ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿವಿಲ್ ಕಾಮಗಾರಿ, ಬದುಕು ಕಳೆದುಕೊಳ್ಳುತ್ತಿರುವ ವನ್ಯಪ್ರಾಣಿಗಳು

By Suvarna News  |  First Published Feb 14, 2023, 7:41 PM IST

ರಾಜ್ಯದ ಹೆಸರಾಂತ ಹಾಗೂ ವನ್ಯಪ್ರಾಣಿಗಳ  ವಿಶೇಷ ಅಭಯಾರಣ್ಯವಾದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಈಗ ಅನಿಯಂತ್ರಿತ ಸಿವಿಲ್ ಕಾಮಗಾರಿಗಳಿಂದ ತನ್ನ ಪ್ರಶಾಂತತೆಯನ್ನು ಕಳೆದುಕೊಳ್ಳುವುದರೊಂದಿಗೆ ವನ್ಯಪ್ರಾಣಿಗಳ ಬದುಕಿಗೂ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಫೆ.14): ರಾಜ್ಯದ ಹೆಸರಾಂತ ಹಾಗೂ ವನ್ಯಪ್ರಾಣಿಗಳ  ವಿಶೇಷ ಅಭಯಾರಣ್ಯವಾದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಈಗ ಅನಿಯಂತ್ರಿತ ಸಿವಿಲ್ ಕಾಮಗಾರಿಗಳಿಂದ ತನ್ನ ಪ್ರಶಾಂತತೆಯನ್ನು ಕಳೆದುಕೊಳ್ಳುವುದರೊಂದಿಗೆ ವನ್ಯಪ್ರಾಣಿಗಳ ಬದುಕಿಗೂ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ಪರಿಸರ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಭದ್ರಾ ಅಭಯಾರಣ್ಯ ರೂಪುಗೊಳ್ಳಲು ಆರಂಭವಾಗಿದ್ದು 1916ರಲ್ಲಿ. ಆಂಗ್ಲರಕಾಲದಲ್ಲೇ ವನ್ಯಪ್ರಾಣಿಗಳ ಬಾಹುಳ್ಯದಮೆರುಗನ್ನು ಹೊಂದಿದ್ದು, ರಕ್ಷಿತಾರಣ್ಯವೆಂದು ಘೋಷಿತವಾಗಿತ್ತು. ಪಶ್ಚಿಮಘಟ್ಟದ ಬೆಟ್ಟಸಾಲುಗಳ ಮಧ್ಯದಲ್ಲಿ ಉತ್ತಮ ನೀರಿನ ಹರಿವನ್ನು ಹೊಂದಿರುವ ಈ ಪ್ರದೇಶ ವಾಯುಗುಣದಿಂದಲೂ ನಿಯಂತ್ರಿತವಾಗಿ ಸಸ್ಯಗಳ ಪರಾಕಾಷ್ಠ ಸ್ಥಿತಿಗೂ ಕಾರಣವಾಗಿ 1952 ರಲ್ಲಿ ಜಾಗರಕಣಿವೆ ವನ್ಯಪ್ರಾಣಿಗಳ ಮೀಸಲು ತಾಣವಾಗಿದೆ. 1974  ರಲ್ಲಿ ಕೇಂದ್ರ ಸರ್ಕಾರ ಒಟ್ಟು 497 ಚದರ ಕಿ.ಮೀ. ಪ್ರದೇಶವನ್ನು ಭದ್ರಾಅಭಯಾರಣ್ಯ ವೆಂದು ಘೋಷಿಸಿತು. ಹುಲಿಗಳಿಗೂ ಸೂಕ್ತ ಆವಾಸ ಸ್ಥಾನವಾಗಿದ್ದ ಹಿನ್ನಲೆಯಲ್ಲಿ ಈ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. 

Latest Videos

undefined

ಇದರ ಪ್ರಾಮುಖ್ಯತೆಯನ್ನರಿತು ಹಾಗೂ ಅಭಯಾರಣ್ಯದೊಳಗಿದ್ದ 13ಹಳ್ಳಿಗಳ ನಿವಾಸಿಗಳು ಸ್ವಯಂ ಇಚ್ಛೆಯಿಂದ ಹೊರಬಂದದ್ದರಿಂದ ದೇಶದಲ್ಲೇ ಒಂದು ಮಾದರಿ ಸ್ಥಳಾಂತರ ಯೋಜನೆಗೂ ಒಳಗಾಯಿತು. ಈ ವಿಶೇಷತೆಗಳನ್ನು ಹೊಂದಿರುವ ಭದ್ರಾ ಅಭಯಾರಣ್ಯದಲ್ಲಿ ಈಗ ಯಂತ್ರಗಳ ಸದ್ದು ಆಗಾಗ ಮೊಳಗುತ್ತಿದ್ದರೆ, ಕಟ್ಟಡಗಳು ತಲೆ ಎತ್ತುತ್ತಿವೆ. ಅಭಯಾರಣ್ಯದೊಳಗೆ ಯಾವುದೇ ರೀತಿಯ ಪ್ರವಾಸಿ ಸೌಲಭ್ಯದ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ನಿರ್ಮಿಸದೆ ಅಭಯಾರಣ್ಯದ ಹೊರಭಾಗದಲ್ಲಿ ಮಾತ್ರ ನೀಡಲು ನ್ಯಾಯಾಲಯ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶಿಸಿ ಮಾರ್ಗದರ್ಶಿ ಸೂತ್ರ ನೀಡಿದ್ದರೂ ಅದನ್ನು ಕಡೆಗಣಿಸಲಾಗಿದೆ.

ಗರ್ಭಕೋಶದ ಸೋಂಕು: ಶಸ್ತ್ರ ಚಿಕಿತ್ಸೆ ಇಲ್ಲದೇ ಔಷಧೋಪಚಾರಕ್ಕೆ ಗುಣಮುಖಳಾದ ಸೀತೆ!

ಮ್ಯೂಸಿಯಂ ಮಾಡುವ ಉದ್ದೇಶದಿಂದ ಕಟ್ಟಡ ನಿರ್ಮಾಣ:
ಅಭಯಾರಣ್ಯದೊಳಗೆ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಮುತ್ತೋಡಿ ವಲಯದ ವ್ಯಾಪ್ತಿಯಲ್ಲಿ ಮ್ಯೂಸಿಯಂ ಮಾಡುವ ಉದ್ದೇಶದಿಂದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಅಭಯಾರಣ್ಯದ ಅಂಚಿನಲ್ಲಿ ನಿರ್ಮಿಸದೆ ಒಳಗೆ ಅವುಗಳು ತಲೆಯೆತ್ತುತ್ತಿವೆ. ಈ ಅಭಯಾರಣ್ಯ ಕೇವಲ ಹುಲಿ ಸಂರಕ್ಷಿತ ಪ್ರದೇಶವಾಗಿರದೆ ಸಂದಿಗ್ಧ ಹುಲಿ ಸಂರಕ್ಷಿತ (ಕೋರ್ಕ್ರಿಟಿಕಲ್ಟೈಗರ್ ಹ್ಯಾಬಿಟೇಟ್) ಪ್ರದೇಶವೆಂದು ಪರಿಗಣಿಸಲಾಗಿದೆ. ಅಭಯಾರಣ್ಯದೊಳಗೆ ಮಳೆ ನೀರು ಸರಾಗವಾಗಿ ಸಾಗಲು ನಿರ್ಮಿಸಿರುವ ಚರಂಡಿಗಳಂತೂ ಸಣ್ಣಪ್ರಾಣಿಗಳು ದಾಟಲು ಸಾಧ್ಯವಾಗದಂತಿವೆ.

ಹುಲಿ ರಕ್ಷಿತಾರಣ್ಯದಲ್ಲಿ ಝೂ, ಸಫಾರಿ ನಿಷೇಧಕ್ಕೆ ಶಿಫಾರಸು: ರಾಜ್ಯದ ಬಂಡೀಪುರ, ನಾಗರಹೊಳೆ ಸಫಾರಿಗೆ ಕುತ್ತು..?

ಬೇಟೆ ನಿಗ್ರಹ ಶಿಬಿರಗಳಿಗೆ ಸಿಬ್ಬಂದಿಗಳ ಕೊರತೆ: 
ಬೇಟೆ ನಿಗ್ರಹ ಶಿಬಿರಗಳು ನೆಪ ಮಾತ್ರಕ್ಕಿದ್ದು, ಸಿಬ್ಬಂದಿಗಳ ಕೊರತೆಯಿಂದಕೂಡಿದೆ. ಇರುವ ಸಿಬ್ಬಂದಿಗಳಿಗೂ ಪ್ರತೀ ತಿಂಗಳ ಸಂಬಳ ಸಿಗದೆಪರದಾಡುವಂತಾಗಿದೆ. ಅರಣ್ಯ ರಕ್ಷಕರುಗಳ ಹುದ್ದೆಗಳನ್ನು ಈ ಪ್ರಮುಖ ಅಭಯಾರಣ್ಯ ರಕ್ಷಣೆಗೆ ಸೃಷ್ಟಿಸಿದ್ದರೂ ನೇಮಕವಾಗದೆ ಖಾಲಿ ಬಿದ್ದಿವೆ.ನಿಯಂತ್ರಣವಿಲ್ಲದ ಪ್ರವಾಸೋದ್ಯಮ ಪ್ರಾಣಿಗಳ ನಿರಾತಂಕ ಬದುಕಿಗೆ ತೊಡಕಾಗುವ ಲಕ್ಷಣಗಳು ಕಾಣುತ್ತಿದ್ದು, ಈ ಪ್ರದೇಶದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕಾಗಿದೆ. ಈ ಎಲ್ಲಾ ಲೋಪ ಹಾಗೂ ಕೊರತೆಗಳ ನಿವಾರಣೆಗೆ ಅಭಯಾರಣ್ಯದ ಅಧಿಕಾರಿಗಳು ತಕ್ಷಣ ಗಮನ ಹರಿಸಿ ನಿವಾರಿಸಬೇಕೆಂದು ಫರಿಸರವಾದಿಗಳಾದ ಡಿ.ವಿ.ಗಿರೀಶ್ ಸ.ಗಿರಿಜಾಶಂಕರ, ಶ್ರೀದೇವ್ ಹುಲಿಕೆರೆ  ಒತ್ತಾಯಿಸಿದ್ದಾರೆ.

click me!