ಬಸವಕಲ್ಯಾಣ ಬೈಎಲೆಕ್ಷನ್‌: ಬಂಡಾಯದ ಭೂತ; ಮೂರು ಪಕ್ಷಗಳಲ್ಲಿ ಮತವಿಭಜನೆ ಆತಂಕ..!

Kannadaprabha News   | Asianet News
Published : Apr 01, 2021, 12:43 PM IST
ಬಸವಕಲ್ಯಾಣ ಬೈಎಲೆಕ್ಷನ್‌: ಬಂಡಾಯದ ಭೂತ; ಮೂರು ಪಕ್ಷಗಳಲ್ಲಿ ಮತವಿಭಜನೆ ಆತಂಕ..!

ಸಾರಾಂಶ

ಆಡಳಿತಾರೂಢರ ಬೆವರಿಳಿಸಲಿದೆಯೇ ಬಂಡಾಯ| ಸೆಡ್ಡು ಹೊಡೆದಿರುವ ಮಲ್ಲಿಕಾರ್ಜುನ್‌ ಖೂಬಾ ಕಮಲಕ್ಕೆ ಬಿಸಿ ತುಪ್ಪವಾಗ್ತಾರಾ.?| ಕೈ ಅಭ್ಯರ್ಥಿಗೆ ಪರಂಪರಾಗತ ಮತಗಳ ವಿಭಜನೆಯ ಆತಂಕ| ಜೆಡಿಎಸ್‌, ಎನ್‌ಸಿಪಿ ಮತ ಗಳಿಕೆ ಲೆಕ್ಕಾಚಾರ| 

ಅಪ್ಪಾರಾವ್‌ ಸೌದಿ

ಬೀದರ್‌(ಏ.01): ಜಿಲ್ಲೆಯಲ್ಲಿ ಬಸವಕಲ್ಯಾಣ ಉಪಚುನಾವಣೆಯ ಅಖಾಡ ಬಿರುಸುಗೊಂಡಿದ್ದು, ಪ್ರಮುಖ ಪಕ್ಷಗಳಾದ ಆಡಳಿತಾರೂಡ ಬಿಜೆಪಿ, ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಆಂತರಿಕ ಮುನಿಸು, ಬಂಡಾಯದ ಭೂತ ಕಾಡಲಾರಂಭಿಸಿದೆ. ಟಿಕೆಟ್‌ ಹಂಚಿಕೆಯ ಅಸಮಾಧಾನ ಮತ ವಿಭಜನೆಯ ಮೂಲಕ ಸೋಲು ಗೆಲುವಿನ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಮುಂದಿಟ್ಟಿವೆ.

ನಾರಾಯಣರಾವ್‌ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಇದೇ ಏಪ್ರಿಲ್‌ 17ರಂದು ಮತದಾನ ನಡೆಯಲಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೆಯ ಅಖಾಡಾದಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದವರ ಸಂಖ್ಯೆ 14.

ನುಂಗಲಾರದ ತುಪ್ಪವಾಗಿದೆ:

ಬಸವಕಲ್ಯಾಣ ಬಸವಾದಿ ಶರಣರ ಕಾರ್ಯಕ್ಷೇತ್ರವಾಗಿ ವಿಶ್ವದೆಲ್ಲೆಡೆ ಖ್ಯಾತಿಗಳಿಸಿದ್ದರೂ ಇಲ್ಲಿನ ಚುನಾವಣೆಗಳಲ್ಲಿ ಜಾತಿ ಮತ ಗಳಿಕೆ, ವಿಭಜನೆಯ ಮಾತುಗಳು ಮತಗಳ ಮೇಲೆ ಪ್ರಭಾವ ಬೀರುವಂಥದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ಪ್ರಬಲವಾಗಿರುವ ಲಿಂಗಾಯತ, ಮುಸ್ಲಿಂ, ಪರಿಶಿಷ್ಟಜಾತಿ, ಪಂಗಡ, ಮರಾಠಾ, ರೆಡ್ಡಿ, ಕೋಳಿ ಸೇರಿದಂತೆ ಹಿಂದುಗಳಿದ ವರ್ಗಗಳ ಮತ್ತಿತರ ಸಮಾಜಗಳ ಮತದಾರರು ಹೇರಳವಾಗಿದ್ದಾರೆ. ಈಗಾಗಲೇ ಜಾತಿ ಸಮುದಾಯ ಆಧಾರಿತ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ವಿವಿಧ ರಾಜಕೀಯ ಪಕ್ಷಗಳು ನಡೆಸಿದರೆ, ಆಯಾ ಸಮುದಾಯ ಪ್ರಮುಖ ಟಿಕೆಟ್‌ ವಂಚಿತ ಮುಖಂಡರು ಸ್ವತಂತ್ರ ಅಭ್ಯರ್ಥಿಗಳಾಗಿಯೋ ಅಥವಾ ಬೇರೊಂದು ಪಕ್ಷದಿಂದಲೋ ಸ್ಪರ್ಧೆಗಿಳಿದಿರೋದು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುಪ್ಪವಾಗಿದೆ.

'ಜನತೆಗೆ ಅಪಮಾನ ಮಾಡಿದ ಬಿಜೆಪಿಗೆ ಕಾರ್ಯಕರ್ತರೇ ಸಿಗ್ತಿಲ್ಲ'

ಬಿಜೆಪಿಗೆ ಮತ ವಿಭಜನೆ ಕಂಟಕ:

ಸದ್ಯದ ಪರಿಸ್ಥಿತಿಯಲ್ಲಿ ಮತ ವಿಭಜನೆಯ ದುಸ್ವಪ್ನ ಹೆಚ್ಚಾಗಿ ಕಾಡುವುದು ಆಡಳಿತಾರೂಡ ಬಿಜೆಪಿಗೆ. ಆಕಾಂಕ್ಷಿಗಳಾಗಿದ್ದ 17 ಸ್ಥಳೀಯ ಮುಖಂಡರಿಗೆ ಟಿಕೆಟ್‌ ಸಿಗದೇ ಅಸಮಧಾನಗೊಂಡಿದ್ದಾರೆ. ಮೊದಲೇ ಎಚ್ಚರಿಕೆ ನೀಡಿದ್ದ ಇವರ ವಾದವನ್ನು ಲೆಕ್ಕಿಸದೇ ಶರಣು ಸಲಗರಗೆ ಟಿಕೆಟ್‌ ನೀಡಿದ್ದು, ಎಷ್ಟರ ಮಟ್ಟಿದೆ ಟಿಕೆಟ್‌ ವಂಚಿತರು ಮತಗಳಿಕೆಯಲ್ಲಿ ಶ್ರಮ ಹಾಕುತ್ತಾರೆ ಎಂಬ ಅನುಮಾನದ ಜೊತೆಗೆ ಶರಣು ವಿರುದ್ಧದ ಚಟುವಟಿಕೆಗಳ ಆತಂಕವೂ ಇದೆ.

ಇದರೊಟ್ಟಿಗೆ ಸ್ಥಳೀಯರಿಗೆ ಟಿಕೆಟ್‌ ನೀಡದೆ ಕಲ್ಯಾಣವನ್ನು ಅಪಮಾನಿಸಲಾಗಿದೆ. ಪಕ್ಷಕ್ಕಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದ ನನಗೇ ವೈಯಕ್ತಿಕವಾಗಿ ನೋಯಿಸಲಾಗಿದೆ. ಟಿಕೆಟ್‌ ಮಾರಿಕೊಳ್ಳಲಾಗಿದೆ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಿ ಬಸವಕಲ್ಯಾಣ ಸ್ವಾಭಿಮಾನ ಬಳಗವನ್ನು ಸೇರಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಧುಮುಕಿರುವ ಮಾಜಿ ಶಾಸಕ ಮಲ್ಲಿಕಾರ್ಜುನ್‌ ಖೂಬಾ ಅಖಾಡದಲ್ಲಿ ಗಟ್ಟಿಯಾಗಿ ನಿಂತಲ್ಲಿ ಬಿಜೆಪಿಗೆ ದುಸ್ವಪ್ನವೇ ಸರಿ.

ಮರಾಠಾ ಮತಗಳ ಬ್ಯಾಂಕ್‌:

ಇದರೊಟ್ಟಿಗೆ ಜೆಡಿಎಸ್‌ನಿಂದ ಬಂಡಾಯವೆದ್ದು ಎನ್‌ಸಿಪಿಯಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಎಂಜಿ ಮೂಳೆಗೆ ಇರೋದು ಮರಾಠಾ ಮತಗಳ ಬ್ಯಾಂಕ್‌. ಮರಾಠಾ ಸಮುದಾಯಕ್ಕೆ 2ಎ ಸೇರ್ಪಡೆ, ಜಾರಿಯಾಗದ ನಿಗಮ, ಶಿವಾಜಿ ಪಾರ್ಕ್ ಮತ್ತಿತರ ಅಂಶಗಳನ್ನು ಮುಂದಿಡಲಿರುವ ಎನ್‌ಸಿಪಿಯು ಬಿಜೆಪಿಗೆ ಭಾರಿ ಪೆಟ್ಟು ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್‌ಗೂ ಆತಂಕ ಕಲಹ:

ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ಗೂ ಆಂತರಿಕ ಕಲಹ, ಟಿಕೆಟ್‌ ವಂಚಿತರ ಆಕ್ರೋಶ ಎದುರಿಸಬೇಕಾಗಬಹುದು. ಅಷ್ಟೇ ಅಲ್ಲ ಅಭ್ಯರ್ಥಿಯೊಂದಿಗೆ ಸ್ಥಳೀಯ ಹಿರಿಯ ನಾಯಕರ ಓಡಾಟ, ಪಕ್ಷದ ಮುಖಂಡರ ಒಡನಾಟ ಸಿಗಲೇಬೇಕು, ಜೆಡಿಎಸ್‌ ಅಭ್ಯರ್ಥಿಯಾಗಿರುವ ಸೈಯದ್‌ ಖಾದ್ರಿ ಹಾಗೂ ಎಂಐಎಂ ಪಕ್ಷದ ಬಾಬಾ ಚೌಧರಿ ಅವರು ಕಾಂಗ್ರೆಸ್‌ನ ಪರಂಪರಾಗತ ಮತಗಳನ್ನು ಕಸಿಯೋ ಲೆಕ್ಕಾಚಾರ ಕೈ ನಾಯಕರ ನಿದ್ದೆಗೆಡಿಸಿದರೂ ಅಚ್ಚರಿಯಿಲ್ಲ.
 

PREV
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!