
ಕೊಪ್ಪಳ (ಅ.09): ಈಗ ಸಿಬಿಐ ಎದುರಿಸುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಕರೆದುಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗ ಆರೋಪಿ ಸಹ ಆಗಿದ್ದಾರೆ. ಅಲ್ಲದೆ ಸಿಬಿಐ ಎದುರಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರು ಬಿಜೆಪಿ ಕರೆದುಕೊಳ್ಳುತ್ತಾರೆ ಎನ್ನುವುದು ಶುದ್ಧಸುಳ್ಳು.
ಹಾಗೊಂದು ವೇಳೆ ಅವರು, ಸಿಬಿಐಯಲ್ಲಿ ಖುಲಾಸೆಯಾಗಿ ಬಂದು, ಆರೋಪಗಳಿಂದ ಮುಕ್ತವಾದರೆ ಆಗ ಅವರು ಬರುವುದಾದರೆ ನೋಡಬಹುದು. ಆದರೆ, ಈಗ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಹವಾಲಾ, ಅಕ್ರಮ ಆಸ್ತಿಯ ಸಂಬಂಧ ಜೈಲಿಗೆ ಹೋಗಿ ಬಂದರೂ ಶಿವಕುಮಾರ್ ಅವರಿಗೆ ಬುದ್ಧಿ ಬಂದಿಲ್ಲ ಎಂದರು.
ಅನೇಕ ದಿನಗಳಿಂದಲೂ ಕೂಡ ವಿನಯ್ ಕುಲಕರ್ಣಿ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.