
ಬೆಂಗಳೂರು (ಸೆ.25): ಆದಾಯ ತೆರಿಗೆ (I-T) ಇಲಾಖೆಯಿಂದ ಬರೋಬ್ಬರಿ 700 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಾರ್ಪಸ್ ಫಂಡ್ (Corpus Fund) ಅನ್ನು ವಾಪಸ್ ಪಡೆದುಕೊಂಡಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (VTU) ರಾಜ್ಯ ಸರ್ಕಾರ ಹೊಸ ಆಘಾತ ನೀಡಿದೆ. ವಿಟಿಯು ಬಳಿ ಇರುವ ಈ ಬೃಹತ್ ನಿಧಿಯಿಂದ 250 ಕೋಟಿ ರೂಪಾಯಿಗಳನ್ನು ನೀಡುವಂತೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12(ಎ) ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದಿಲ್ಲ ಎಂಬ ಕಾರಣ ನೀಡಿ 2012-13ರಲ್ಲಿ ಆದಾಯ ತೆರಿಗೆ ಇಲಾಖೆಯು 250 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿ, ವಿಟಿಯುವಿನ ಬ್ಯಾಂಕ್ ಖಾತೆಗಳನ್ನು ಜಪ್ತಿ (Freeze) ಮಾಡಿತ್ತು. ಅಂದು ವಿಟಿಯುವಿನ ಖಾತೆಯಲ್ಲಿದ್ದ ಪರೀಕ್ಷಾ ಶುಲ್ಕ, ಸಂಯೋಜಿತ ಕಾಲೇಜುಗಳ ನೋಂದಣಿ ಶುಲ್ಕ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಬಂದಿದ್ದ 450 ಕೋಟಿ ರೂಪಾಯಿ ಕಾರ್ಪಸ್ ಫಂಡ್ ಮತ್ತು ವಿಟಿಯುವಿಗೆ ಸೇರಿದ 250 ಕೋಟಿ ರೂಪಾಯಿ ಸೇರಿ ಒಟ್ಟು 700 ಕೋಟಿಗೂ ಅಧಿಕ ಹಣ ಜಪ್ತಿಯಾಗಿತ್ತು. ದೀರ್ಘ ಕಾನೂನು ಹೋರಾಟದ ನಂತರ ವಿಟಿಯು ಈ ಪೂರ್ತಿ ಹಣವನ್ನು ಇತ್ತೀಚೆಗಷ್ಟೇ ಐಟಿ ಇಲಾಖೆಯಿಂದ ಮರಳಿ ಪಡೆದುಕೊಂಡಿತ್ತು.
ಐಟಿ ಇಲಾಖೆಯಿಂದ ಹಣ ವಾಪಸ್ ಸಿಕ್ಕ ಬೆನ್ನಲ್ಲೇ, ಅದರಲ್ಲಿ 250 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುವಂತೆ ಕೋರಿ ಬಂದಿದೆಯನ್ನಲಾದ ಪತ್ರದ ಕುರಿತು ವಿಟಿಯು ಕಾರ್ಯಾಂಗ ಮಂಡಳಿಯ (Executive Council) ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆಯ ನಿರ್ಧಾರದ ಕುರಿತು ಮಾಹಿತಿ ಹಂಚಿಕೊಂಡ ವಿಶ್ವವಿದ್ಯಾಲಯದ ಅಧಿಕೃತ ಮೂಲವೊಂದು, "ಸರ್ಕಾರದಿಂದ ಬಂದ ಪತ್ರವನ್ನು ಸಭೆಯಲ್ಲಿ ಓದಿ ಹೇಳಲಾಯಿತು. ಆದರೆ ಕಾರ್ಯಾಂಗ ಮಂಡಳಿಯು ಈ ಹಣವನ್ನು ಸರ್ಕಾರಕ್ಕೆ ನೀಡದಿರಲು ಸ್ಪಷ್ಟವಾಗಿ ನಿರ್ಧರಿಸಿದೆ. ಈ ಹಣವು ಸಂಯೋಜಿತ ಕಾಲೇಜುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸೇರಿದ್ದಾಗಿದೆ. ಇದನ್ನು ಅವರ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸೌಲಭ್ಯಗಳಿಗಾಗಿಯೇ ಬಳಸಬೇಕ ಹೊರತು, ಈ ಹಣದ ಮೇಲೆ ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ," ಎಂದು ತಿಳಿಸಿದೆ.
ಸರ್ಕಾರದ ಈ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿರುವ ವಿಟಿಯು ಉಪಕುಲಪತಿ (VC) ಪ್ರೊ. ಎಸ್. ವಿದ್ಯಾಶಂಕರ್, "ಸರ್ಕಾರದಿಂದ ಈವರೆಗೆ ಅಧಿಕೃತವಾಗಿ ನನಗೆ ಯಾವುದೇ ಪತ್ರ ತಲುಪಿಲ್ಲ. ಆದರೆ ವಿಟಿಯುವಿನಿಂದ ಅನುದಾನ ಪಡೆಯಲು ಸಾಧ್ಯವೇ ಎಂಬ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಚರ್ಚೆಯಾಗಿರುವುದು ನಿಜ. ಒಂದು ವೇಳೆ ಸರ್ಕಾರದಿಂದ ಅಧಿಕೃತ ಪತ್ರ ಬಂದಲ್ಲಿ, ಅದನ್ನು ಕಾರ್ಯಾಂಗ ಮಂಡಳಿಯ ಮುಖಾಂತರ ಚರ್ಚಿಸಿ ಮುಂದಿನ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಬಳಿಯಿದ್ದ 1,400 ಕೋಟಿ ರೂಪಾಯಿ ಕಾರ್ಪಸ್ ಫಂಡ್‌ನಿಂದ ಬರೋಬ್ಬರಿ 600 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿತ್ತು. ಇದೀಗ ಅದೇ ಮಾದರಿಯಲ್ಲಿ ವಿಟಿಯುವಿನ 700 ಕೋಟಿ ರೂಪಾಯಿ ನಿಧಿಯ ಮೇಲೆಯೂ ಸರ್ಕಾರ ಕಣ್ಣಿಟ್ಟಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು (UVCE) ಐಐಟಿ (IIT) ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟವು ₹249 ಕೋಟಿ ಮಂಜೂರು ಮಾಡಿದೆ ಎಂದು ತಿಳಿಸಿದರು. 14 ವರ್ಷಗಳ ಕಾನೂನು ಹೋರಾಟದ ನಂತರ ಆದಾಯ ತೆರಿಗೆ ಇಲಾಖೆಯಿಂದ ವಿಟಿಯುವಿಗೆ (VTU) ಮರಳಿ ಬಂದಿರುವ ಕಾರ್ಪಸ್ ಫಂಡ್‌ನ (Corpus Fund) ಒಂದು ಭಾಗವನ್ನು ಈ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಪರಮೇಶ್ವರ್ ಅವರು ನೀಡಿದ ಮಾಹಿತಿಯಂತೆ, ಜಪ್ತಿಯಾಗಿದ್ದ ನಿಧಿಯಿಂದ ವಿಟಿಯುವಿಗೆ ₹700 ಕೋಟಿಗೂ ಅಧಿಕ ಹಣ ವಾಪಸ್ ಸಿಕ್ಕಿದ್ದು, ಅದರಲ್ಲಿ ಒಂದು ಭಾಗವನ್ನು ಯುಡಬ್ಲ್ಯೂಸಿಇ (UVCE) ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಈ ಹಣವನ್ನು ಸಂಸ್ಥೆಯ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಬಲಪಡಿಸಲು ಬಳಸಲಾಗುವುದು. "ಸರ್ಕಾರದಿಂದ ನಮಗೆ ಈ ಕುರಿತು ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ನಮಗೆ ತಿಳಿಯಿತು," ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. "ವಾಪಸ್ ಬಂದಿರುವ ಹಣವನ್ನು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಇಡಲು ಕಾರ್ಯಾಂಗ ಮಂಡಳಿಯು ಈಗಾಗಲೇ ತೀರ್ಮಾನಿಸಿದೆ. ಅದರಿಂದ ಬರುವ ಬಡ್ಡಿಯನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಬಳಸಲಾಗುವುದು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.