* ಎ, ಬಿ ಶ್ರೇಣಿ ಬರುವ ಮನೆಗೂ ‘ಸಿ’ ಶ್ರೇಣಿಯೆಂದು ಉಲ್ಲೇಖ
* ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
* ಗ್ರಾಮ ಲೆಕ್ಕಾಧಿಕಾರಿ ಕೊಟ್ಟ ದಾಖಲೆ ಅನ್ವಯ ಗ್ರೇಡ್ ಕೊಡಬೇಕು
ಸಂಜೀವಕುಮಾರ ಹಿರೇಮಠ
ಹೊಳೆಆಲೂರ(ಡಿ.19): ಕಳೆದ ತಿಂಗಳು ನಿರಂತರವಾಗಿ ಸುರಿದ ಅಕಾಲಿಕ ಮಳೆಗೆ(Untimely Rain) ಮನೆಗಳು ಧರೆಗುರುಳಿ, ಅಪಾರ ಹಾನಿ ಸಂಭವಿಸಿತ್ತು. ಮಳೆಯಿಂದ ಉಂಟಾದ ನಷ್ಟದ ಬಗ್ಗೆ ವರದಿ(Report) ನೀಡಬೇಕಾದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು, ಅವೈಜ್ಞಾನಿಕ ವರದಿ ಸಲ್ಲಿಸುವ ಮೂಲಕ ಸಂತ್ರಸ್ತರಿಗೆ(Victims) ಅನ್ಯಾಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಳೆಗೆ ಸಂಪೂರ್ಣವಾಗಿ ನೆಲಕ್ಕುರುಳಿದ ಮನೆಗೆ ರಾಜ್ಯ ಸರ್ಕಾರವು(Government of Karnataka) 5 ಲಕ್ಷ, ಅರ್ಧ ಬಿದ್ದ ಮನೆಗೆ 2.50 ಲಕ್ಷ, ಅಲ್ಪಸ್ವಲ್ಪ ಬಿದ್ದ ಮನೆಗೆ 50 ಸಾವಿರ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ಬಂದಿತ್ತು. ಆದರೆ ಇಲ್ಲಿಯ ಅಧಿಕಾರಿಗಳು ವೈಜ್ಞಾನಿಕವಾಗಿ ಪರಿಶೀಲಿಸದೇ ಎ, ಬಿ ಗ್ರೇಡ್ ಬರುವ ಮನೆಗಳಿಗೂ ಸಹಿತ ‘ಸಿ’ ಗ್ರೇಡ್ ಎಂದು ನಮೂದಿಸಲಾಗಿದೆ. ಇದು ಗ್ರಾಮಸ್ಥರ(Villagers) ಆಕ್ರೋಶಕ್ಕೆ ಕಾರಣವಾಗಿದೆ.
undefined
ಅಸೂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಸೂಟಿ, ಮೇಗೂರು, ಮೇಲ್ಮಠ, ಕರಮುಡಿ ಗ್ರಾಮಗಳಲ್ಲಿ ಕಳೆದ ತಿಂಗಳಲ್ಲಿ ಸತತ ಮಳೆಗೆ ಹಲವು ಮನೆಗಳು ಧರಾಶಾಹಿಯಾಗಿದ್ದವು. ಕೆಲವರ ಮನೆಗಳು ಅರೆಬರೆ ಬಿದ್ದು ಹೋಗಿದ್ದವು. ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿ ಬಿದ್ದ ಮನೆಗಳನ್ನು ಸರ್ವೇ(Survey) ಮಾಡಿ ಮೇಲಧಿಕಾರಿಗಳಿಗೆ ಮನೆಯ ಭಾವಚಿತ್ರ, ಯಜಮಾನ, ಪಹಣಿ ಕೊಟ್ಟಿದ್ದರು. ಆದರೂ ರೋಣ ತಹಸೀಲ್ದಾರ್ ಪರಿಶೀಲಿಸಿ ಎ, ಬಿ, ಸಿ ಗ್ರೇಡ್ ನೀಡಿ ಸಂತ್ರಸ್ತರ ಕಣ್ಣೊರೆಸುವ ಕೆಲಸ ಮಾಡಬೇಕಿತ್ತು. ತಹಸೀಲ್ದಾರರು ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿ ಕೊಟ್ಟ ದಾಖಲೆ ಅನ್ವಯ ಗ್ರೇಡ್ ಕೊಡಬೇಕು. ಇಲ್ಲವೇ ಖುದ್ದು ಸ್ಥಳ ಪರಿಶೀಲನೆ ಮಾಡಿ ಗ್ರೇಡ್ ಕೊಡಬೇಕಿತ್ತು. ಆದರೆ ಇವೆರಡನ್ನೂ ಮಾಡದೇ ಕಚೇರಿಯಲ್ಲೇ ಕುಳಿತು ಅವೈಜ್ಞಾನಿಕವಾಗಿ ಗ್ರೇಡ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
Untimely Rain Effect: ಬೆಳೆ ಹಾನಿ ಹೆಚ್ಚಿನ ಪರಿಹಾರ ಶೀಘ್ರ ಕೊಡುವಂತೆ ರೈತರ ಪಟ್ಟು
ಮನೆ ನೆಲಕ್ಕುರುಳಿದ್ದರಿಂದ ಕೆಲವು ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕೆಲವರು ತಗಡಿನ ಶೆಡ್ ಹಾಕಿಕೊಂಡಿದ್ದಾರೆ. ಬಿದ್ದ ಮನೆಗಳಿಗೆ ಸರ್ಕಾರ ಕೊಡುವ ಪರಿಹಾರದಲ್ಲಿ(compensation) ಮನೆ ನಿರ್ಮಿಸಬೇಕು ಎನ್ನುವ ಆಲೋಚನೆಯಲ್ಲಿ ಸಂತ್ರಸ್ತರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಲೋಪ ಎಸಗಿದ್ದಾರೆ. ಇದು ಸಂತ್ರಸ್ತರ ಕಣ್ಣಂಚಲ್ಲಿ ನೀರು ತರಿಸಿದೆ. ಮನೆ ಸಂಪೂರ್ಣ ಬಿದ್ದಿದೆ. ಹಾಗಾಗಿ ಪೂರ್ಣ ಪರಿಹಾರ ದೊರೆಯಲಿದೆ ಎಂದು ಗ್ರಾಮಲೆಕ್ಕಾಧಿಕಾರಿ ಬಂದಾಗ ಭರವಸೆ ನೀಡಿದ್ದರು. ಆದರೆ ಗ್ರೇಡ್ ನೀಡುವಲ್ಲಿ ಹೆಚ್ಚು ಕಡಿಮೆ ಮಾಡಿದ್ದಾರೆ ಎನ್ನುತ್ತಾರೆ ಸಂತ್ರಸ್ತರು.
ಅಧಿಕಾರಿಗಳಿಂದ ಅನ್ಯಾಯ:
ಅಕಾಲಿಕ ಮಳೆಗೆ ಮನೆ ಸಂಪೂರ್ಣವಾಗಿ ನೆಲಕಚ್ಚಿತ್ತು. ಇದರಿಂದಾಗಿ ಬೇರೆ ಕಡೆ ತಗಡಿನ ಶೆಡ್ ಹಾಕಿಕೊಂಡಿದ್ದೇವೆ. ನಮಗೆ ಎ ಮತ್ತು ಬಿ ಗ್ರೇಡ್ ಕೊಡುತ್ತೇವೆಂದು ಅಧಿಕಾರಿಗಳು ಸಮಾಧಾನಪಡಿಸಿದ್ದರು. ಆದರೆ ಅಧಿಕಾರಿಗಳು ‘ಸಿ’ ಗ್ರೇಡ್ ನೀಡಿ ಅನ್ಯಾಯ ಮಾಡಿದ್ದಾರೆ ಎಂದು ಸಂತ್ರಸ್ತ ಸಿದ್ದಲಿಂಗಯ್ಯ ಅರಳಿಕಟ್ಟಿಮಠ ಅಳಲು ತೋಡಿಕೊಂಡರು.
ಅಸೂಟಿ ಗ್ರಾಪಂನ ಅಸೂಟಿ, ಮೇಗೂರು, ಮೇಲ್ಮಠ, ಕರಮುಡಿ ಗ್ರಾಮಗಳಲ್ಲಿ ಮಳೆಗೆ ಸಾಕಷ್ಟುಮನೆಗಳು ಬಿದ್ದಿವೆ. ಇನ್ನು ಹಲವರ ಮನೆಗಳ ಪರಿಶೀಲನೆ ನಡೆದಿಲ್ಲ. ಅಧಿಕಾರಿಗಳು ಗ್ರೇಡ್ ನೀಡುವಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ರೋಣ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಅಂತ ಅಸೂಟಿ ಗ್ರಾಪಂ ಅಧ್ಯಕ್ಷೆ ಪಾರವ್ವ ಕಮಲಕಟ್ಟಿ ತಿಳಿಸಿದ್ದಾರೆ.
Karnataka Rains: ಅಕಾಲಿಕ ಮಳೆಗೆ ಹತ್ತಿ ಬೆಳೆಗಾರರ ಬದುಕು ಮೂರಾಬಟ್ಟೆ..!
ಫೋಟೋ ತೆಗೆದು, ಅಗತ್ಯ ದಾಖಲಾತಿಗಳನ್ನು(Records) ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅಧಿಕಾರಿಗಳು ಎಲ್ಲ ಮನೆಗಳಿಗೂ ‘ಸಿ’ ಗ್ರೇಡ್ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಅಂತ ಅಸೂಟಿ ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್. ಗಿರಿಯಪ್ಪಗೌಡ್ರ ಹೇಳಿದ್ದಾರೆ.
ಮನೆ ಹಾನಿಯಾದ ಬಗ್ಗೆ ಸರ್ಕಾರವು ಅಧಿಕಾರಿಗಳಿಗೆ ಸಮರ್ಪಕವಾಗಿ ಪರಿಶೀಲನೆ ನಡೆಸಲು ಸೂಚಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ರೋಣ ತಹಸೀಲ್ದಾರ್ ಕಚೇರಿಯ ಮುಂಭಾಗ ಧರಣಿ ನಡೆಸಲಿದ್ದೇವೆ ಅಂತ ಸಂತ್ರಸ್ತ ಶಿವಕಾಂತಗೌಡ ರೊಟ್ಟಿ ತಿಳಿಸಿದ್ದಾರೆ.