* ಅಯೋಧ್ಯೆ ರಾಮ ಮಂದಿರ ಗರ್ಭಗುಡಿ ನಿರ್ಮಾಣ ಶಿಲಾನ್ಯಾಸಕ್ಕೆ ಪೇಜಾವರ ಶ್ರೀ
* ವಿಶ್ವೇಶತೀರ್ಥರ ಕನಸು
* ಪೇಜಾವರ ಶ್ರೀಗಳಿಂದ ಕೃಷ್ಣಪ್ರಸಾದ ಅರ್ಪಣೆ
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಜೂ.02): ಭರತಖಂಡದಲ್ಲಿ ಮೋಕ್ಷದಾಯಕ ಎಂದು ಕರೆಯುವ ಸಪ್ತಕ್ಷೇತ್ರಗಳಲ್ಲಿ ಅಯೋಧ್ಯೆ ಮೊದಲನೇ ಸ್ಥಾನದಲ್ಲಿ ಬರುತ್ತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ಈಗ ನನಸಾಗಿದೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಮಹಾಭಾಗ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಮುಂದಿನ ನಿರ್ಮಾಣಕ್ಕಾಗಿ ಪ್ರಧಾನ ಗರ್ಭಗುಡಿಯ ಶಿಲಾನ್ಯಾಸ ನಡೆದಿದೆ. ಮುಂದಿನ ನಿರ್ಮಾಣ ಕಾರ್ಯ ಸುಸೂತ್ರವಾಗಿ ನೆರವೇರಲಿ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟ್‌ಗಳಲ್ಲಿ ಒಬ್ಬರಾಗಿರುವ ಪೇಜಾವರ ಶ್ರೀಗಳು ಆಶಿಸಿದ್ದಾರೆ. ಈ ಅವಕಾಶ ನಮ್ಮ ಬದುಕಿನಲ್ಲಿ ಶ್ರೀ ರಾಮ ಹಾಗೂ ಶ್ರೀ ಕೃಷ್ಣ ದೇವರ ಕೃಪೆಯಿಂದಲೇ ಲಭ್ಯವಾಗಿದೆ ಅಂತ ಭಾವುಕರಾಗಿ ನುಡಿದಿದ್ದಾರೆ.
Udupi: ಅಯೋಧ್ಯಾ ರಾಮಮಂದಿರ-2024 ಜನವರಿಯಿಂದ ಪ್ರತಿಷ್ಠಾ ಕಾರ್ಯ: ಪೇಜಾವರ ಶ್ರೀ
ನಿಶ್ಚಿತ ದಿನದಂದು ರಾಮಮಂದಿರ ನಿರ್ಮಾಣ ಪರಿಪೂರ್ಣವಾಗಲಿ ಎಂದು ಈ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇವೆ. ಮಂದಿರ ನಿರ್ಮಾಣ ಕಾರ್ಯ ಯೋಜಿಸಿದ ರೀತಿಯಲ್ಲಿ ನಡೆದು 2024ರ ಜನವರಿ ಅಂದರೆ ಮಕರ ಸಂಕ್ರಾಂತಿಯ ಬೆನ್ನಿಗೆ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅದರಲ್ಲಿ ಭಾಗಿಯಾಗುವ ಮತ್ತು ಅದನ್ನು ವೀಕ್ಷಿಸುವ ಮಹಾಭಾಗ್ಯ ಭರತಖಂಡದ ಎಲ್ಲರಿಗೂ ಒದಗಿ ಬರಲಿ ಎಂದು ಸ್ವಾಮೀಜಿ ಆಶಿಸಿದ್ದಾರೆ.ಈ ಕುರಿತು ತಾವು ಶ್ರೀಕೃಷ್ಣ ಹಾಗೂ ಶ್ರೀ ರಾಮ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಸ್ವಾಮೀಜಿ ಹೇಳಿದ್ದಾರೆ.
ಮಹತ್ವಕಾಂಕ್ಷೆಯ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಬುಧವಾರ ಮಂದಿರದ ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶಿಲಾನ್ಯಾಸ ನೆರವೇರಿಸಿದ್ದರು.
ಪೇಜಾವರ ಶ್ರೀಗಳನ್ನು ಭೇಟಿಯಾದ ಮುಸ್ಲಿಂ ನಿಯೋಗ: ಶ್ರೀಗಳ ನಿಲುವು ಬೆಂಬಲಿಸಿದ ಸಂಸದ ಹೆಗಡೆ!
ಪೇಜಾವರ ಶ್ರೀಗಳಿಂದ ಕೃಷ್ಣಪ್ರಸಾದ ಅರ್ಪಣೆ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಗರ್ಭಗುಡಿ ಶಿಲಾನ್ಯಾಸ ಸಂದರ್ಭದಲ್ಲಿ ಹಾಜರಿದ್ದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣಗೈದರು. ಉಡುಪಿ ಶ್ರೀ ಕೃಷ್ಣ ದೇವರ ಪ್ರಸಾದ ಹಾಗೂ ಸಾಲಿಗ್ರಾಮ ಶಿಲೆಗಳು ಮತ್ತು ನವರತ್ನ, ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು. ಇದೇ ವೇಳೆ ಯೋಗಿ ಆದಿತ್ಯನಾಥ್ ಮತ್ತು ಕೇಶವಪ್ರಸಾದ್ ಮೌರ್ಯ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.
ವಿಶ್ವೇಶತೀರ್ಥರ ಕನಸು
ರಾಮಜನ್ಮಭೂಮಿ ಹೋರಾಟದ ಉದ್ದಕ್ಕೂ ಮುಂಚೂಣಿಯಲ್ಲಿದ್ದ ಪೇಜಾವರ ಮಠದ ಹಿರಿಯ ಯತಿಗಳಾಗಿದ್ದ ವಿಶ್ವೇಶತೀರ್ಥ ಶ್ರೀಪಾದರು, ಮಂದಿರ ಕುರಿತಾದ ತೀರ್ಪು ಬರುವ ವೇಳೆ ಬದುಕಿದ್ದರು. ರಾಮಮಂದಿರ ನಿರ್ಮಾಣ ಅವರ ಜೀವನದ ಕನಸಾಗಿತ್ತು. ಹಿರಿಯ ಶ್ರೀಗಳ ಕಾಲಾನಂತರ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ರಾಗಿ ಶ್ರೀ ವಿಶ್ವಪ್ರಸನ್ನ ತೀರ್ಥರು ಮುಂದುವರೆದಿದ್ದಾರೆ. ಶ್ರೀರಾಮ ಮತ್ತು, ಉಡುಪಿಯ ಕೃಷ್ಣ ದೇವರ ನಡುವಿನ ಸಂಬಂಧ ಈ ಮೂಲಕ ಮುಂದುವರೆದಿದೆ.