ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ
ಹೊಸ ಮತದಾರರು ಮತ್ತು ಮಹಿಳಾ ಮತದಾರರಿಗೆ ಜಾಗೃತಿ ಮೂಡಿಸಿ
ಮತದಾನ ಪ್ರಮಾಣ ಹೆಚ್ಚಾಗುವಂತೆ ಯೋಜನೆ ರೂಪಿಸಿ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.14): 2023ರ ರಾಜ್ಯವಿಧಾನಸಭಾ ಚುನಾವಣೆಗೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಮತದಾನದ ಪ್ರಕ್ರಿಯೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮಹತ್ವ ಈಜ್ಜೆ ಇಟ್ಟಿದೆ. ಇದರ ಭಾಗವಾಗಿ ಚುನಾವಣಾ ಆಯೋಗದ ನಿದೇರ್ಶನದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಇಂದು ಚುನಾವಣಾ ಸಂಬಂಧ ಜಿಲ್ಲೆಯ ತಾಲ್ಲೂಕ್ ಮಟ್ಟದ ಅಧಿಕಾರಿಗಳು ಸಭೆಯನ್ನು ನಡೆಸಿದರು.
ಮತದಾರರ ಜಾಗೃತಿ ಕಾರ್ಯಕ್ರಮ ಸಂಬಂಧ ಸ್ವೀಪ್ ಸಮಿತಿ ಸದಸ್ಯರುಗಳು, ತಹಸೀಲ್ದಾರ್ಗಳು ಹಾಗೂ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ವಿಡಿಯೋ ಸಂವಾದವನ್ನು ನಡೆಸಿದರು.ಸಭೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಲು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆಂಬ್ಯುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆಯ ನರಳಾಟ, ಗುಂಡಿಮಯವಾಗಿರುವ ರಸ್ತೆಯಿಂದ ಕೆಟ್ಟು ನಿಂತು ಪರದಾಟ
ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಂಬಂಧ ಪ್ರಚಾರ ಕಾರ್ಯಕ್ರಮಗಳನ್ನು ವ್ಯವಸ್ಥಿತ ಮತ್ತು ವ್ಯಾಪಕವಾಗಿ ನಡೆಸಬೇಕೆಂದು, ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇಕಡ 78.52ರಷ್ಟು ಮತದಾನವಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 85 ಕ್ಕೂ ಹೆಚ್ಚು ಮತದಾನವಾಗುವಂತೆ ಜಿಲ್ಲಾ ಹಂತದ ಎಲ್ಲಾ ಇಲಾಖಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರಗತಿ ಸಾಧಿಸುವಂತೆ ತಿಳಿಸಿದರು.
ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ: ಜಿಲ್ಲೆಯ ಎಲ್ಲಾ ತಹಸೀಲ್ದಾರರು ಹಾಗೂ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕಾಧಿಕಾರಿಗಳು 2018ರ ವಿಧಾನ ಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಬೇಕು. ಕಡಿಮೆ ಮತದಾನವಾಗಲು ಕಾರಣಗಳನ್ನು ತಿಳಿಯಲು ಮನೆ ಮನೆಗೆ ಭೇಟಿ ನೀಡಿ ಕಡಿಮೆ ಮತದಾನವಾಗಿರುವ ಸಂಬಂಧ ಮಾಹಿತಿಯನ್ನು ಸಂಗ್ರಹಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ (ಬಿ.ಎಲ್.ಒ) ಸಭೆಯಲ್ಲಿ ಖಡಕ್ ವಾರ್ನಿಂಗ್ ನೀಡಿದರು. 18 ರಿಂದ 19 ವರ್ಷ ಪೂರ್ಣಗೊಂಡಿರುವ ಯುವ ಮತದಾರ ನೊಂದಣಿಯನ್ನು ಮಾಡಿಸಲು ಕ್ರಮವಹಿಸಬೇಕು ಎಮದು ತಿಳಿಸಿದರು.
ಶೇ.85ಕ್ಕೂ ಹೆಚ್ಚು ಮತದಾನ ಆಗಬೇಕು: ಮತದಾನ ಪ್ರಮಾಣವನ್ನು ಹೆಚ್ಚಿಸಲು ಸಾರ್ವಜನಿಕರಲ್ಲಿ ಹಾಗೂ ಯುವ ಜನತೆಯಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದ್ದು, ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 85 ಕ್ಕೂ ಹೆಚ್ಚು ಮತದಾನವಾಗಲು ತಮ್ಮ ಇಲಾಖಾವಾರು ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಇದಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿವಿಲ್ ಕಾಮಗಾರಿ, ಬದುಕು ಕಳೆದುಕೊಳ್ಳುತ್ತಿರುವ ವನ್ಯಪ್ರಾಣಿಗಳು
ಅಂಗವಿಕಲರು ತೃತೀಯ ಲಿಂಗಿಗಳು ಚುನಾವಣೆ ಪ್ರಕ್ರಿಯೆಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈಗಿನಿಂದಲೇ ಸಮನ್ವಯ ಮಾಡಿಕೊಂಡು ಅವರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದಂತೆ ಕ್ರಮವಹಿಸುವಂತೆ ಹೇಳಿದರು.ಸಭೆಯಲ್ಲಿ ಜಿಲ್ಲಾಪಂಚಾಯಿತಿ ಸಿಒಓ ಪ್ರಭು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.