12 ಚಿನ್ನದ ಪದಕ ಮುಡಿಗೇರಿಸಿಕೊಂಡ ಕ್ಯಾಬ್ ಡ್ರೈವರ್ ಮಗ; ಬದುಕುವುದೇ ಇಲ್ಲವೆಂದುಕೊಂಡಿದ್ದ ಮಗನ ಸಾಧನೆ!

Sathish Kumar KH   | Kannada Prabha
Published : Sep 27, 2026, 02:31 PM IST
VTU Gold Medal Student Vishwanath

ಸಾರಾಂಶ

ಬೆಳಗಾವಿಯ ವಿಟಿಯು 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವೇಳೆ ಕ್ಯಾಬ್ ಚಾಲಕನ ಮಗನೊಬ್ಬ ಬರೋಬ್ಬರಿ 12 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಇಡೀ ರಾಜ್ಯದ ಗಮನ ಸೆಳೆದಿದ್ದಾನೆ.

ಬೆಳಗಾವಿ (ಸೆ.27): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಜ್ಞಾನ ಸಂಗಮ ಕ್ಯಾಂಪಸ್‌ನಲ್ಲಿ ವಿಟಿಯು 26ನೇ ವಾರ್ಷಿಕ ಘಟಿಕೋತ್ಸವವು ಅತ್ಯಂತ ಸಂಭ್ರಮದಿಂದ ಜರುಗಿತು. ಈ ಬಾರಿಯ ಘಟಿಕೋತ್ಸವದಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳು ಪದವಿ ಪಡೆದಿದ್ದು, ವಿಶೇಷವಾಗಿ ಕ್ಯಾಬ್ ಚಾಲಕನೊಬ್ಬನ ಮಗ ಸಾಧನೆಯ ಶಿಖರಕ್ಕೇರಿ ಬರೋಬ್ಬರಿ 12 ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ಘಟಿಕೋತ್ಸವದ ವಿವರಗಳು:

ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 74,763 ಪದವಿ ವಿದ್ಯಾರ್ಥಿಗಳು ಹಾಗೂ 329 ಪಿಎಚ್‌ಡಿ (Ph.D) ವಿದ್ಯಾರ್ಥಿಗಳು ಪದವಿ ಪಡೆದರು. ಒಟ್ಟಾರೆ 45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕಗಳನ್ನು (38 ವಿಟಿಯು ಗೋಲ್ಡ್‌ ಮೆಡಲ್‌ ಹಾಗೂ 56 ದತ್ತಿ ನಿಧಿ ಚಿನ್ನದ ಪದಕ/ನಗದು ಬಹುಮಾನ) ನೀಡಿ ಗೌರವಿಸಲಾಯಿತು. ಇದರಲ್ಲಿ 38 ವಿದ್ಯಾರ್ಥಿಗಳು ವಿಟಿಯು ಚಿನ್ನದ ಪದಕ, 49 ವಿದ್ಯಾರ್ಥಿಗಳು ದತ್ತಿ ಚಿನ್ನದ ಪದಕ ಹಾಗೂ 7 ವಿದ್ಯಾರ್ಥಿಗಳು ದತ್ತಿ ನಿಧಿ ಚಿನ್ನದ ಪದಕ ಪಡೆದವರಲ್ಲಿ ಸೇರಿದ್ದಾರೆ.

ಮೂವರಿಗೆ ಗೌರವ ಡಾಕ್ಟರೇಟ್:

ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿರುವ ಮೂ ಸಾಧಕರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಯಿತು. ಸಿಎಂಆರ್‌ ಜ್ಞಾನಧಾರ ಟ್ರಸ್ಟ್‌ ಅಧ್ಯಕ್ಷರಾದ ಡಾ. ಸಬಿತಾ ರಾಮಮೂರ್ತಿ, ಆರ್‌.ವಿ. ಶಿಕ್ಷಣ ಸಮಿತಿ ಟ್ರಸ್ಟ್‌ ಅಧ್ಯಕ್ಷರಾದ ಡಾ. ಎಂ.ಪಿ. ಶ್ಯಾಮ್‌ ಹಾಗೂ ಎಐಸಿಟಿಇ (AICTE) ಮಾಜಿ ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಕ್ಯಾಬ್‌ ಚಾಲಕನ ಪುತ್ರನಿಗೆ 12 ಚಿನ್ನದ ಪದಕಗಳ ಗರಿ:

ಈ ಬಾರಿಯ ಘಟಿಕೋತ್ಸವದಲ್ಲಿ ದಾವಣಗೆರೆಯ ಜೈನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಎಚ್.ಎಂ. ವಿಶ್ವನಾಥ್ ಎಂಬ ಯುವಕ ಬರೋಬ್ಬರಿ 12 ಚಿನ್ನದ ಪದಕಗಳನ್ನು ಪಡೆದು ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ವಿಶ್ವನಾಥ್ ಅವರ ತಂದೆ ಕ್ಯಾಬ್ ಚಾಲಕರಾಗಿದ್ದಾರೆ.

ತಮ್ಮ ಸಾಧನೆ ಕುರಿತು ಮಾತನಾಡಿದ ವಿಶ್ವನಾಥ್, 'ಮೊದಲ ಸೆಮಿಸ್ಟರ್‌ನಲ್ಲೇ ಟಾಪ್ 10 ರ್‍ಯಾಂಕ್ ಬರುವ ನಿರೀಕ್ಷೆ ಇತ್ತು, ಆದರೆ ನಂಬರ್ 1 ಸ್ಥಾನ ಸಿಕ್ಕಿದ್ದು ಅನಿರೀಕ್ಷಿತ. ಇದರ ಹಿಂದೆ ನನ್ನ ತಂದೆ-ತಾಯಿ, ಸಂಬಂಧಿಕರು, ಗ್ರಾಮಸ್ಥರು ಹಾಗೂ ಪ್ರಾಧ್ಯಾಪಕರ ಶ್ರಮವಿದೆ. ನಿತ್ಯ ಮನೆಯಲ್ಲಿ ಹಾಲು ಕರೆಯುವುದು, ಕೃಷಿ ಕೆಲಸಗಳಲ್ಲಿ ಅಪ್ಪ-ಅವ್ವನಿಗೆ ನೆರವಾಗುತ್ತಿದ್ದೆ. ರಜೆ ಇದ್ದಾಗ ಗೂಡ್ಸ್ ಗಾಡಿ ಕೂಡ ಓಡಿಸಿದ್ದೇನೆ' ಎಂದು ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿಕೊಂಡರು. ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ (ಮಾಸ್ಟರ್ಸ್) ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

ಬದುಕುಳಿಯುದಿಲ್ಲ ಎಂದುಕೊಂಡಿದ್ದ ಪೋಷಕರು

ದಾವಣಗೆರೆ ಸಮೀಪದ ಬಸಾಪುರ ಗ್ರಾಮದ ಮಂಜುನಾಥ ಹಾಗೂ ನಾಗಮ್ಮ ಅವರ ಪುತ್ರ ವಿಶ್ವನಾಥ್ ಬಾಲ್ಯದಿಂದಲೂ ಪ್ರತಿಭಾವಂತನಾಗಿದ್ದಾನೆ. ಆದರೆ, ಪಿಯು ಮುಗಿದ ಮೇಲೆ ಬಿಎಸ್‌ಸಿ ಪದವಿ ತರಗತಿಗೆ ಸೇರಿದ್ದರು. ಇದಾಗಿ ಒಂದು ವರ್ಷದ ಬಳಿಕ ಮಾರಕ ಡೆಂಗಿ ಜ್ವರ ಬಂದಿತು. ಆಗ ವಿಶ್ವನಾಥನ ಬ್ಲಡ್ ಪ್ಲೇಟ್‌ಲೆಟ್‌ಗಳ ಸಂಖ್ಯೆ 9ಸಾವಿರಕ್ಕೆ ಕುಸಿದಿತ್ತು. ನಿಮ್ಮ ಮಗ ಬದುಕುಳಿಯುವುದು ಕಷ್ಟಸಾಧ್ಯ ಎಂದು ವೈದ್ಯರು ಕೈಚೆಲ್ಲಿದ್ದರು. ಆದರೆ, ಗಟ್ಟಿ ಮನೋಸ್ಥೆರ್ಯ ಹೊಂದಿದ್ದ ಯುವಕ ವಿಶ್ವನಾಥ್ ವೈದ್ಯಪಚಾರ ತಪ್ಪದೇ ಪಾಲಿಸಿ ಬದುಕಿಬಂದರು.

PREV
Read more Articles on
click me!

Recommended Stories

ಬೆಂಗಳೂರಿನ ಬಗ್ಗೆ 10 ವರ್ಷಗಳ ಅನುಭವ ಹಂಚಿಕೊಂಡ ಮಹಿಳೆ; ಟ್ರಾಫಿಕ್, ಆಹಾರ, ಪಾರ್ಟಿ, ರಾತ್ರಿಯ ಓಡಾಟದ ಬಗ್ಗೆ ಏನಂದ್ರು?
Chamarajanagar: ಕರ್ನಾಟಕಕ್ಕೆ ಆಗಮಿಸುತ್ತಿದ್ದ ತಮಿಳುನಾಡಿನ ಹಸುಗಳಿಗೆ ನಿರ್ಬಂಧ, ಬರಪರಿಸ್ಥಿತಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ!