ಸಿಂಗ್ ಹೇಳಿದಂತೆ ನಡೆಯುತ್ತಾರಾ? ಕ್ಷೇತ್ರದ ಮತದಾರರ ಪ್ರಶ್ನೆ| ವಿಜಯನಗರ ಹೊಸ ಜಿಲ್ಲೆ ಮಾಡಿಸಿಯೇ ತೀರುತ್ತೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ತೊಡುತ್ತೇನೆ ಎಂದು ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದ ಆನಂದಸಿಂಗ್|
ಕೆ.ಎಂ. ಮಂಜುನಾಥ್
ಬಳ್ಳಾರಿ(ಡಿ.11): ವಿಜಯನಗರ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಆನಂದಸಿಂಗ್ ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಮುಹೂರ್ತ ನಿಗದಿ ಪಡಿಸುವುದೆಂದು? ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕ್ಷೇತ್ರದ ಮತದಾರರು ಇಂತಹದೊಂದು ಪ್ರಶ್ನೆ ಎತ್ತಿದ್ದಾರೆ.
ವಿಜಯನಗರ ಹೊಸ ಜಿಲ್ಲೆ ಮಾಡಿಸಿಯೇ ತೀರುತ್ತೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ತೊಡುತ್ತೇನೆ ಎಂದು ಆನಂದಸಿಂಗ್ ಚುನಾವಣೆಯಲ್ಲಿ ಪ್ರಚಾರ ಕೈಗೊಂಡರು. ಹೀಗಾಗಿ, ಸಿಂಗ್ ವಿರೋಧ ಅಲೆಯ ನಡುವೆಯೂ ಹೊಸ ಜಿಲ್ಲೆಯ ಪ್ರಸ್ತಾಪ ಗೆಲುವಿನ ದಡ ಮುಟ್ಟಲು ಸಹಕಾರಿಯಾಯಿತು. ಆದರೆ, ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲೂ ಹೊಸ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸಲಿಲ್ಲ. ಕ್ಷೇತ್ರಕ್ಕೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಸಿಎಂ ಭರವಸೆ ನೀಡಿದರೇ ವಿನಃ ವಿಜಯನಗರ ಜಿಲ್ಲೆ ಅಸ್ತಿತ್ವದ ಸುಳಿವು ನೀಡಲಿಲ್ಲ. ಇದು ಕ್ಷೇತ್ರದ ಜನರನ್ನು ಇನ್ನಷ್ಟು ಗೊಂದಲಕ್ಕೆ ದೂಡಿದ್ದು ಹೊಸ ಜಿಲ್ಲೆಗೆ ಕಾಲ ಕೂಡಿ ಬರುವುದು ಎಂಬ ಪ್ರಶ್ನೆ ಮೂಡಿದೆ.
ಸಿಂಗ್ ನಡೆಯ ಕಡೆ ಕುತೂಹಲ?:
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರಾಜೀನಾಮೆಯ ಸರಣಿ ಆರಂಭಿಸಿದ್ದೇ ಆನಂದಸಿಂಗ್. ಇದನ್ನು ಖುದ್ದು ಮುಖ್ಯಮಂತ್ರಿ ಸೇರಿದಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಶ್ರೀರಾಮುಲು ಚುನಾವಣೆ ಪ್ರಚಾರದಲ್ಲಿ ಹೇಳಿಕೊಂಡರಲ್ಲದೆ, ಆನಂದಸಿಂಗ್ ರಾಜೀನಾಮೆ ನಡೆಯಿಂದಾಗಿಯೇ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಅವರಿಂದಾಗಿಯೇ ನಾವು ಇಂದು ಸಚಿವ ಸ್ಥಾನಗಳನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಆದರೆ, ಇದೀಗ ಆನಂದಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಉತ್ತಮ ಖಾತೆ ಸಿಕ್ಕರೂ ಅಚ್ಚರಿಯಿಲ್ಲ. ಆದರೆ, ವಿಜಯನಗರ ಜಿಲ್ಲೆ ಸೇರಿದಂತೆ ಪ್ರಚಾರ ವೇಳೆ ನೀಡಿದ್ದ ಅನೇಕ ಭರವಸೆಗಳನ್ನು ಈಡೇರಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಂತಹದೊಂದು ಗೊಂದಲ ಹಾಗೂ ಸಿಂಗ್ ನಡೆಯ ಬಗೆಗಿನ ನಾನಾ ಪ್ರಶ್ನೆಗಳು ಉದ್ಭವಿಸಲು ಕಾರಣ ಸಹ ಇದೆ.
ವಿಜಯನಗರ ಜಿಲ್ಲೆ ಬೇಡಿಕೆ ಸರಕಾರ ಈಡೇರಿಸುವ ಭರವಸೆ ಇದೆ: ಆನಂದ್ ಸಿಂಗ್
ಈ ಹಿಂದಿನ ಚುನಾವಣೆಯಲ್ಲಿ ಗೆದ್ದ ಆನಂದ ಸಿಂಗ್ ಅವರು ನಾನು ಮತ್ತೆ ಚುನಾವಣೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದರು. ಇದು ನನ್ನ ಕೊನೆಯ ಚುನಾವಣೆ ರಾಜಕೀಯ ಎಂದಿದ್ದರು. ಆದರೆ, ರಾಜಕೀಯ ವಿದ್ಯಮಾನಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯನ್ನು ಎದುರಿಸಿದರು. ಇನ್ನು ರಾಜೀನಾಮೆ ನೀಡುವಾಗ ಮತ ನೀಡಿದ ಮತದಾರರ ಬಳಿಯೂ ರಾಜೀನಾಮೆಯ ಪ್ರಸ್ತಾಪ ಮಾಡಲಿಲ್ಲ. ತನ್ನ ಅನುಕೂಲಕ್ಕಾಗಿ ರಾಜೀನಾಮೆ ನೀಡಿದರು ಎಂಬ ದೂರುಗಳು ಕ್ಷೇತ್ರದಲ್ಲಿ ಕಡಿಮೆಯೇನಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಕ್ಷೇತ್ರದಲ್ಲಿ ಚರ್ಚೆಗಳು ಶುರುವಾಗಲಿದ್ದು, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಸಿಂಗ್ ಭರವಸೆಗಳನ್ನು ಈಡೇರಿಸಿಕೊಡು ತ್ತಾರಾ? ಅಥವಾ ಸುಳ್ಳಿನ ಸರಮಾಲೆ ಕಟ್ಟುತ್ತಾರಾ ಎಂಬ ಕೌತುಕ ಎಲ್ಲರಲ್ಲಿದೆ.
ಏತ ನೀರಾವರಿ ಯೋಜನೆ ಕಡೆ ರೈತರ ಒಲವು ವಿಜಯನಗರ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ಅವರಿಗೆ ಹೆಚ್ಚಿನ ಮತಗಳು ಬಂದಿವೆ. ಗ್ರಾಮೀಣ ಭಾಗದಲ್ಲಿ ನನೆಗುದಿಗೆ ಬಿದ್ದಿರುವುದು ಸೇರಿದಂತೆ ಹೊಸ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ರೈತರ ಬೆಳೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರಚಾರ ವೇಳೆ ತಿಳಿಸಿದ್ದರು. ಆಯಾ ಜನರಿಗೆ ತಕ್ಕಂತೆ ಪ್ರಚಾರ ಭಾಷಣ ಮಾಡಿದ ಆನಂದಸಿಂಗ್ ಹಾಗೂ ಬಿಜೆಪಿ ನಾಯಕರು ಇದೀಗ ಆನಂದ ಸಿಂಗ್ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಯೇ? ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ರೈತರ ಹೊಲಗದ್ದೆಗಳಿಗೆ ನೀರೊದಗಿಸಲು ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಮುತುವರ್ಜಿ ವಹಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ‘ವಿಜಯನಗರ ಜಿಲ್ಲೆಗೆ ಮುಹೂರ್ತ ಎಂದು?’ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದಲ್ಲ. ಜನರ ಅಭಿಪ್ರಾಯಗಳನ್ನು ಪಡೆಯಬೇಕು. ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಈ ಹಿಂದೆ ಹೋರಾಟ ನಡೆದಿತ್ತು. ಜನಾಭಿಪ್ರಾಯ ಮೂಲಕ ಬಳ್ಳಾರಿ ಕರ್ನಾಟಕಕ್ಕೆ ಸೇರಿತು. ವಿಜಯನಗರ ಜಿಲ್ಲೆ ಪ್ರತ್ಯೇಕಕ್ಕೆ ಜನರ ಒಪ್ಪಿಗೆ ಬೇಕಲ್ಲವೇ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಅವರು ಹೇಳಿದ್ದಾರೆ.
ಬಳ್ಳಾರಿ ವಿಜಯನಗರ ಜಿಲ್ಲೆ ವಿಚಾರದ ಬಗ್ಗೆ ನಾನು ಮಾತನಾಡಲು ಬರುವುದಿಲ್ಲ. ಈ ಕುರಿತು ನಿರ್ಣಯ, ನಿರ್ಧಾರಗಳನ್ನು ಪಕ್ಷದ ಹಿರಿಯ ಮುಖಂಡರು ಕೈಗೊಳ್ಳುತ್ತಾರೆ ಎಂದು ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಅವರು ತಿಳಿಸಿದ್ದಾರೆ.