* ನೀರಿದ್ದಾಗಲೂ ನೀರಾವರಿ ಸಲಹಾ ಸಮಿತಿ ಸಭೆ ವಿಳಂಬ ಯಾಕೆ?
* ಜೂನ್‌ನಲ್ಲಿಯೇ ನೀರು ಬಿಡುವ ನಿರ್ಧಾರ ಪ್ರಕಟಿಸಿದರೆ ರೈತರು ಸಿದ್ಧವಾಗುತ್ತಾರೆ
* ಸಸಿ ಮಡಿಗೂ ನೀರು
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.05): ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಮೇ ತಿಂಗಳಲ್ಲಿಯೇ ನೀರು ಬಂದಿದೆ. ಜೂನ್ ಮೊದಲ ವಾರದಲ್ಲಿಯೇ ಬರೋಬ್ಬರಿ 39 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೂ ನಿರ್ಧಾರ ಮಾಡುವ ನೀರಾವರಿ ಸಲಹಾ ಸಮಿತಿ ಸಭೆ ಮಾಡುವುದಕ್ಕೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪುರುಸೊತ್ತಿಲ್ಲ.
ಮುಂಗಾರು ಹಂಗಾಮಿನ ಬೆಳೆಗೆ 90-100 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ ಜಲಾಶಯದಲ್ಲಿ ಸುಮಾರು 40 ಟಿಎಂಸಿ ನೀರು ಸಂಗ್ರಹವಾಗುತ್ತಿದ್ದಂತೆ ಕಾಲುವೆಗೆ ನೀರು ಬಿಡಲಾಗುತ್ತದೆ. ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿಯೂ ಇಷ್ಟುನೀರು ಬಂದಿರುವುದಿಲ್ಲ. ಈಗ ನೀರು ಬಂದಿಲ್ಲ ಎನ್ನುವ ಕಾರಣಕ್ಕಾಗಿಯೇ ನೀರಾವರಿ ಸಲಹಾ ಸಮಿತಿ ಸಭೆ ಮುಂದೂಡಿ, ನೀರು ಬಂದ ಮೇಲೆ ಸಭೆ ಮಾಡಿ, ನೀರು ಬಿಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಆದರೆ ಈ ವರ್ಷ ಜೂನ್ ಮೊದಲ ವಾರದಲ್ಲಿಯೇ 39 ಟಿಎಂಸಿ ನೀರು ಬಂದಿದೆ. ಈಗ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಉತ್ತಮವಾಗಿದೆ. ಹೀಗಿರುವಾಗಲೂ ನೀರು ಬಿಡುವ ಕುರಿತು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನಿರ್ಧಾರ ಪ್ರಕಟ ಮಾಡುವುದಕ್ಕೂ ಮೀನಮೇಷ ಮಾಡುವುದು ಯಾಕೆ ಎನ್ನುವುದು ರೈತರ ಪ್ರಶ್ನೆ.
ಕೊಪ್ಪಳ: ಹತ್ತು ವರ್ಷವಾದರೂ ಬಾರದ ಹನಿ ನೀರು
ಜುಲೈ ಮೊದಲ ವಾರದಲ್ಲಿಯೇ ನೀರು ಬಿಡುವ ನಿರ್ಧಾರ ಕೈಗೊಂಡರೂ ನಿರ್ಧಾರ ಈಗಲೇ ಪ್ರಕಟ ಮಾಡಿದರೆ ರೈತರು ಸಸಿ ಮಡಿ ಹಾಕಿಕೊಳ್ಳುತ್ತಾರೆ. ನೀರು ಬಿಡುವ ಕುರಿತು ನಿರ್ಧಾರ ಮಾಡುವುದಕ್ಕೆ ವಿಳಂಬ ಮಾಡಿದರೆ ರೈತರ ಆತಂಕಕ್ಕೆ ಕಾರಣವಾಗುತ್ತದೆ.
ನೀರು ಇಲ್ಲದಿರುವಾಗ ಅನಿವಾರ್ಯ. ಆದರೆ, ನೀರು ಇದ್ದರೂ ಬಿಡುವ ನಿರ್ಧಾರವನ್ನು ಬೇಗನೆ ತೆಗೆದುಕೊಳ್ಳುವುದಕ್ಕೆ ವಿಳಂಬ ಮಾಡುತ್ತಿರುವುದು ಮಾತ್ರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜುಲೈ ಮೊದಲ ವಾರದಲ್ಲಿ ನೀರು ಬಿಟ್ಟರೆ ಬೇಸಿಗೆಯ ಬೆಳೆಗೆ ನೀರಿನ ಅಷ್ಟುಸಮಸ್ಯೆಯಾಗುವುದಿಲ್ಲ. ಆದರೆ, ಈಗ ನೀರು ಬಿಡುವುದು ವಿಳಂಬವಾದರೆ ಬೇಸಿಗೆಯ ಹಂಗಾಮು ಬೆಳೆಗೆ ಸಮಸ್ಯೆಯಾಗುತ್ತದೆ.
ಮೂರು ಜಿಲ್ಲೆಯ ಸಚಿವರು:
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯ ಶಾಸಕರು, ಸಚಿವರು ಭಾಗವಹಿಸಬೇಕು. ಇದುವರೆಗೂ ಈ ಸಭೆ ನಡೆಸುವ ಕುರಿತು ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರು ಸಚಿವರಿಗೆ ಈಗಾಗಲೇ ಮನವಿ ಮಾಡಿದ್ದರೂ ಸಮಯ ನಿಗದಿಯಾಗುತ್ತಿಲ್ಲ ಎನ್ನುವುದು ಗಮನಾರ್ಹ ಅಂಶ.
ಪೊಲೀಸರಿಗೆ ಸಚಿವ ಹಾಲಪ್ಪ ಆಚಾರ್ ತಾಕೀತು ಸರಿಯಲ್ಲ: ಕಾಂಗ್ರೆಸ್
ಸಸಿ ಮಡಿಗೂ ನೀರು:
ಈ ಹಿಂದೆ ಸಸಿ ಮಡಿ ಹಾಕಿಕೊಳ್ಳುವುದಕ್ಕೂ ನೀರು ಬಿಡಲಾಗುತ್ತಿತ್ತು. ಆದರೆ, ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ವಿಳಂಬವಾಗಲಾರಂಭಿಸಿದ್ದರಿಂದ ರೈತರು ಪರ್ಯಾಯ ಮಾರ್ಗ ಮಾಡಿಕೊಂಡಿದ್ದಾರೆ. ಪಂಪ್‌ಸೆಟ್ ನೀರಿನ ಮೂಲಕ ಸಸಿ ಹಾಕಿಕೊಳ್ಳುತ್ತಾರೆ. ಇಲ್ಲವೇ ಕೆರೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಸಸಿ ಹಾಕಿಕೊಳ್ಳುತ್ತಾರೆ. ಆದರೆ, ಈ ಬಾರಿ ಜಲಾಶಯದಲ್ಲಿ ಭರ್ಜರಿ ನೀರು ಇರುವುದರಿಂದ ಸಸಿ ಮಡಿಹಾಕಿಕೊಳ್ಳುವುದಕ್ಕಾದರೂ ನೀರು ಬಿಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಜಲಾಶಯದಲ್ಲಿ ನೀರು ಸಂಗ್ರಹ ಇರುವುದರಿಂದ ಕಾಲುವೆಗೆ ನೀರು ಬಿಡುವುದರಿಂದ ಕಾಲುವೆ ಏನಾದರೂ ಸಮಸ್ಯೆಯಾಗುವುದು ಈಗಲೇ ಗೊತ್ತಾಗುತ್ತದೆ. ರಿಪೇರಿಯಾದರೂ ಮಾಡಿಕೊಳ್ಳಬಹುದು.
ತುಂಗಭದ್ರಾ ಜಲಾಶಯದಲ್ಲಿ ಈಗ ನೀರು ಸಾಕಷ್ಟು ಇದೆ. ಬಿಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಜುಲೈ ಮೊದಲ ವಾರದಲ್ಲಿಯೇ ನೀರು ಬಿಡಬೇಕಾಗುತ್ತದೆ. ಈ ಕುರಿತು ವಾರದೊಳಗಾಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ತೀರ್ಮಾನ ಮಾಡಲಾಗುವುದು ಅಂತ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ.