
ಬೆಂಗಳೂರು(ಏ.01): ನಗರಾದ್ಯಂತ ಬೇಸಿಗೆಯಲ್ಲಿ ನೀರಿನ ತೊಂದರೆ ಆಗದಂತೆ ಹಾಗೂ ಸಮಸ್ಯೆಗಳನ್ನು ಕ್ಷಿಪ್ರವಾಗಿ ಎದುರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣ ಈ ಬಾರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಲ್ಲ. ಕಬಿನಿ, ಕೆಆರ್‌ಎಸ್, ಹೇಮಾವತಿ ಅಣೆಕಟ್ಟು ಪ್ರದೇಶದಲ್ಲಿ ಅಗತ್ಯದಷ್ಟುನೀರಿನ ಸಂಗ್ರಹ ಇದೆ. ಹೀಗಾಗಿ ಅಭಾವದ ಸಮಸ್ಯೆ ಆಗುವುದಿಲ್ಲ ಎಂಬುದು ಜಲಮಂಡಳಿ ಅಭಿಪ್ರಾಯ. ಇಷ್ಟರ ನಡುವೆಯೂ ನೀರಿನ ತೊಂದರೆ ಎದುರಾದರೆ ಅದನ್ನೂ ನಿವಾರಿಸಲು ಕ್ರಮ ವಹಿಸಿದೆ.
ಈ ಹಿಂದೆ ಜಲಮಂಡಳಿ ಸುಮಾರು 7500 ಕೊಳವೆ ಬಾವಿಗಳನ್ನು ನಿರ್ವಹಿಸುತ್ತಿತ್ತು. ಈಚೆಗೆ ಬಿಬಿಎಂಪಿ 2486 ಬೋರ್‌ವೆಲ್‌ಗಳನ್ನು ಜಲಮಂಡಳಿಗೆ ಹಸ್ತಾಂತರಿಸಿದೆ. ಹೀಗಾಗಿ ಒಟ್ಟೂವ್ಯಾಪ್ತಿಯಲ್ಲಿರುವ ಸುಮಾರು 10,500 ಕೊಳವೆಬಾವಿಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇವುಗಳ ನಿರ್ವಹಣೆಗೆ ತಿಂಗಳಿಗೆ ಸುಮಾರು .2.5 ಕೋಟಿ ವೆಚ್ಚವಾಗುತ್ತಿದೆ. ಜತೆಗೆ, ಜಲಮಂಡಳಿ ಬಳಿಯಲ್ಲಿ 6-8 ಸಾವಿರ ಲೀ. ಸಾಮರ್ಥ್ಯದ 65 ನೀರಿನ ಟ್ಯಾಂಕರ್‌ಗಳಿವೆ. ನೀರು ಸರಬರಾಜು ಕೊರತೆ ಇರುವ ಪ್ರದೇಶಗಳನ್ನು ಗುರುತಿಸಿ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲಾಗುವುದು ಎಂದು ಬಿಡಬ್ಲೂಎಸ್‌ಎಸ್‌ಬಿ ಅಧಿಕಾರಿಗಳು ವಿವರಿಸಿದ್ದಾರೆ.
ಬೆಂಗಳೂರು: ನೌಕರರಿಂದಲೇ ಜಲಮಂಡಳಿಗೆ 1 ಕೋಟಿ ಟೋಪಿ..!
ಈ ಬಗ್ಗೆ ಮಾತನಾಡಿದ ಬಿಡಬ್ಲೂಎಸ್‌ಎಸ್‌ಬಿ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್, ಹಲವೆಡೆ ಈಗಾಗಲೇ ಕೊಳವೆಬಾವಿ ದುರಸ್ತಿಗೆ ಆದ್ಯತೆ ಮೇರೆಗೆ ಕ್ರಮ ವಹಿಸಲಾಗಿದೆ. ಇಷ್ಟಾದರೂ ವ್ಯತ್ಯಯ ಆದರೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ನೀರಿನ ತೊಂದರೆ ಉದ್ಭವಿಸದ ಕಾರಣ ಹೆಚ್ಚುವರಿ ಟ್ಯಾಂಕರ್ ಬಳಸಿಕೊಳ್ಳುವ ಅಗತ್ಯ ಬರಲಾರದು ಎಂದರು.
ನೀರಿನ ಮೇಲ್ವಿಚಾರಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ
ಇನ್ನು, ಮಂಡಳಿಯ 38 ಉಪವಿಭಾಗಗಳಿಗೆ ಬೇಸಿಗೆಯಲ್ಲಿ ನೀರಿನ ಸರಬರಾಜು ಮೇಲ್ವಿಚಾರಣೆ ಮಾಡಲು ಜಲಮಂಡಳಿಯ ಅಧಿಕಾರಿಗಳನ್ನು ವಿಶೇಷ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿಕೊಳ್ಳಲಾಗಿದೆ. ಈ ಅಧಿಕಾರಿಗಳು ತಮಗೆ ವಹಿಸಿರುವ ಉಪವಿಭಾಗಗಳಲ್ಲಿ ವ್ಯಾಪಕ ತಪಾಸಣೆ ಕೈಗೊಂಡು ಸಂಬಂಧಪಟ್ಟಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರ ನೀರಿನ ಸಮಸ್ಯೆಯ ಕುಂದು ಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಕ್ರಮಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಾವೇರಿ ವಿವಿಧ ಹಂತಗಳಿಂದ ನಗರಕ್ಕೆ ಸರಬರಾಜಾಗುವ ನೀರಿನ ಪ್ರಮಾಣವನ್ನು ಆಧರಿಸಿ ನಗರದಲ್ಲಿರುವ ಜಲಾಗಾರಗಳಲ್ಲಿ ನೀರು ಶೇಖರಣೆಯನ್ನು ಹಾಗೂ ವಿಭಾಗಗಳಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣದ ಪ್ರಕಾರ ಪಡೆಯುತ್ತಿರುವ ಬಗ್ಗೆ ನಿರ್ವಹಣಾ ವಲಯದ ಹೆಚ್ಚುವರಿ ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ವಿಶೇಷ ಅಧಿಕಾರಿಗಳು ನಿಗಾವಹಿಸಿ ನೀರು ಸರಬರಾಜನ್ನು ಸಮಾನ ಪ್ರಮಾಣದಲ್ಲಿ ಸರಬರಾಜು ಮಾಡಲು ಕ್ರಮಕೈಗೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.
ಟಿ.ಕೆ.ಹಳ್ಳಿ ಜಲರೇಚಕ ಯಂತ್ರಾಗಾರ ಜಲಾವೃತ; ಬೆಂಗಳೂರು ಕುಡಿಯುವ ನೀರು ಪೂರೈಕೆ ಸ್ಥಗಿತ
ಸಹಜವಾಗಿ ನಗರಕ್ಕೆ ಹಂಚಿಕೆಯಾಗಿರುವ ಕಾವೇರಿ ನೀರಲ್ಲಿ ಬೇಸಿಗೆಯಲ್ಲಿ ಮಾಚ್‌ರ್‍ನಿಂದ ಆಗಸ್ಟ್‌ವರೆಗೆ ಒಟ್ಟು 9.6 ಟಿಎಂಸಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ ಸರಬರಾಜು ಮಾಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಹಿಂದೆಯೇ ಜಲಮಂಡಳಿ ಪತ್ರ ಬರೆದಿದೆ.
ಅಭಾವ ಆಗದಂತೆ ಕ್ರಮ
‘ಬೇಸಿಗೆಗೆ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬೇಸಿಗೆ ಎಂಬ ಕಾರಣಕ್ಕೆ ಕಡಿಮೆ ನೀರು ನಗರಕ್ಕೆ ಬರುತ್ತಿಲ್ಲ. ಸಾಮಾನ್ಯದಂತೆ ಪ್ರತಿದಿನ 4450 ಎಂಎಲ್‌ಡಿ ನೀರು ಪಂಪ್ ಆಗಿ ಪೂರೈಕೆ ಅಗುತ್ತಿದೆ. ಒಂದ ವೇಳೆ, ಸಮಸ್ಯೆ ಉಂಟಾದರೆ ಟ್ಯಾಂಕರ್ ನೀರನ್ನು ಪೂರೈಕೆ ಮಾಡಲಾಗುವುದು. ಟೋಲ್‌ಫ್ರೀ ಸಹಾಯವಾಣಿ, ಆನ್‌ಲೈನ್ ದೂರು ದಾಖಲು, 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ದೂರು ನೀಡಲು ಅವಕಾಶವಿದೆ. ಮಳೆಗಾಲದಲ್ಲಿ ನಗರಕ್ಕೆ ಯಾವ ರೀತಿ ನೀರು ಸರಬರಾಜು ಆಗುತ್ತದೆಯೋ ಅದೇ ರೀತಿ ಬೇಸಿಗೆಯಲ್ಲೂ ಯಾವುದೇ ತೊಂದರೆ ಇಲ್ಲದಂತೆ ಪೂರೈಕೆ ಮಾಡಲಾಗುವುದು ಅಂತ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್.ಜಯರಾಂ ತಿಳಿಸಿದ್ದಾರೆ.