ರಾಜಧಾನಿ ಬೆಂಗಳೂರಿನಲ್ಲಿ ಜನಸಾಮಾನ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಸಹ ಹನಿ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಮಾ.31): ರಾಜಧಾನಿ ಬೆಂಗಳೂರಿನಲ್ಲಿ ಜನಸಾಮಾನ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಸಹ ಹನಿ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕೊಳವೆ ಬಾವಿಗಳು, ಕೆರೆಗಳಲ್ಲಿನ ನೀರು ದಿನದಿಂದ ದಿನಕ್ಕೆ ಬತ್ತಿ ಹೋಗುತ್ತಿದೆ. ನೀರು ಇರುವ ಕೆರೆ ಮತ್ತು ರಾಜ ಕಾಲುವೆಗಳಲ್ಲಿನ ನೀರು ಸಂಪೂರ್ಣವಾಗಿ ಕಲುಷಿತವಾಗಿದ್ದು, ಪ್ರಾಣಿ ಪಕ್ಷಿಗಳು ಸಹ ನೀರು ಕುಡಿಯುವ ಪರಿಸ್ಥಿತಿ ಇಲ್ಲವಾಗಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಪ್ರಾಣಿ- ಪಕ್ಷಿಗಳು ಕುಡಿಯುವುದಕ್ಕೆ ನೀರಿಲ್ಲದೇ ನಿತ್ರಾಣವಾಗುತ್ತಿವೆ. ಬಿಸಿಲ ತಾಪ ಹೆಚ್ಚಿದೆ ಹಾಗೂ ಕುಡಿಯುವುದಕ್ಕೆ ನೀರು ಸಿಗದೇ ನೆಲಕ್ಕೆ ಬೀಳುತ್ತಿವೆ. ಈ ಸಂದರ್ಭದಲ್ಲಿ ವಾಹನಗಳು ಪಕ್ಷಿಗಳ ಮೇಲೆ ಹರಿದು ಅಪಘಾತ ಸಂಭವಿಸಿ ಸಾವನಪ್ಪುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಭ್ರಷ್ಟ ಸಂಸದ ಸುರೇಶ್ ಬೇಕಾ? ಸಾದಾಸೀದಾ ವ್ಯಕ್ತಿ ಮಂಜುನಾಥ್ ಬೇಕಾ?: ಸಿ.ಪಿ.ಯೋಗೇಶ್ವರ್
ಪಕ್ಷಿಗಳ ವಲಸೆ: ನೀರು- ಆಹಾರದ ಸಮಸ್ಯೆಯಿಂದ ನಗರದಲ್ಲಿರುವ ವಿವಿಧ ಬಗೆಯ ಪಕ್ಷಿಗಳು ನೀರು ಹುಡುಕಿಕೊಂಡು ವಲಸೆ ಹೋಗುವ ಸಂಖ್ಯೆ ಹೆಚ್ಚಾಗುತ್ತಿವೆ. ನೀರು ಇಲ್ಲದ ಕೆರೆ-ಕುಂಟೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸದಾ ಗಿಚಿಗುಡುತ್ತಿದ್ದ, ಪಕ್ಷಿಗಳು ಕಲರವ ಕ್ಷೀಣಿಸಿದೆ.
ಆಹಾರಕ್ಕಾಗಿ ಕೋತಿಗಳ ಪರದಾಟ: ಬೇಸಿಗೆಯಿಂದ ಮರ ಗಿಡಗಳಲ್ಲಿ ಹಸಿರುವ ಎಲೆ ಪ್ರಮಾಣ ಕಡಿಮೆಯಾಗಿದೆ. ಹಣ್ಣು-ಹೂ ಸಹ ಇಲ್ಲ. ಹೀಗಾಗಿ, ಕೋತಿಗಳು ಆಹಾರಕ್ಕಾಗಿ ಪರದಾಡುತ್ತಿವೆ. ಹಸಿವು ನೀಗಿಸಿಕೊಳ್ಳುವುದಕ್ಕೆ ಮನೆ- ಹೋಟೆಲ್, ಅಂಗಡಿಗಳ ಮೇಲೆ ದಾಳಿ ಆರಂಭಿಸಿವೆ.
ಹಾವುಗಳ ಕಾಟ ಹೆಚ್ಚಳ: ಉಷ್ಣಾಂಶ ಹೆಚ್ಚಾಗಿರುವುದರಿಂದ ಹಾವುಗಳು ತಂಪಾದ ಸ್ಥಳವನ್ನು ಹುಡುಕಾಟ ನಡೆಸುತ್ತಾ ಕಾರು ನಿಲ್ಲಿಸುವ ಸ್ಥಳ, ಚಪ್ಪಲಿ ಸ್ಯಾಂಡ್, ಬಟ್ಟೆ ತೊಳೆಯುವ ಸ್ಥಳಗಳಲ್ಲಿ ಅವಿತುಕೊಲ್ಳುತ್ತಿವೆ. ಸಾರ್ವಜನಿಕರು ಗಾಬರಿಯಿಂದ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಒಂದು ಕರೆ ಮಾಡಿದರೆ ಸಂರಕ್ಷಣೆ ಮಾಡಬಹುದಾಗಿದೆ ಎಂದು ಪ್ರಾಣಿ ಕಲ್ಯಾಣ ಪರಿಪಾಲಕ ಎ.ಪ್ರಸನ್ನ ಕುಮಾರ್ ಹೇಳಿದ್ದಾರೆ.
ದೂರು ಸಂಖ್ಯೆ ಹೆಚ್ಚಾದರೂ ಸ್ಪಂದನೆ ಇಲ್ಲ: ಪ್ರಾಣಿ- ಪಕ್ಷಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ದಳ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಪ್ರತಿ ದಿನ ಸುಮಾರು 120 ರಿಂದ 150 ದೂರುಗಳು ದಾಖಲಾಗುತ್ತಿವೆ. ಇಷ್ಟೊಂದು ಪ್ರಮಾಣದ ದೂರು ದಾಖಲಾದರೂ ಯಾವುದೇ ಕ್ರಮಗಳನ್ನು ಸರ್ಕಾರ ಮತ್ತು ಅಧಿಕಾರಿಗಳು ಕೈಗೊಂಡಿಲ್ಲ ಎಂಬುದು ವಾಸ್ತವಾಗಿದೆ.
ಪ್ರಾಣಿ-ಪಕ್ಷಿಗಳಲ್ಲಿ ಸೋಂಕು ಹೆಚ್ಚಳ: ಬೇಸಿಗೆ ಹಿನ್ನೆಲೆಯಲ್ಲಿ ಕೆಲವರು ಮನೆ ಮಹಡಿ ಮೇಲೆ, ಮೈದಾನ ಸೇರಿದಂತೆ ಮೊದಲಾದ ಕಡೆ ಪ್ರಾಣಿ-ಪಕ್ಷಿಗಳಿಗೆ ಮಡಿಕೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ದಣಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಮಡಿಕೆಗಳನ್ನು ಪ್ರತಿ ದಿನ ಸ್ವಚ್ಛಗೊಳಿಸಬೇಕು. ನೀರು ಬದಲಾವಣೆ ಮಾಡಬೇಕು. ಆದರೆ, ಅರಿವಿನ ಕೊರತೆಯಿಂದ ನಾಗರಿಕರು ಮಾಡುತ್ತಿಲ್ಲ. ಇದರಿಂದ ಪ್ರಾಣಿ- ಪಕ್ಷಿಗಳಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿದೆ.
ಅನುಕಂಪ ಗಿಟ್ಟಿಸಿ ಮತ ಹಾಕಿಸಿಕೊಳ್ಳುವ ಅನಿವಾರ್ಯತೆ ಇಲ್ಲ: ನಿಖಿಲ್ ಕುಮಾರಸ್ವಾಮಿ
ನಗರದಲ್ಲಿ ರಸ್ತೆ ಹಾಗೂ ವಿದ್ಯುತ್ ಅಪಘಾತಕ್ಕೆ ಒಳಗಾದ ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದಂತೆ ಮಾತ್ರ ದೂರುಗಳು ಬಂದಿವೆ. ಪ್ರಾಣಿ- ಪಕ್ಷಿಗಳಿಗೆ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಿಲ್ಲ. ಪ್ರತ್ಯೇಕವಾಗಿ ಪ್ರಾಣಿ ಪಕ್ಷಿಗಳಿಗೆ ಅಗತ್ಯ ನೀರು ಒದಗಿಸುವುದಕ್ಕೆ ಪಾಲಿಕೆಯಿಂದ ಯಾವುದೇ ವಿಶೇಷ ಕ್ರಮ ಕೈಗೊಂಡಿಲ್ಲ.
-ಸ್ವಾಮಿ, ಉಪ ಅರಣ್ಯಸಂರಕ್ಷಣಾಧಿಕಾರಿ, ಬಿಬಿಎಂಪಿ ಅರಣ್ಯ ವಿಭಾಗ