ಮದ್ಯದಂಗಡಿಗೆ ವಿರೋಧ: ಸುಳ್ಯದಲ್ಲಿ ಕುರ್ಚಿ, ನಾಮಫಲಕ ಕಿತ್ತೆಸೆದು ಪ್ರತಿಭಟನೆ..!

By Girish Goudar  |  First Published Nov 5, 2022, 1:54 PM IST

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ನಡೆದ ಘಟನೆ 


ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ನ.05):
ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ಇಂದು(ಶನಿವಾರ) ನಡೆದಿದೆ. 

ಆಕ್ರೋಶಿತರು ಮದ್ಯದಂಗಡಿ ಬಳಿ ಇದ್ದ ಕುರ್ಚಿ, ನಾಮಫಲಕ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರು ಮತ್ತು ಮದ್ಯದಂಗಡಿ ಪರ ಇದ್ದವರ ಮಧ್ಯೆ ಮಾತಿನ ಚಕಮಕಿ ನಡೆದು ನೂಕಾಟ-ತಳ್ಳಾಟ ನಡೆದಿದೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ನಿಯಂತ್ರಣವಾಗಿದ್ದು, ಈ ವೇಳೆ ಕ್ಷಣ ಕಾಲ ಉದ್ನಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಸಚಿವ ಎಸ್.ಅಂಗಾರ ಸೂಚನೆಯಂತೆ ಮದ್ಯದಂಗಡಿ ತಾತ್ಕಾಲಿಕ ಬಂದ್ ಮಾಡಲಾಗಿದೆ. ಮತ್ತೆ ತೆರೆದಲ್ಲಿ ಎಲ್ಲಾ ಅನಾಹುತಗಳಿಗೂ ಜಿಲ್ಲಾಡಳಿತವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. 

Tap to resize

Latest Videos

ಪೊಲೀಸರ ಖಾಕಿ ಬಣ್ಣ ಮೊದಲು ಆವಿಷ್ಕಾರಗೊಂಡದ್ದು ಕನ್ನಡ ನಾಡಲ್ಲಿ..!

ಮಹಿಳೆಯರ ಸಹಿತ ಬೃಹತ್ ಸಂಖ್ಯೆಯಲ್ಲಿ ಜನ ಸೇರಿ ಪ್ರತಿಭಟನೆ ನಡೆಸಿದ್ದು, ಊರಿನ ಗ್ರಾಮಸ್ಥರು, ಮದ್ಯ ವಿರೋಧಿ ಹೋರಾಟ ಸಮಿತಿ, ಪಕ್ಕದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ವಿಶೇಷ ಗ್ರಾಮ ಸಭೆಯಲ್ಲೂ ವಿರೋಧ ವ್ಯಕ್ತಪಡಿಸಿದ್ದರೂ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ಏಕಾಏಕಿ ತೆರೆಯಲಾಗಿದ್ದು, ಮಾಹಿತಿ ದೊರೆತು ಊರಿನ ಗ್ರಾಮಸ್ಥರು, ಮದ್ಯವಿರೋಧಿ ಹೋರಾಟ ಸಮಿತಿಯವರು, ಪಕ್ಕದ ಗ್ರಾಮಸ್ಥರು, ಅಲ್ಲಿನ ಮದ್ಯದಂಗಡಿ ವಿರೋಧಿ ಸಮಿತಿಯವರು ಮದ್ಯದಂಗಡಿ ಬಳಿಗೆ ಧಾವಿಸಿ ಪ್ರತಿಭಟನೆ ನಡೆಸಿದ್ದಾರೆ. 

ಕಳೆದ ಕೆಲವು ತಿಂಗಳಿನಿಂದ ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ಆರಂಭವಾಗುವುದನ್ನು ತಡೆಯಲು ಹೋರಾಟ ನಡೆಸಲಾಗುತಿತ್ತು. ಆದರೆ ಇಂದು ಬಾರ್ & ರೆಸ್ಟೋರೆಂಟ್ ಆರಂಭವಾಗಿದ್ದು, ಹೋರಾಟಗಾರರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿ ಜಮಾಯಿಸಿದ್ದರು. 

ಮದ್ಯದಂಗಡಿ ಬಂದ್ ಮಾಡಲು ಬಾರ್ ಕಡೆಯವರನ್ನು ಸ್ಥಳೀಯ ಪ್ರಮುಖರು ಮನವೊಲಿಸಲು ಯತ್ನಿಸಿದ ವೇಳೆ  ಮದ್ಯದಂಗಡಿ ಪರ ಬಂದವರು ಮುಖಂಡರ  ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಕ್ಷಣಕಾಲ ಉದ್ನಿಗ್ನ ವಾತಾವರಣ ನಿರ್ಮಾಣಗೊಂಡ ಘಟನೆಯೂ ನಡೆದಿದೆ. ಕೊನೆಗೆ ಸಚಿವ ಎಸ್. ಅಂಗಾರ ಅವರ ಸೂಚನೆಯಂತೆ  ಹಿರಿಯ ಅಧಿಕಾರಿಗಳು ಸೂಚನೆ ನೀಡಿ ಮದ್ಯದಂಗಡಿ ಬಂದ್ ಮಾಡುವಂತೆ ಬಾರ್ ಮಾಲೀಕರಿಗೆ ಸೂಚಿಸಿದ್ದಾರೆ. ಅದರಂತೆ ಬಾರ್ ತಾತ್ಕಾಲಿಕ ಬಂದ್ ಮಾಡಲಾಯಿತು. ಅದರಂತೆ ಗ್ರಾಮಸ್ಥರು ಮರಳಿದರು. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳದಲ್ಲಿದ್ದು, ಬಂದೊಬಸ್ತ್ ಏರ್ಪಡಿಸಿದ್ದರು.
 

click me!