Bengaluru Karaga fund misuse ಮಾಜಿ ಅಧ್ಯಕ್ಷನಿಂದಲೇ ಕರಗದ ಹಣ ದುರ್ಬಳಕೆ?!

Kannadaprabha News, Ravi Janekal |   | Kannada Prabha
Published : Feb 07, 2026, 07:04 AM IST
Former president who misused Bangalore Karaga grant

ಸಾರಾಂಶ

ಬೆಂಗಳೂರು ಕರಗ ಮಹೋತ್ಸವಕ್ಕಾಗಿ ಸರ್ಕಾರದಿಂದ ನೀಡಿದ ಅನುದಾನವನ್ನು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಮಾಜಿ ಅಧ್ಯಕ್ಷರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿಗಳ ಸಮಿತಿಯು ಸಲ್ಲಿಸಿದ ವರದಿಯಲ್ಲಿ, ನಿಯಮಗಳನ್ನು ಉಲ್ಲಂಘಿಸಿ ಹಣಕಾಸು ವಹಿವಾಟು ಬಯಲು.

 ಬೆಂಗಳೂರು (ಫೆ.7): ಐತಿಹಾಸಿಕ ಧರ್ಮರಾಯಸ್ವಾಮಿ ದೇವಸ್ಥಾನದ ಮೂಲಕ ನಡೆಯುವ ಬೆಂಗಳೂರು ಕರಗ ಮಹೋತ್ಸವಕ್ಕಾಗಿ ಸರ್ಕಾರದಿಂದ ನೀಡಿದ ಅನುದಾನವನ್ನು ವ್ಯವಸ್ಥಾಪಕ ಸಮಿತಿಯ ಮಾಜಿ ಅಧ್ಯಕ್ಷ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಅಪರಾ-ತಪರಾ ಆಗಿರುವುದು ಬಹಿರಂಗ

ಅದಕ್ಕೆ ಪೂರಕವಾಗಿ 2024ನೇ ಸಾಲಿನಲ್ಲಿ ಬಿಡುಗಡೆ ಮಾಡಲಾದ ಅನುದಾನದ ಬಳಕೆಗೆ ಸಂಬಂಧಿಸಿದಂತೆ ನಗದು ಪುಸ್ತಕ ಪರಿಶೀಲಿಸಿ, ವಹಿವಾಟಿನಲ್ಲಾಗಿರುವ ಲೋಪಗಳ ಕುರಿತಂತೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಸಮಿತಿ 2025ರ ಜು.29ರಂದು ಈ ಹಿಂದಿನ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪಕ ಸಮಿತಿಯ ಮಾಜಿ ಅಧ್ಯಕ್ಷರಿಂದ ಅಪರಾ-ತಪರಾ ಆಗಿರುವುದು ಬಹಿರಂಗಗೊಂಡಿದೆ.

2023ರ ಕರಗಕ್ಕೆ 1.12 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿತ್ತು.

2023ನೇ ಸಾಲಿನ ಕರಗ ಮಹೋತ್ಸವಕ್ಕಾಗಿ ಬಿಬಿಎಂಪಿಯಿಂದ ನೇರವಾಗಿ ವ್ಯವಸ್ಥಾಪನಾ ಸಮಿತಿ ನಿರ್ವಹಣೆಯ ಬ್ಯಾಂಕ್‌ ಖಾತೆಗೆ 1.12 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ, ಪಾರದರ್ಶಕತೆ ಕಾಯ್ದುಕೊಳ್ಳದೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಸ್ ಅವರು ಅನುದಾನ ಬಳಕೆ ಮಾಡಿರುವ ಕುರಿತಂತೆ ಜಿಲ್ಲಾಧಿಕಾರಿಗಳ ಸಮಿತಿಗೆ ದೂರುಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ 2024ನೇ ಸಾಲಿನ ಕರಗ ಮಹೋತ್ಸವ ಅನುದಾನವನ್ನು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳ ಖಾತೆಗೆ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ತಿಳಿಸಿದ್ದರು.

ಅದರ ಆಧಾರದಲ್ಲಿ 2024ನೇ ಸಾಲಿಗೆ ಮೊದಲ ಹಂತದಲ್ಲಿ ₹40 ಲಕ್ಷ ಬಿಡುಗಡೆ ಮಾಡಲಾಗಿತ್ತು. ಅದಾದ ನಂತರ ಕರಗ ಮಹೋತ್ಸವಕ್ಕಾದ ಹೆಚ್ಚುವರಿ ವೆಚ್ಚಕ್ಕಾಗಿ ₹60.96 ಲಕ್ಷ ಬಿಡುಗಡೆ ಮಾಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಾದ ನಂತರ ಆ ಹೆಚ್ಚುವರಿ ಅನುದಾನವನ್ನು ಬಿಬಿಎಂಪಿ ಅಧಿಕಾರಿಗಳು ಕಾರ್ಯ ನಿರ್ವಾಹಕ ಅಧಿಕಾರಿಗಳ ನಿರ್ವಹಣೆಯ ಬ್ಯಾಂಕ್‌ ಖಾತೆಗೆ ಅನುದಾನ ಪಾವತಿಸದೆ ವ್ಯವಸ್ಥಾಪನ ಸಮಿತಿ ನಿರ್ವಹಣೆಯ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಿದ್ದರು.

ನಿಯಮ ಉಲ್ಲಂಘನೆ:

ಆ ಬಳಿಕ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಬಿಬಿಎಂಪಿಯಿಂದ ಬಂದ ಹಣವನ್ನು ಕರಗದ ಸಮಯದಲ್ಲಿ ಕೆಲಸ ಮಾಡಿದವರಿಗೆ, ಸಾಮಗ್ರಿ ಸರಬರಾಜು ಮಾಡಿದ ವರ್ತಕರಿಗೆ ಪಾವತಿಸಿರುವುದಾಗಿ ವ್ಯವಸ್ಥಾಪನಾ ಸಮಿತಿ ಸಭೆಯ ನಡಾವಳಿಯಲ್ಲಿ ನಮೂದಿಸಿದ್ದಾರೆ. ಆದರೆ, ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಾವಳಿಗಳು 2002ರ ನಿಯಮ 33 (3) ರ ಪ್ರಕಾರ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತ್ರ ಹಣಕಾಸು ವಹಿವಾಟು ಮಾಡಬೇಕು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಆ ನಿಯಮ ಉಲ್ಲಂಘಿಸಿ ಹಣ ಬಳಕೆ ಮಾಡಿದ್ದಾರೆ ಎಂಬುದು ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ಕ್ರಮಕ್ಕೆ ಸೂಚನೆ

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ₹22.50 ಲಕ್ಷವನ್ನು ನಗದು ರೂಪದಲ್ಲಿ ಬ್ಯಾಂಕ್‌ನಿಂದ ಹಣ ಬಿಡುಗಡೆ ಮಾಡಿಕೊಂಡಿರುವುದನ್ನೂ ಜಿಲ್ಲಾಧಿಕಾರಿಗಳ ಸಮಿತಿ ಪತ್ತೆ ಮಾಡಿದೆ. ಈ ಕುರಿತಂತೆ 2025ರ ಜು.29ರಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಿ, ಹಣ ದುರ್ಬಳಕೆ ಕುರಿತಂತೆ ಕ್ರಮ ಕೈಗೊಳ್ಳುವಂತೆಯೂ ತಿಳಿಸಲಾಗಿದೆ.

ಅಸಹಜ ಪಾವತಿ ಪತ್ತೆ 

ಧರ್ಮರಾಯಸ್ವಾಮಿ ದೇವಸ್ಥಾನದ ಅಕ್ರಮಗಳಿಂದಾಗಿ 2025ನೇ ಸಾಲಿನ ಕರಗ ಮಹೋತ್ಸವದ ಖರ್ಚು-ವೆಚ್ಚಗಳ ನಿರ್ವಹಣೆಗಾಗಿ ಮುಜರಾಯಿ ಇಲಾಖೆ ಆಯುಕ್ತರು ಪ್ರತ್ಯೇಕ ಅಧಿಕಾರಿಗಳ ತಂಡವನ್ನೂ ರಚಿಸಿದ್ದರು. ಆದರೂ, 2025ರ ಕರಗ ಉತ್ಸವದ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದಂತೆ ₹1.40 ಕೋಟಿ ಬಿಡುಗಡೆ ಮಾಡುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಈ ಪ್ರಸ್ತಾವನೆಯಲ್ಲಿ ಅಸಹಜ ಪಾವತಿ, ರೂಢಿಯಲ್ಲಿಲ್ಲದ ಸಂಪ್ರದಾಯಗಳಿಗೆ ವೆಚ್ಚ ಮಾಡಿರುವ ಕುರಿತು ಮಾಹಿತಿಗಳಿರುವುದು ಪತ್ತೆಯಾಗಿದೆ.

PREV
Read more Articles on
click me!

Recommended Stories

Kogilu shed demolition controversy ಕೋಗಿಲು ಶೆಡ್ ತೆರವು ವಿವಾದ; ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕರಿಗೌಡ
Karnataka police cyber operation ಸೈಬರ್‌ ವಂಚನೆಗೆ ನಕಲಿ ಬ್ಯಾಂಕ್‌ಖಾತೆ ಪೂರೈಸುತ್ತಿದ್ದ 13 ಜನ ಸೆರೆ