ಉಡುಪಿಯ ಮಣಿಪಾಲದಲ್ಲಿ ಯುವತಿ ಕುಡಿದು ರಂಪಾಟ ಮಾಡಿದ್ದಾಳೆ ಎಂದು ಆರೋಪಿಸಿ ಗಂಡಸರ ಗುಂಪು ಯುವತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಆಕೆ ಕುಡಿದಿರಬಹುದು ಮತ್ತು ಹೋಟೆಲ್‌ನಲ್ಲಿ ಗಲಾಟೆ ಮಾಡಿಯೂ ಇರಬಹುದು, ಆದರೆ ಆಕೆಯ ಮೇಲೆ ಹಲ್ಲೆ ನಡೆಸಿದ್ದು ಸರಿಯಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
ಉಡುಪಿ(ನ.05): ಮಣಿಪಾಲದಲ್ಲಿ ಹಲವಾರು ಉತ್ತಮ ವಿದ್ಯಾಲಯಗಳಿವೆ. ಇದೇ ಕಾರಣಕ್ಕೆ ದೇಶದ ಮೂಲೆಮೂಲೆಯಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಮಣಿಪಾಲ್‌ಗೆ ಬರುತ್ತಾರೆ. ಇಲ್ಲಿನ ಸಂಸ್ಕೃತಿಯೂ ವಿವಿಧತೆಯನ್ನು ಇದೇ ಕಾರಣಕ್ಕೆ ಪಡೆದುಕೊಂಡಿದೆ. ಕರಾವಳಿ ಭಾಗದಲ್ಲಿ ಆಗಾಗ ಕೇಳಿ ಬರುವ ನೈತಿಕ ಪೊಲೀಸ್ ಗಿರಿಯ ಪ್ರಕರಣಗಳು ಮಣಿಪಾಲ್‌ನಲ್ಲಿ ಕಡಿಮೆಯೇ. ಆದರೆ ಯುವತಿಯೊಬ್ಬಳು ಕುಡಿದು ಹೋಟೆಲ್‌ನಲ್ಲಿ ಗಲಾಟೆ ಮಾಡಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಪಿಜ್ಜಾ ಹೋಟೆಲ್ ಸಿಬ್ಬಂದಿ ಆಚೆ ಹಾಕಿದ್ದಾರೆ. ಆಕೆ ಮತ್ತು ಆಕೆಯ ಜತೆಗಿದ್ದ ಸ್ನೇಹಿತ ಇದನ್ನು ಪ್ರಶ್ನಿಸಿದ್ದಾರೆ. ಅವರು ಹೊರಟು ಹೋಗಿದ್ದರೆ ಅಥವಾ ಹೋಟೆಲ್‌ನವರು ಸಮಾಧಾನವಾಗಿ ಘಟನೆಯನ್ನು ತಿಳಿಗೊಳಿಸಿದ್ದರೆ ಯಾವ ಅಹಿತಕರ ದೃಶ್ಯವೂ ಘಟಿಸುತ್ತಿರಲಿಲ್ಲ. ಆದರೆ ಹೋಟೆಲ್ ಮತ್ತು ಹುಡುಗಿಯ ಜಗಳದ ನಡುವೆ ಬಂದ ಜನರು ಆಕೆಯ ಮೇಲೆ ನೀರು ಸುರಿದು, ಹೆಣ್ಣು ಎಂಬ ಕರುಣೆಯನ್ನೂ ತೋರದೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಆಕೆ ಕುಡಿದಿರುವುದು ನಿಜವಿರಬಹುದು, ಮತ್ತು ಹೋಟೆಲ್ ಸಿಬ್ಬಂದಿ ಜತೆಗೆ ಜಗಳವನ್ನೂ ಆಡಿರಬಹುದು. ಸಾರ್ವಜನಿಕವಾಗಿ ಗಲಾಟೆ ಮಾಡಿದರೆ ಪೊಲೀಸರಿಗೆ ಕರೆಮಾಡಿ, ಮಹಿಳಾ ಸಿಬ್ಬಂದಿ ಆಕೆಯನ್ನು ಕರೆದುಕೊಂಡು ಹೋಗುವುದು ನ್ಯಾಯ. ಆದರೆ ಅಲ್ಲಿದ್ದ ಜನರೇ ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಹತ್ತಾರು ಗಂಡಸರು ಕುಡಿದು ತೂರಾಡುತ್ತಿದ್ದರೂ ಸಾರ್ವಜನಿಕರು ಈ ರೀತಿ ಥಳಿಸುವುದಿಲ್ಲ, ಹೆಣ್ಣು ಕುಡಿದಿದ್ದಾಳೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರಾ ಎಂದೂ ಕೆಲವರು ಪ್ರಶ್ನೆ ಎತ್ತಿದ್ದಾರೆ. ಕುಡಿದು ಸಾರ್ವಜನಿಕವಾಗಿ ಜಗಳ ಆಡುವುದು ಅಕ್ಷರಷಃ ತಪ್ಪು, ಆದರೆ ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಬೇಕೆ ಹೊರತು ಕಾನೂನು ಕೈಗೆತ್ತಿಕೊಂಡಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ಜನ ಕಳೆದುಕೊಂಡಿದ್ದಾರಾ ಎಂದೂ ಕೆಲವರು ಪ್ರಶ್ನಿಸಿದ್ದಾರೆ.
undefined
ಈ ಘಟನೆ ಮಣಿಪಾಲದ ಡಿಸಿ ಆಫೀಸ್ ರಸ್ತೆಯಲ್ಲಿ ನಿನ್ನೆ (ಶುಕ್ರವಾರ) ತಡರಾತ್ರಿ ನಡೆದಿದೆ. ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿಯೊಂದಿಗೆ ಯುವತಿ ಕಿರಿಕ್ ಮಾಡಿಕೊಂಡಿದ್ದಾಳೆ. ಈ ಮಧ್ಯೆ ಪಾನಮತ್ತ ಯುವತಿಯ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಲಾಗಿದೆ. ಯುವತಿಯ ಮೇಲೆ ಜನರು ಸಾಮೂಹಿಕವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಹಲ್ಲೆ ಮಾಡಿರುವ ಆರೋಪಿಗಳ ಮೇಲೆ ಯಾವುದೇ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ.
ಪದೇ ಪದೇ ಬಕೆಟ್‌ಗಟ್ಟಲೆ ನೀರನ್ನು ಯುವತಿಯ ಮೈಮೇಲ್ ಒಬ್ಬ ವ್ಯಕ್ತಿ ಸುರಿಯುತ್ತಾನೆ. ಎರಡನೇ ಬಾರಿ ಆಕೆಯ ಮುಖಕ್ಕೆ ಜೋರಾಗಿ ರಾಚುತ್ತಾನೆ. ಈ ರೀತಿ ಮಾಡುವುದರಿಂದ ಕುಡಿದಿರುವುದು ಇಳಿಯುವುದಿಲ್ಲ ಎಂಬ ಕನಿಷ್ಟ ಜ್ಞಾನ ಈ ನೈತಿಕ ಪೊಲೀಸನಿಗೆ ಇಲ್ಲ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಎಲ್ಲಾ ನಿಮ್ಮ ಮೇಲೆ ದಾಳಿ ಮಾಡುತ್ತಿದ್ದರೆ ವಾಪಸ್ ಹಲ್ಲೆಗೆ ಮುಂದಾಗುವುದು ಮನುಷ್ಯ ಸಹಜ ಗುಣ. ಜತೆಗೆ ಆಕೆ ಮೊದಲೇ ಪಾನಮತ್ತಳಾಗಿದ್ದಳು. ಅವಳು ಕೂಡ ವಾಪಸ್ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಆಕೆ ಹಲ್ಲೆಗೆ ಮುಂದಾಗಿರುವುದು ಮಾತ್ರ ಪೊಲೀಸರಿಗೆ ಕಾಣುತ್ತದೆಯೇ? ಯಾವ ಕನ್ನಡಕದ ಮೂಲಕ ಪೊಲೀಸರು ಘಟನೆಯನ್ನು ನೋಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿದೆ.
ಶಾಲೆಗಳಲ್ಲಿ ಧ್ಯಾನ: ಶಿಕ್ಷಣ ಸಚಿವರ ಆದೇಶಕ್ಕೆ ವೈಜ್ಞಾನಿಕ ಆಧಾರ ಇದೆಯೇ?, ಡಾ. ಭಂಡಾರಿ ಪ್ರಶ್ನೆ
ಇನ್ನು ಯುವತಿಯನ್ನು ಯಾವ ರೀತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆಕೆ ಕಂಠಪೂರ್ತಿ ಕುಡಿದಿದ್ದರಿಂದ ನಿಲ್ಲಲಾಗದೇ ಯುವತಿ ಪದೇ ಪದೇ ರಸ್ತೆಯಲ್ಲಿ ಬೀಳುತ್ತಿದ್ದಳು. ಇನ್ನು ತನ್ನ ಜೊತೆಗಿದ್ದ ಯುವಕನಿಗೂ ಚಪ್ಪಲಿಯಿಂದ ಏಟು ಕೊಟ್ಟಿದ್ದಾಳೆ. ಕೊನೆಗೆ ಮಣಿಪಾಲ ಪೊಲೀಸರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ.
ಇಡೀ ಘಟನೆ ನಡೆಯುವಾಗ ಪೊಲೀಸ್ ಸಿಬ್ಬಂದಿಯೊಬ್ಬ ಸುಮ್ಮನೇ ನೋಡುತ್ತ ನಿಂತಿರುವುದು ವಿಡಿಯೋದಲ್ಲಿ ಕಾಣುತ್ತದೆ. ಜಗಳ ಬಿಡಿಸುವ ಗೋಜಿಗೆ ಹೋಗದೆ ಸುಮ್ಮನೆ ನಿಂತಿದ್ದಾರೆ. ಯುವತಿಯ ಮೇಲೆ ಹಲ್ಲೆ ಮಾಡೋದನ್ನು ತಡೆಯೋದು ಪೊಲೀಸರು ಜವಾಬ್ದಾರಿ. ಆದರೆ, ಪೊಲೀಸರು ಮಾತ್ರ ತಮ್ಮ ಜವಾಬ್ದಾರಿಯನ್ನ ಮರೆತಿದ್ದಾರೆ. ಮಹಿಳಾ ಸಿಬ್ಬಂದ ಕೂಡ ಸ್ಥಳಕ್ಕೆ ಬಂದಿಲ್ಲ. ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇದೇ ರೀತಿಯ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುವ ಸಾಧ್ಯತೆಯಿದೆ. ಮಣಿಪಾಲ್ ಉಡುಪಿಯ ಉದ್ಯಮದ ಕೇಂದ್ರವಾಗಿದೆ. ಈ ರೀತಿಯ ಘಟನೆಗಳು ಆರ್ಥಿಕವಾಗಿಯೂ ಹೊಡೆತ ಕೊಡುತ್ತದೆ.