ಎಂಪಿಎಂ, ವಿಐಎಸ್‌ಎಲ್‌ ಉಳಿಸಲು ಸರ್ವ ಯತ್ನ; ಜಗದೀಶ್ ಶೆಟ್ಟರ್

By Kannadaprabha NewsFirst Published Jul 2, 2020, 10:58 AM IST
Highlights

ಎಂಪಿಎಂ ತನ್ನದೇ ಆದ ಅರಣ್ಯ ಭೂಮಿಯಂತಹ ಸಂಪನ್ಮೂಲ ಹೊಂದಿದ್ದು, ಮತ್ತೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜು.02): ಭದ್ರಾವತಿಯಲ್ಲಿನ ಪ್ರತಿಷ್ಠಿತ ಎಂಪಿಎಂ ಹಾಗೂ ವಿಐಎಸ್‌ಎಲ್‌ ಕಾರ್ಖಾನೆಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

ನಗರದ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಎಂಪಿಎಂ ತನ್ನದೇ ಆದ ಅರಣ್ಯ ಭೂಮಿಯಂತಹ ಸಂಪನ್ಮೂಲ ಹೊಂದಿದ್ದು, ಮತ್ತೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಕೈಗಾರಿಕೆಗಳನ್ನು ಸ್ಥಾಪಿಸಲು ಇದ್ದ ಅಡೆತಡೆ ಹಾಗೂ ವಿಳಂಬ ನಿವಾರಿಸಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಕೈಗಾರಿಕೆ ಸ್ಥಾಪಿಸಲು ಜಾಗ ನೋಡಿ, ಯಾವ ಕೈಗಾರಿಕೆ ಎಂದು ನಿರ್ಧರಿಸಿದರೆ ಸಾಕು ಅವರು ಕೈಗಾರಿಕ ಘಟಕ ನಿರ್ಮಾಣದ ಕೆಲಸ ಆರಂಭಿಸಬಹುದು. ಅದಕ್ಕೆ ಬೇಕಾದ ಪರವಾನಗಿಗಳನ್ನು 3 ವರ್ಷದೊಳಗೆ ಪಡೆದರೆ ಸಾಕು. ಇಂತಹ ಕಾನೂನುಗಳು ಬರುತ್ತಿರುವುದರಿಂದ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಲಿದೆ ಎಂದರು.

ಹೆಚ್ಚಿನ ಕೈಗಾರಿಕೆಗಳು ಬೆಂಗಳೂರಿನಲ್ಲಿ ಕೇಂದ್ರಿಕೃತವಾಗಿವೆ. ಮುಂದಿನ ದಿನದಲ್ಲಿ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗದಂತಹ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಇದಕ್ಕಾಗಿ 2020-2025 ಕೈಗಾರಿಕೆಯ ಹೊಸ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

109 ಪ್ರಯಾಣಿಕ ರೈಲುಗಳ ಖಾಸಗೀಕರಣ ಪ್ರಕ್ರಿಯೆ ಶುರು!

ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೈಗಾರಿಕೆಗಳಿಗೆ ಒಳ್ಳೆಯ ಅವಕಾಶಗಳಿವೆ. ಜಾಗತಿಕ ಬದಲಾವಣೆಯಿಂದಾಗಿ ಚೀನಾದಿಂದ ಹೊರ ಬರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದಲ್ಲಿ ಅವಕಾಶ ಕಲ್ಪಿಸಲು ಸಕಲ ಸಿದ್ಧತೆ ನಡೆದಿದೆ. ಕರ್ನಾಟಕ ಕೈಗಾರಿಕ ಸ್ನೇಹಿ ರಾಜ್ಯವಾಗಿದ್ದು, ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯ ಮಂತ್ರಿ ಯಡಿಯೂರಪ್ಪನವರು ವಿಫುಲ ಅವಕಾಶ ಕಲ್ಪಿಸುತ್ತಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಂಕಷ್ಟದಲ್ಲಿ ಕೈಗಾರಿಕೆಗಳ ಸುಧಾರಣೆಗೆ 3ಲಕ್ಷ ಕೋಟಿ ರು. ಹಣ ನೀಡಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆಗೆ ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕ ಎಲ್ಲವೂ ಆಗುತ್ತಿರುವುದರಿಂದ ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇಲ್ಲಿನ ದೇವಕಾತಿಕೊಪ್ಪ ಕೈಗಾರಿಕಾ ವಸಹತು ಪ್ರದೇಶದಲ್ಲಿ ಕೈಗಾರಿಕೆಗಳಿಗೆ ನೀಡಿರುವ ಜಾಗದ ಬೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿಗದಿ ಮಾಡಲಾಗುವುದು ಹಾಗೂ ಮೂಲಭೂತ ಸೌಲಭ್ಯ ಒದಗಿಸಲಾಗುವುದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಸುವರ್ಣ ಯುಗ ಆರಂಭವಾಗಿದೆ. ಚತುಷ್ಕೋನ ರಸ್ತೆ, ಶಿಕಾರಿಪುರ- ರಾಣೇಬೆನ್ನೂರು ರೈಲು ಮಾರ್ಗ, ವಿಮಾನ ನಿಲ್ದಾಣ ಸ್ಥಾಪನೆಯಲ್ಲದೆ ನಷ್ಟದಲ್ಲಿರುವ ವಿಐಎಸ್‌ಎಲ್‌ ಹಾಗೂ ಎಂಪಿಎಂ ಕಾರ್ಖಾನೆ ಅಭಿವೃದ್ದಿಗೂ ಪ್ರಯತ್ನಿಸಲಾಗುತ್ತಿದೆ ಎಂದರು.

ವಾಣಿಜ್ಯ ಮತ್ತು ಕೈಗಾರಿಕಾಂಘದ ಅಧ್ಯಕ್ಷ ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಎಸ್‌. ರುದ್ರೇಗೌಡ, ಆಯನೂರು ಮಂಜುನಾಥ್‌, ಆರ್‌. ಪ್ರಸನ್ನಕುಮಾರ್‌, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್‌. ಅರುಣ್‌, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಮತ್ತಿತರರಿದ್ದರು. ಪಿ. ರುದ್ರೇಶ್‌ ಸ್ವಾಗತಿಸಿದರು. ರವಿ ಕಿಶನ್‌ ಕಾರ್ಯಕ್ರಮ ನಿರೂಪಿಸಿದರು.
 

click me!