ಉಪಚುನಾವಣಾ ಕದನ: ಬಸ್‌ಗಳಿಲ್ಲದೇ ಮತದಾನಕ್ಕೆ ಆಗಮಿಸಲು ಮತದಾರರ ಪರದಾಟ..!

By Kannadaprabha NewsFirst Published Apr 17, 2021, 9:19 AM IST
Highlights

ಇಂದು ಕಲಿಗಳ ಭವಿಷ್ಯದ ಮೇಲೆ ಮತದಾರರ ಮುದ್ರೆ| ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾದ ಮಸ್ಕಿ ಉಪಚುನಾವಣೆ| ಪ್ರತಾಪಗೌಡ ಪಾಟೀಲ್‌, ಬಸನಗೌಡ ತುರ್ವಿಹಾಳ ಸೇರಿ 8 ಅಭ್ಯರ್ಥಿಗಳು ಕಣದಲ್ಲಿ| ಕ್ಷೇತ್ರಕ್ಕೆ ಮರಳಲು ಪರದಾಟ| 

ರಾಮಕೃಷ್ಣ ದಾಸರಿ

ರಾಯಚೂರು(ಏ.17): ಇಡೀ ರಾಜ್ಯದ ಗಮನ ಸೆಳೆದಿರುವ ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದ್ದು, ಕಣದಲ್ಲಿರುವ 8 ಜನ ಕಲಿಗಳ ಭವಿಷ್ಯದ ಮೇಲೆ ಮತದಾರರು ಮುದ್ರೆ ಒತ್ತಲಿದ್ದಾರೆ.

ಸ್ಪರ್ಧೆಯಲ್ಲಿ ಎಂಟು ಜನ ಅಭ್ಯರ್ಥಿಗಳಿದ್ದರೂ ಸಹ ದೇಶದ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರಹಣಾಹಣಿ ನಡೆದಿದ್ದರಿಂದ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಅವರು ನಾಲ್ಕನೇ ಸಲ ಶಾಸಕರಾಗಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆಯೋ ಇಲ್ಲ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ತುರ್ವಿಹಾಳ ಮೊದಲ ಸಲ ಶಾಸಕರಾಗಿ ವಿಧಾನಸೌಧ ಮೆಟ್ಟಿಲು ಹತ್ತುತ್ತಾರೆಯೋ ಎನ್ನುವುದಕ್ಕೆ ಮತದಾರರು ತಮ್ಮ ಅಮೂಲ್ಯವಾದ ಮತದಾನದ ಮೂಲಕ ಮತಯಂತ್ರದಲ್ಲಿ ಭದ್ರವಾಗಿ ಮುದ್ರಿಸಿಡಲಿದ್ದಾರೆ.

ಉತ್ತರ ನೀಡಲು ಸಿದ್ದ:

ಕಳೆದ ತಿಂಗಳಿನಿಂದ ಉಭಯ ಪಕ್ಷಗಳ ವರಿಷ್ಠರು, ಪ್ರಮುಖ ನಾಯಕರು, ಮುಖಂಡರು, ಪ್ರಭಾವಿಗಳು ಇಡೀ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರವನ್ನು ನಡೆಸಿದ್ದರು. ಈ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂದು ಪರಸ್ಪರ ಆರೋಪ-ಪ್ರತ್ಯಾರೋಪಗಳು, ದೂರು-ಪ್ರತಿ ದೂರುಗಳನ್ನು ಸಲ್ಲಿಸಿದರು. ಇದೀಗ ಮತದಾನಕ್ಕೆ ಒಂದೇ ದಿನ ಬಾಕಿ ಉಳಿದ ಕಾರಣಕ್ಕೆ ಮತದಾರರ ಮನೆಗಳಿಗೆ ತೆರಳಿ ಮನಸ್ಸನ್ನು ಗೆಲ್ಲುವಂತಹ ಕೊನೆ ಪ್ರಯತ್ನವನ್ನು ನಡೆಸಿದ್ದಾರೆ. ಕಣದಲ್ಲಿರುವ ಕಲಿಗಳ ಪ್ಲೆಸ್‌-ಮೈನಸ್‌ಗಳನ್ನೆ ಲೆಕ್ಕ ಹಾಕಿಕೊಂಡಿರುವ ಮತದಾರರು ಶನಿವಾರ ಜರುಗಳಿರುವ ಉಪಕದನದ ಪರೀಕ್ಷೆಯಲ್ಲಿ ಉತ್ತರವನ್ನು ನೀಡಲು ಸಿದ್ಧಗೊಂಡಿದ್ದಾರೆ.

ಜಮಖಂಡಿ: ಮುಷ್ಕರದ ಮಧ್ಯೆ ಬಸ್‌ ಚಾಲನೆ, ಕಲ್ಲೇಟಿಗೆ ಚಾಲಕ ಬಲಿ

ಕ್ಷೇತ್ರಕ್ಕೆ ಮರಳಲು ಪರದಾಟ:

ನಾಲ್ಕು ತಾಲೂಕುಗಳ ವ್ಯಾಪ್ತಿಯನ್ನೊಳಗೊಂಡಿರುವ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ನಡೆಯುತ್ತಿರುವ ಉಪಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ದೂರದ ಊರುಗಳ ಮತದಾರರು ಉತ್ಸುಕರಾಗಿದ್ದರೂ ತಮ್ಮ ಊರುಗಳಿಗೆ ಮರಳಲು ಪರದಾಡುತ್ತಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಹಳ್ಳಿಗಳು, ಹತ್ತಾರು ತಾಂಡ-ಗೊಲ್ಲರ ಹಟ್ಟಿಗಳು ಬರುತ್ತವೆ. ಇಲ್ಲಿಯ ಜನರು ದುಡಿಯಲು ದೊಡ್ಡ ಪಟ್ಟಣ, ನಗರಗಳಿಗೆ ಗೂಳೆ ಹೋಗುವುದು ಸಹಜ. ಕಳೆದ ಹಲವು ದಿನಗಳಿಂದ ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರ ಜೊತೆಗೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಭೀತಿಯಿಂದಲೂ ಸಹ ಕೆಲವರು ಊರುಗಳಿಗೆ ಬಂದು ಮತಹಾಕಲು ಹಿಂದೇಟು ಹಾಕುತ್ತಿದ್ದಾರೆ. ದೂರದ ಊರುಗಳಲ್ಲಿರುವ ಜನರನ್ನು ಗುರುತಿಸಿರುವ ಪಕ್ಷಗಳು ಖಾಸಗಿ ವಾಹನಗಳ ಮೂಲಕ ಅವರನ್ನು ಕರೆಸಲು ಕಸರತ್ತು ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಬಹುನಿರೀಕ್ಷೆಯನ್ನು ಹುಟ್ಟಿಸಿರುವ ಮಸ್ಕಿ ಉಪಚುನಾವಣೆಯ ಮತದಾನವು ಬಂದೇ ಬಿಟ್ಟಿದ್ದು, ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಹಾಕಿ ಯಾರ ಭವಿಷ್ಯವನ್ನು ಬದಲಿಸುತ್ತಾರೆಯೋ ಕಾದು ನೋಡಬೇಕಾಗಿದೆ.
 

click me!