೆಗೆ ಈ ಆಸ್ಪತ್ರೆಯೇ ರಾಜ್ಯದಲ್ಲಿ ದೊಡ್ಡ ಪಶು ಆಸ್ಪತ್ರೆ ಆಗುವ ಹಾದಿಯಲ್ಲಿದೆ.

ಕಮಲಾಪುರದ ಬಳಿ 141 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಾಣಿ ಸಂಗ್ರಹಾಲಯ ಹಾಗೂ ಸಫಾರಿ ಆರಂಭಿಸಲಾಗಿದೆ. 34 ಕೋಟಿ ವೆಚ್ಚದಲ್ಲಿ ಝೂಲಾಜಿಕಲ್‌ ಪಾರ್ಕ್ ನಿರ್ಮಾಣಗೊಂಡಿದ್ದು, ಈಗ ಮತ್ತೆ ಒಂದು ಕೋಟಿ ರು. ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣವಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ತುರ್ತು ಚಿಕಿತ್ಸಾ ಕೊಠಡಿ ಸೇರಿ ಇತರ 5 ಚಿಕಿತ್ಸಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.

ಈ ಪಶು ಆಸ್ಪತ್ರೆಯಲ್ಲಿ ಏಕಕಾಲಕ್ಕೆ ನಾಲ್ಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಬಹುದು. ರಕ್ತ ಮತ್ತು ಮೂತ್ರ ಪರೀಕ್ಷೆ ಸೇರಿ ಇತರ ಪರೀಕ್ಷಾ ಕೇಂದ್ರಗಳನ್ನು ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ. ಈ ಹಿಂದೆ ಮೈಸೂರು, ಶಿವಮೊಗ್ಗಕ್ಕೆ ಚಿಕಿತ್ಸೆಗೆ ಕಳುಹಿಸಲಾಗುತ್ತಿತ್ತು. ಈಗ ಇಲ್ಲೇ ಚಿಕಿತ್ಸೆ ಲಭ್ಯವಾಗಲಿದ್ದು, ಪ್ರಾಣಿಗಳ ಆರೋಗ್ಯ ಸುಧಾರಣೆಗೆ ಈ ಆಸ್ಪತ್ರೆ ಸಹಕಾರಿಯಾಗಲಿದೆ.

ಸರ್ಕಾರದ ಸಾಮೂಹಿಕ ವಿವಾಹಕ್ಕೆ ವಧು-ವರರೇ ಸಿಗ್ತಿಲ್ಲ..!

ಝೂಲಾಜಿಕಲ್‌ ಪಾರ್ಕ್‌ನಲ್ಲಿ ನಿರ್ಮಾಣವಾಗಿರುವ ಪಶು ಆಸ್ಪತ್ರೆಯಲ್ಲಿ ಪಶುವೈದ್ಯೆ ವಾಣಿಶ್ರೀ ನೇತೃತ್ವದಲ್ಲಿ ಪ್ರಾಯೋಗಿಕ ಚಿಕಿತ್ಸೆ ನಡೆಯುತ್ತಿದೆ. ಚಿರತೆ, ಕರಡಿ, ಹಾವು ಸೇರಿ ಇತರ ಪ್ರಾಣಿ-ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜತೆಗೆ ತಜ್ಞವೈದ್ಯರ ಸಲಹೆ ಕೂಡ ಪಡೆಯಲಾಗುತ್ತಿದೆ. ಈ ಆಸ್ಪತ್ರೆಯಿಂದ ಪ್ರಾಣಿ, ಪಕ್ಷಿಗಳ ಆರೋಗ್ಯ ಸುಧಾರಣೆಗೆ ಅನುಕೂಲವಾಗಲಿದೆ.

ಟ್ಯೂರಿಸಂ ಹಬ್‌ಗೆ ಸಹಕಾರಿ

ಕಮಲಾಪುರದ ವಾಜಪೇಯಿ ಝೂಲಾಜಿಕಲ್‌ ಪಾರ್ಕ್ ಈ ಭಾಗದ ಟೂರಿಸಂ ಬೆಳವಣಿಗೆಗೆ ಸಹಕಾರಿಯಾಗಿದೆ. ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮಕ್ಕೆ ಆಗಮಿಸುವ ಪ್ರವಾಸಿಗರನ್ನು ಈ ಉದ್ಯಾನ ಸೆಳೆಯುತ್ತಿದೆ. ಈ ಭಾಗದಲ್ಲಿ ರೆಸಾರ್ಟ್‌, ಹೋಟೆಲ್‌ ಉದ್ಯಮ ಬೆಳೆಯಲು ಪಾರ್ಕ್ ಪ್ರತ್ಯಕ್ಷವಾಗಿ ಸಹಕಾರಿಯಾಗಿದೆ. ಹೀಗಾಗಿ ಪಾರ್ಕ್ ನಿರ್ಮಾಣದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ.

ಒಂದು ಕೋಟಿ ರು. ವೆಚ್ಚದಲ್ಲಿ ಝೂಲಾಜಿಕಲ್‌ ಪಾರ್ಕ್‌ನಲ್ಲಿ ಪಶು ಆಸ್ಪತ್ರೆ ನಿರ್ಮಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಉದ್ಘಾಟನೆ ಆಗಿಲ್ಲ. ಶೀಘ್ರವೇ ಲೋಕಾರ್ಪಣೆಗೊಳ್ಳಲಿದ್ದು, ಪ್ರಾಣಿ, ಪಕ್ಷಿಗಳ ಚಿಕಿತ್ಸೆಗೆ ಪೂರ್ಣಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಝೂಲಾಜಿಕಲ್‌ ಪಾರ್ಕ್‌ ಅಧಿಕಾರಿ ಕಿರಣ್‌ಕುಮಾರ್‌ ಹೇಳಿದ್ದಾರೆ. 
 

click me!