ಸಚಿವ ನಾಗೇಶ್‌ಗೆ ಎದುರಾಯ್ತು ಬಿಜೆಪಿಯವರಿಂದಲೇ ಅಸಮಾಧಾನ

By Kannadaprabha NewsFirst Published Oct 16, 2020, 12:49 PM IST
Highlights

ರಾಜ್ಯ ಅಬಕಾರಿ ಸಚಿವ ನಾಗೇಶ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಮುಸುಕಿನ ಗುದ್ದಾಟ ನಡೆಯುತ್ತಿದೆ. 

ಕೋಲಾರ (ಅ.16):  ಅಧಿಕಾರಿಗಳ ವರ್ಗಾವಣೆ ಮತ್ತು ಜಿಲ್ಲೆಯ ಆಡಳಿತ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌ ಮತ್ತು ಸಂಸದ ಎಸ್‌.ಮುನಿಸ್ವಾಮಿ ಅವರ ನಡುವೆ ಮುಸುಕು ಗುದ್ದಾಟ ನಡೆಯುತ್ತಿದ್ದು, ಇದಕ್ಕೆ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಸತ್ಯ ಸಾಕ್ಷಿಯಾಗಿದ್ದಾರೆ.

ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಗಿರಿಜೇಶ್ವರಿ ವಿರುದ್ಧ ಉಸ್ತುವಾರಿ ಸಚಿವರು ಸಿಟ್ಟಾಗಿದ್ದಾರೆ. ಈ ಅಧಿಕಾರಿ ತಮ್ಮ ವಿರುದ್ಧ ರಾಜಕೀಯ ಮಾಡುತ್ತಿದ್ದಾರೆ, ಹೇಳಿದ ಮಾತು ಕೇಳುತ್ತಿಲ್ಲ ಅವರನ್ನು ಜಿಲ್ಲೆಯಿಂದಲೇ ಎತ್ತಂಗಡಿ ಮಾಡಲಾಗುತ್ತದೆ. ಅಧಿಕಾರಿಯನ್ನು ತಕ್ಷಣವೇ ಇಲ್ಲಿಂದ ವರ್ಗಾಯಿಸುವಂತೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮನವಿ ಮಾಡಿಕೊಂಡು ಶಿಫಾರಸು ಪತ್ರವನ್ನೂ ನೀಡಿರುವುದಾಗಿ ತಿಳಿಸಿದ್ದಾರೆ.

ಅಚ್ಚರಿ ಎಂದರೆ ಬಿಇಒ ಗಿರಿಜೇಶ್ವರಿ ಅವರನ್ನು ವರ್ಗಾವಣೆ ಮಾಡದಂತೆ ಸಂಸದ ಎಸ್‌. ಮುನಿಸ್ವಾಮಿ ಪತ್ರ ನೀಡಿದ್ದಾರೆ. ತಮ್ಮ ನೆರವಿಗೆ ಮುನಿಸ್ವಾಮಿ ಇದ್ದಾರೆ ಎಂದು ಗಿರಿಜೇಶ್ವರಿ ಅವರೇ ಹೇಳಿಕೊಂಡಿದ್ದು, ಕೋವಿಡ್‌ ಸಂಕಷ್ಟದ ಸಮಯದಲ್ಲಿ ಆಹಾರ ಕಿಟ್‌ ಕೊಡೋದು ಸೇರಿದಂತೆ ಹಲವಾರು ಸಮಾಜ ಸೇವೆಯನ್ನು ಬಿಇಒ ಗಿರಿಜೇಶ್ವರಿ ಮಾಡಿದ್ದರು. ಅದೇ ಸಮಾಜ ಸೇವೆಯನ್ನು ಮುಳಬಾಗಲು ತಾಲೂಕಿನಾದ್ಯಂತ ಈಗಲೂ ತೆರೆಮರೆಯಲ್ಲಿ ಮುಂದುವರೆಸಿದ್ದಾರೆ. ಇದನ್ನು ಸಹಿಸಿಕೊಳ್ಳದ ಸಚಿವ ನಾಗೇಶ್‌ ಬಿಇಒ ಮಾಡಬೇಕಾಗಿರುವ ಕೆಲಸ ಬೇರೆ ಇದೆ. ಅವರು ಕ್ಷೇತ್ರದ ಶಿಕ್ಷಣ ಅಭಿವೃದ್ಧಿಗೆ ಬೇಕಾದುದ್ದನ್ನು ಮಾಡಲಿ ಅದು ಬಿಟ್ಟು ರಾಜಕಾರಣಿಗಳು ಮಾಡುವುದನ್ನು ಅವರೇಕೆ ಮಾಡಬೇಕು. ಸಮಾಜ ಸೇವೆಯನ್ನು ಮಾಡಲು ನಮ್ಮಂತಹ ರಾಜಕಾರಣಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ತನ್ನ ವಿರುದ್ಧ ರಾಜಕೀಯ ಪ್ರತಿಸ್ಪರ್ಧಿಯಾಗಲು ಅಧಿಕಾರಿಯು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

'ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್‌ನದ್ದೇ ಭಯ’ ..

ಸರ್ಕಾರಿ ನೌಕರಳಾಗಿ ಕರ್ತವ್ಯ ಮಾಡುತ್ತಿರುವ ತನಗೆ ರಾಜಕೀಯ ಕ್ಷೇತ್ರ ಪ್ರವೇಶಿಸುವ ಉದ್ದೇಶವಿಲ್ಲವಾಗಿದೆ. ಆದರೂ ಸಹ ತನ್ನ ಕಾರ್ಯವೈಖರಿಯ ವಿರುದ್ಧ ಅತೃಪ್ತಿಯಿರುವ ಕೆಲವರು ವೃಥಾರೋಪ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿಂದ ತನ್ನನ್ನು ವರ್ಗಾ ಮಾಡಿಸಲು ನಡೆಸುತ್ತಿರುವ ಹುನ್ನಾರದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.

ಅಧಿಕಾರಿಗಳ ವಿಚಾರದಲ್ಲಿ ಹಗ್ಗಾಜಗ್ಗಾಟ:

ಜಿಲ್ಲೆಯಲ್ಲಿ ಅಧಿಕಾರಿಗಳ ವಿಚಾರದಲ್ಲಿ ಸಚಿವ ನಾಗೇಶ್‌ ಮತ್ತು ಸಂಸದ ಮುನಿಸ್ವಾಮಿ ನಡುವೆ ತಿಕ್ಕಾಟ ನಡೆಯುತ್ತಿರುವುದು ಹೊಸದೇನಲ್ಲ, ಹಿಂದೆಯೂ ಇಂತಹ ಘಟನೆಗಳು ಸಾಕಷ್ಟುನಡೆದಿವೆ. ಇತ್ತೀಚೆಗೆ ಕೋಲಾರ ತಾಲೂಕಿನ ಎಸ್‌.ಅಗ್ರಹಾರ ಕೆರೆಗೆ ಬಾಗೀನ ಅರ್ಪಿಸುವ ವಿಚಾರದಲ್ಲಿ ತಹಸೀೕಲ್ದಾರ್‌ ಹಾಗು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಚಿವ ಎಚ್‌.ನಾಗೇಶ್‌ ಅವರಿಗೆ ತಿಳಿಸದೆ ಕಾರ್ಯಕ್ರಮ ಮುಗಿಸಿಬಿಟ್ಟಿದ್ದರು. ಇದರಿಂದ ಸಿಟ್ಟಾಗಿದ್ದ ನಾಗೇಶ್‌ ಈ ಅಧಿಕಾರಿಗಳು ಜಿಲ್ಲೆಯಿಂದಲೇ ಹೊರ ಹಾಕುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ, ತಹಸೀಲ್ದಾರ್‌ ಶೋಭಿತ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನೆರವಿಗೆ ಧಾವಿಸಿದವರು ಇದೇ ಸಂಸದ ಎಸ್‌.ಮುನಿಸ್ವಾಮಿ. ಅವರನ್ನು ಕೋಲಾರದಿಂದ ಹೊರಗೆ ಹೋಗದಂತೆ ಕಾಯ್ದುಕೊಂಡರು.

ಎಸಿ ವಿಚಾರದಲ್ಲೂ ಇದೇ ಸ್ಥಿತಿ ಬಂದಿತ್ತು, ಸಚಿವರಿಗೆ ಅತ್ಯಾಪ್ತರಾಗಿದ್ದ ಉಪ ವಿಭಾಗಾಧಿಕಾರಿಗಳನ್ನು ಇಲ್ಲೇ ಉಳಿಸಿಕೊಳ್ಳಬೇಕೆಂಬ ಆಸೆ ಇರಿಸಿಕೊಂಡಿದ್ದರು. ಆದರೆ ಅವರನ್ನು ಜಿಲ್ಲೆಯಿಂದ ಹೊರ ಕಳಿಸಬೇಕೆಂಬುದು ಬಿಜೆಪಿಯಲ್ಲೇ ಇದ್ದ ಕೆಲವರ ಹುನ್ನಾರವಾಗಿತ್ತು. ಆದರೆ ಅಸಹಾಯಕ ಸ್ಥಿತಿಯಲ್ಲಿದ್ದ ಸಚಿವರೂ ಆಗಲೂ ಸಾಕಷ್ಟುವೇದನೆಯನ್ನು ಅನುಭವಿಸಬೇಕಾಯಿತು.

click me!