ರಾಜ್ಯದಲ್ಲಿ 2 ದಿನ ಅಬ್ಬರಿಸಲಿದ್ದಾನೆ ವರುಣ : ಯಾವ ಜಿಲ್ಲೆಗಳಿಗೆ ಅಲರ್ಟ್

Kannadaprabha News   | Asianet News
Published : Sep 03, 2020, 08:00 AM IST
ರಾಜ್ಯದಲ್ಲಿ 2 ದಿನ ಅಬ್ಬರಿಸಲಿದ್ದಾನೆ ವರುಣ  : ಯಾವ ಜಿಲ್ಲೆಗಳಿಗೆ ಅಲರ್ಟ್

ಸಾರಾಂಶ

ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಬೆಂಗಳೂರು (ಸೆ.03): ರಾಜ್ಯದ ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಸೆ.3 ಮತ್ತು 4ರಂದು ಅತೀ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇರುವುದರಿಂದ ‘ಆರೆಂಜ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಎರಡು ದಿನ ನಿರಂತರವಾಗಿ ಗುಡುಗು ಸಹಿತ ಅತಿ ಹೆಚ್ಚು ಮಳೆ ಸುರಿಯಲಿರುವ ಸಂಭವವಿರುವುದರಿಂದ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಕರಾವಳಿಯ ಎಲ್ಲ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳ ಹಲವು ಕಡೆ ಗುಡುಗು ಸಹಿತ ಭಾರಿ ಮಳೆ ಸುರಿಯುವ ನಿರೀಕ್ಷೆ ಇರುವುದರಿಂದ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ರಾಜ್ಯದಲ್ಲಿ ಮೋಡ ಕವಿದ ಹಾಗೂ ಚಳಿಯ ವಾತಾವರಣ ಇರಲಿದೆ. ತಾಪಮಾನ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ರಾಜ್ಯದ 11 ಜಿಲ್ಲೆಗಳಲ್ಲಿ ಮತ್ತೆ ಮಳೆ ಚುರುಕು

 ಕಳೆದ ಕೆಲದಿನಗಳಿಂದ ಮಾಯವಾಗಿದ್ದ ಮಳೆ ಬುಧವಾರದಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತಂಪೆರೆದಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಲೆನಾಡು ಭಾಗದ ಕೊಡಗು, ಚಿಕ್ಕಮಗಳೂರು, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಹಳೇ ಮೈಸೂರು ಭಾಗದ ಬೆಂಗಳೂರು ನಗರ, ತುಮಕೂರು, ಕೋಲಾರ, ಉತ್ತರ ಕರ್ನಾಟಕದ ಗದಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ.

ಮಳೆ ಕಡಿಮೆ ಇದ್ದರೂ ಹೆಚ್ಚುತ್ತಿದೆ ಪ್ರವಾಹ: ಲೆಕ್ಕಾಚಾರವೆಲ್ಲಾ ಬುಡಮೇಲಾಗುತ್ತಿರುವುದೇಕೆ?

ಏತನ್ಮಧ್ಯೆ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮತ್ತೆ ಮಳೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಮಟ್ಟಸ್ಪಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಅಲಮಟ್ಟಿಗೆ ಒಳಹರಿವು 37 ಸಾವಿರದಿಂದ 47 ಸಾವಿರ ಕ್ಯು.ಗೆ ಏರಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿದ್ದು, ಜಿಲ್ಲಾಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಬಿಡುವು ನೀಡಿ ಆಗಾಗ್ಗೆ ಸುರಿಯಿತು. ಭಾರತೀಯ ಹವಾಮಾನ ಇಲಾಖೆಯಿಂದ ಸೆ.2ರಿಂದ 4ರ ಬೆಳಗ್ಗೆ 8.30ರ ವರೆಗೆ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ತರೀಕೆರೆ ಹಾಗೂ ಕೊಪ್ಪ ತಾಲೂಕಿನ ಕೆಲವೆಡೆ ಮಳೆ ಸುರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ವಾರವಿಡೀ ಕೈಕೊಟ್ಟಿದ್ದ ಮಳೆ ಬುಧವಾರದಿಂದ ಮತ್ತೆ ಆರಂಭವಾಗಿದ್ದು ಶುಕ್ರವಾರದವರೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ, ಹೊಸದುರ್ಗ ತಾಲೂಕಿನ ಶ್ರೀರಾಂಪುರ,ಗದಗ ಜಿಲ್ಲೆಯ ಮುಂಡರಗಿ ಸೇರಿ ಹಲವು ಕಡೆ ಮಳೆಯಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಆಗುತ್ತಿದ್ದು ಕೆರೆಗಳಿಗೆ ಸಾಕಷ್ಟುನೀರು ಹರಿದು ಬಂದಿದೆ.

PREV
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ