ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ

Kannadaprabha News   | Kannada Prabha
Published : Feb 07, 2026, 07:19 AM IST
Namma Metro Fares to Rise

ಸಾರಾಂಶ

ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿರುವುದು ಕೇಂದ್ರ ಸರ್ಕಾರ ಸ್ಥಾಪಿಸಿರುವ ದರ ನಿಗದಿ ಸಮಿತಿ. ಇದನ್ನು ಮರೆಮಾಚಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ಇನ್ನಾದರೂ ಸ್ವಾರ್ಥ ರಾಜಕೀಯ ನಾಟಕ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರು : ನಮ್ಮ ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿರುವುದು ರಾಜ್ಯ ಸರ್ಕಾರ ಅಲ್ಲ. ಬದಲಿಗೆ ಕೇಂದ್ರ ಸರ್ಕಾರ ಸ್ಥಾಪಿಸಿರುವ ದರ ನಿಗದಿ ಸಮಿತಿ. ಇದನ್ನು ಮರೆಮಾಚಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ಇನ್ನಾದರೂ ಸ್ವಾರ್ಥ ರಾಜಕೀಯ ನಾಟಕ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇದೇ ವೇಳೆ, ‘ನಾನು ಕೇಂದ್ರ ಸರ್ಕಾರಕ್ಕೆ ದರ ಪರಿಷ್ಕರಣೆಯನ್ನು ಪುನರ್‌ ಪರಿಶೀಲಿಸುವಂತೆ ಮನವಿ ಸಲ್ಲಿಸುತ್ತೇನೆ. ವಿಶೇಷವಾಗಿ ನಿತ್ಯ ಸಂಚರಿಸುವರು, ವಿದ್ಯಾರ್ಥಿಗಳು ಹಾಗೂ ಬಡವರಿಗೆ ಹೊರೆ ಕಡಿಮೆ ಮಾಡಬೇಕು’ ಎಂದು ಹೇಳಿದ್ದಾರೆ.

ಕೆಸರೆರೆಚಾಟಕ್ಕಿಂತ ಸತ್ಯ ಮುಖ್ಯ:

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು ಬೇಸರ ನಾನು ಅರ್ಥೈಸಿಕೊಳ್ಳಬಲ್ಲೆ. ಆದರೆ, ರಾಜಕೀಯ ಕೆಸರೆರೆಚಾಟಕ್ಕಿಂತ ರಾಜ್ಯದ ಜನರಿಗೆ ಸತ್ಯ ತಿಳಿಸುವುದು ಮುಖ್ಯ. ಮೆಟ್ರೋ ರೈಲ್ವೇಸ್ (ಆಪರೇಷನ್ ಆ್ಯಂಡ್‌ ಮೇಂಟೆನೆನ್ಸ್) ಆಕ್ಟ್- 2002ರ ಅಡಿಯಲ್ಲಿ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ದರಗಳನ್ನು ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಕಮಿಟಿ (ಎಫ್‌ಎಫ್‌ಸಿ) ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕಾಯಿದೆಯ ಸೆಕ್ಷನ್ 36ರ ಪ್ರಕಾರ, ದರ ನಿಗದಿ ಸಮಿತಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು. ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳನ್ನು ಮೆಟ್ರೋ ಆಡಳಿತವು ಒಪ್ಪಿ ಜಾರಿ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಈ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿಲ್ಲ. ಹೀಗಿದ್ದರೂ ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಸತ್ತಿನಲ್ಲಿ ಯಾಕೆ ಪ್ರಶ್ನಿಸಲಿಲ್ಲ?:

ದೆಹಲಿಯಲ್ಲಿ ರಾಜ್ಯದ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ನಾಯಕರೇಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಟೀಕಿಸುವ ರಾಜಕೀಯ ನಾಟಕ ಆಡುತ್ತಿದ್ದಾರೆ. ಇವರು ಈ ವಿಷಯವನ್ನು ಸಂಸತ್ತಿನಲ್ಲಿ ಏಕೆ ಪ್ರಶ್ನಿಸಲಿಲ್ಲ? ಕರ್ನಾಟಕದ ಬಿಜೆಪಿ ಸಚಿವರು ಕೇಂದ್ರ ಮಟ್ಟದಲ್ಲಿ ಹೆಚ್ಚು ದರದ ಸ್ಲ್ಯಾಬ್‌ಗಳನ್ನು ಏಕೆ ವಿರೋಧಿಸಲಿಲ್ಲ? ಬೆಂಗಳೂರಿಗರ ಬೆಂಬಲಕ್ಕೆ ನಿಲ್ಲಬೇಕಿದ್ದ ಕರ್ನಾಟಕದ ಬಿಜೆಪಿ ನಾಯಕರು ದೆಹಲಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವುದು ಯಾಕೆ? ಇವರಿಗೆ ರಾಜ್ಯದ ಜನರ ಹಿತರಕ್ಷಣೆಗಿಂತ ಹೈಕಮಾಂಡ್‌ ಓಲೈಕೆಯೇ ಮುಖ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಜನಹಿತಕ್ಕಾಗಿ ಕೇಂದ್ರಕ್ಕೆ ಒತ್ತಾಯ:

ಜನಹಿತದ ವಿಚಾರದಲ್ಲಿ ನಮ್ಮ ಬದ್ಧತೆ ಕಾನೂನಿನ ಗಡಿ ಮೀರಿದೆ. ಹೀಗಾಗಿ ದರ ನಿಗದಿ ಸಮಿತಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು. ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು. ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

PREV
Read more Articles on
click me!

Recommended Stories

Bengaluru: ಬಯಸಿದಂತೆ ಬಯಲು: ಬೆಂಗಳೂರಿನ ಬರೋಬ್ಬರಿ 194 ಸ್ಥಳಗಳ ಅಭಿವೃದ್ಧಿಗೆ ಮುಂದಾದ GBA
Bengaluru Karaga fund misuse ಮಾಜಿ ಅಧ್ಯಕ್ಷನಿಂದಲೇ ಕರಗದ ಹಣ ದುರ್ಬಳಕೆ?!