ಮುಖ್ಯಪೇದೆ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಡ್ಯೂಟಿ ಮಾಡಿದ ಕೊರೋನಾ ಸೋಂಕಿತ ಪೇದೆ| ಗುರುವಾರ ಸಂಜೆ ಪೇದೆಗೆ ಕೊರೋನಾ ಸೋಂಕು ದೃಢ| ಈಗ ಅಲ್ಲಿಯ ಪಿಎಸ್‌ಐ ಸೇರಿ ಪೋಲೀಸ್ ಠಾಣೆಯ 6 ಜನ ಪೋಲೀಸರು ಹಾಗೂ ಸೋಂಕಿತ ಪೇದೆಯ ಪತ್ನಿ, ಮಗಳು, ತಾಯಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಇವರನ್ನು ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ಗೆ|
ಹರಪನಹಳ್ಳಿ(ಜೂ.26): ಕೊರೋನಾ ಸೋಂಕಿತ ಮುಖ್ಯಪೇದೆ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಡ್ಯೂಟಿ ಮಾಡಿದ್ದು, ಪರೀಕ್ಷಾ ಬರೆದ ಮಕ್ಕಳು ಹಾಗೂ ಅಲ್ಲಿಯ ಸಿಬ್ಬಂದಿ ಆತಂಕಗೊಂಡಿದ್ದಾರೆ. ತಾಲೂಕಿನ ಅರಸಿಕೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲಿದ್ದ ಮುಖ್ಯ ಪೇದೆಯೊಬ್ಬರು ಕಳೆದ ಒಂದು ವಾರದಿಂದ ತೋರಣಗಲ್ ಕಂಟೈನ್ಮೆಂಟ್ ಜೋನ್‌ನಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ್ದಾರೆ.
ಜೂ. 22ರಂದು ಅರಸಿಕೇರಿಗೆ ಮರಳಿ ಬಂದಿದ್ದಾರೆ. 23ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. 24ರಂದು ಪೋತಲಕಟ್ಟಿ, ಚಿಕ್ಕಮೇಗಳಗೇರಿ, ಗುಳೇದಹಟ್ಟಿ, ಗ್ರಾಮಗಳಲ್ಲಿ ಗ್ರಾಮ ಗಸ್ತು (ಬೀಟ್ ) ಡ್ಯೂಟಿ ಮಾಡಿ ಮರಳಿ ವಾಪಾಸ್ ಅರಸಿಕೇರಿಯ ತಮ್ಮ ಕ್ವಾಟರ್ಸ್‌ಗೆ ಮರಳಿದ್ದಾರೆ. ಜೂ. 25ರಂದು ಉಚ್ಚಂಗಿದುರ್ಗ ಗ್ರಾಮದ ಉತ್ಸವಾಂಬ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರದಲ್ಲಿ ಡ್ಯೂಟಿ ಮಾಡಿ ಬಂದಿದ್ದಾರೆ. ಅರಸಿಕೇರಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಬೀಟ್ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ.
SSLC ಎಕ್ಸಾಂ: 10 ಕಿ.ಮೀ ನಡೆದು ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು..!
ಗುರುವಾರ ಸಂಜೆ ಅವರಿಗೆ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆಯೇ ಈಗ ಅಲ್ಲಿಯ ಪಿಎಸ್‌ಐ ಸೇರಿ ಪೋಲೀಸ್ ಠಾಣೆಯ 6 ಜನ ಪೋಲೀಸರು ಹಾಗೂ ಸೋಂಕಿತ ಪೇದೆಯ ಪತ್ನಿ, ಮಗಳು, ತಾಯಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಇವರನ್ನು ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಅಳವಡಿಸಲು ತಾಲೂಕು ಆಡಳಿತ ನಿರ್ಧರಿಸಿದೆ.
ಅರಸಿಕೇರಿ ಪೊಲೀಸ್ ಠಾಣೆ ಸೀಲ್ಡೌನ್ ಮಾಡಲಾಗಿದೆ. ಸೋಂಕಿತ ಮುಖ್ಯ ಪೇದೆ ಬೀಟ್ ಡ್ಯೂಟಿ ಮಾಡಿದ ಮೂರು ಗ್ರಾಮಗಳ ಜನರು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಹಾಗೂ ಮಕ್ಕಳಲ್ಲಿ ಆತಂಕ ಸೃಷ್ಟಿಯಾಗಿದೆ. ಅಲ್ಲದೆ, ಪ್ರಶ್ನೆ ಪತ್ರಿಕೆ ತರುವ ವಾಹನದಲ್ಲೂ ಈ ಪೇದೆ ಕರ್ತವ್ಯ ನಿರ್ವಸಿದ್ದಾರೆ. ಈ ಪರೀಕ್ಷಾ ಕೇಂದ್ರದಲ್ಲಿ 269 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಲ್ಲದೆ, 30 ಜನ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ. ಇವರೆಲ್ಲರಲ್ಲಿ ಈಗ ಆತಂಕ ಶುರುವಾಗಿದೆ.
ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ, ತಹಸೀಲ್ದಾರ್ ಡಾ. ನಾಗವೇಣಿ, ಆರೋಗ್ಯಾಧಿಕಾರಿ ಡಾ. ಶಿವಕುಮಾರ ಅರಸಿಕೇರಿ ಠಾಣೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಅರಿಸಿಕೇರಿ ಸೀಲ್ಡೌನ್ ಮಾಡಿರುವುದರಿಂದ ಸಾರ್ವಜನಿಕರು ದೂರು ನೀಡುವುದಿದ್ದರೆ ಚಿಗಟೇರಿ ಠಾಣೆಗೆ ನೀಡಬಹುದು ಎಂದು ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ತಿಳಿಸಿದ್ದಾರೆ.
ತೋರಣಗಲ್ ಕಂಟೈನ್ಮೆಂಟ್ ಜೋನ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಮುಖ್ಯಪೇದೆಗೆ ಪಾಸಿಟಿವ್ ಬಂದಿರುವುದು ಖಚಿತವಾಗಿದೆ. ಆದರೆ, ಪರೀಕ್ಷೆಗೆ ಮುನ್ನ ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು ಹೇಳೀದ್ದಾರೆ.